ಕೇಂದ್ರ ಸರಕಾರ ಎಲ್ಲ ಕ್ಷೇತ್ರಗಳಲ್ಲೂ ವಿಫಲ: ವೀರಪ್ಪ ಮೊಯ್ಲಿ
ಉಡುಪಿ, ಅ.26: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬರುವ ಮೊದಲು ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಆರ್ಥಿಕ, ಸಾಮಾಜಿಕ ಹಾಗೂ ರಕ್ಷಣೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಸಂಪೂರ್ಣ ಸೋಲನ್ನು ಕಂಡಿದೆ ಎಂದು ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಎಂ.ವೀರಪ್ಪ ಮೊಲಿ ಆರೋಪಿಸಿದ್ದಾರೆ.
ಉಡುಪಿ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಬುಧವಾರ ನಡೆದ ಜಿಲ್ಲಾ ಕಾಂಗ್ರೆಸ್ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು. ಮೋದಿ ಬರೀ ಭಾಷಣ ಮಾಡುವುದರಲ್ಲಿ ಪ್ರಚಂಡರು. ಇವರದ್ದು ಬರೀ ಘೋಷಣೆಯ ಸರಕಾರ. ದೇಶದ ಪ್ರಗತಿಗಾಗಿ ಕಾಂಗ್ರೆಸ್ ಸರಕಾರ ಮತ್ತೆ ಅಧಿಕಾರಕ್ಕೆ ಬರ ಬೇಕಾಗಿದೆ ಎಂದರು.
ಸಂಘಟನೆಯ ಮೇಲೆ ಪಕ್ಷದ ಮುಂದಿನ ಭವಿಷ್ಯ ಹೊಂದಿಕೊಂಡಿದೆ. ಬೂತ್ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಪಕ್ಷ ಸಂಘಟನೆಯಾಗಬೇಕು. ಆಂತರಿಕ ಶಕ್ತಿ ಹೆಚ್ಟಿದರೆ ಪಕ್ಷ ಭದ್ರವಾಗಿರುತ್ತದೆ. ಪ್ರತಿಯೊಬ್ಬ ಕಾರ್ಯಕರ್ತರಲ್ಲಿ ನಿಸ್ವಾರ್ಥ ಮನೋಭಾವ ಇರಬೇಕು. ಪಕ್ಷದ ಕಾರ್ಯಕರ್ತರ ಪ್ರಾಮಾಣಿಕತೆಯು ಮುಂದಿನ ಚುನಾವಣೆಯಲ್ಲಿ ಪಕ್ಷದ ಗೆಲುವನ್ನು ಅವಲಂಬಿಸಿರುತ್ತದೆ. ಹೀಗಾಗಿ ಪಕ್ಷದ ಪುನರ್ ಸಂಘಟನೆ ಅಗತ್ಯ ಎಂದು ವೀರಪ್ಪ ಮೊಯ್ಲಿ ತಿಳಿಸಿದರು.
ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಮಾತನಾಡಿ, ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಎಲ್ಲ ಒಪ್ಪುವಂತ ನಾಯಕರನ್ನು ಆಯ್ಕೆ ಮಾಡಬೇಕಾಗಿದೆ. ಯುವ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಿ ಮುಂದಿನ ಚುನಾವಣೆಗೆ ಸಜ್ಜು ಗೊಳಿಸುವ ಕಾರ್ಯ ಅಗತ್ಯ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ, ಬೈಂದೂರು ಶಾಸಕ ಗೋಪಾಲ ಪೂಜಾರಿ, ಮಾಜಿ ಶಾಸಕ ಗೋಪಾಲ ಭಂಡಾರಿ, ಮುಖಂಡರಾದ ಎಂ.ಎ. ಗಫೂರ್, ವರೋನಿಕಾ ಕರ್ನೆಲಿಯೋ, ಮೀನಾಕ್ಷಿ ಮಾಧವ ಬನ್ನಂಜೆ, ಬಸವ ರಾಜ್, ಎಂ.ಪಿ.ಮೊದಿನಬ್ಬ, ಕೃಷ್ಣರಾಜ ಸರಳಾಯ, ಸುನೀಲ್ ಬಂಗೇರ, ಮುರಳಿ ಶೆಟ್ಟಿ, ಅಶೋಕ್ ಕುಮಾರ್ ಕೊಡವೂರು, ನರಸಿಂಹ ಮೂರ್ತಿ, ಸತೀಶ್ ಅಮೀನ್ ಪಡುಕೆರೆ, ಅಝೀಝ್ ಹೆಜಮಾಡಿ, ಎಸ್.ನಾರಾ ಯಣ, ಸುಧೀರ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.