ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ನಾಳೆ ಸಿಐಡಿ ಕೈಸೇರಲಿರುವ ಡಿಎನ್‌ಎ ವರದಿ?

Update: 2016-10-26 16:19 GMT

ಉಡುಪಿ, ಅ.26: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂಳೆಗಳ ಡಿಎನ್‌ಎ ಪರೀಕ್ಷೆಯ ವರದಿಯು ನಾಳೆ ಸಿಐಡಿ ಪೊಲೀಸರ ಕೈ ಸೇರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣದ ತನಿಖೆಯ ಸಂದರ್ಭದಲ್ಲಿ ಹೊಳೆಯಲ್ಲಿ ಪತ್ತೆಯಾಗಿರುವ ಮೂಳೆಗಳು ಭಾಸ್ಕರ್ ಶೆಟ್ಟಿಯವರದ್ದೆ ಎಂಬುದು ತಿಳಿಯಲು ಸಿಐಡಿ ಪೊಲೀಸರು ನ್ಯಾಯಾಲಯದ ಆದೇಶದಂತೆ ಅ.31ರಂದು ಭಾಸ್ಕರ್ ಶೆಟ್ಟಿ ತಾಯಿ ಗುಲಾಬಿ ಶೆಡ್ತಿ ಮತ್ತು ಸಹೋದರ ಸುರೇಶ್ ಶೆಟ್ಟಿ ಅವರ ರಕ್ತದ ಮಾದರಿಯನ್ನು ನ್ಯಾಯಾಲಯದಲ್ಲಿ ಸಂಗ್ರಹಿಸಿ ಡಿಎನ್‌ಎ ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಿದ್ದರು. ಇದೀಗ ಅದರ ಪರೀಕ್ಷೆ ಪೂರ್ಣಗೊಂಡಿದ್ದು, ಅ.27 ಅಥವಾ 28ರಂದು ಈ ವರದಿಯು ಸಿಐಡಿ ಪೊಲೀಸರಿಗೆ ದೊರೆಯಲಿದೆ. ಈ ಮೂಳೆ ಭಾಸ್ಕರ್ ಶೆಟ್ಟಿಯವರದ್ದೆ ಅಥವಾ ಅಲ್ಲವೇ ಎಂಬುದು ಈ ವರದಿ ಬಂದ ಬಳಿಕ ತಿಳಿದು ಬರಲಿದೆ. ಸದ್ಯಕ್ಕೆ ವರದಿಯನ್ನು ಗೌಪ್ಯವಾಗಿ ಇಡಲಾಗಿದೆ.

ಜಾಮೀನು ವಿಚಾರಣೆ ಮುಂದಕ್ಕೆ

ಪ್ರಕರಣದ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿಗೆ ಜಾಮೀನು ವಿಚಾರಣೆಯನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾ ಲಯವು ಅ.28ಕ್ಕೆ ಮತ್ತೆ ಮುಂದೂಡಿ ಆದೇಶ ನೀಡಿದೆ. ಆರೋಪಿ ಪರ ವಕೀಲ ಅರುಣ್ ಬಂಗೇರ ಜಾಮೀನು ಅರ್ಜಿಯನ್ನು ಅ.4ರಂದು ಸಲ್ಲಿಸಿದ್ದು, ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ಅವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಅ.17ಕ್ಕೆ ಮುಂದೂಡಲಾಗಿತ್ತು. ಅಂದು ಸಿಐಡಿ ವರದಿ ದೊರೆಯದ ಹಿನ್ನೆಲೆಯಲ್ಲಿ ಆಕ್ಷೇಪಣೆ ಸಲ್ಲಿಸುವ ದಿನಾಂಕವನ್ನು ಅ.26ಕ್ಕೆ ಮುಂದೂಡಲಾಗಿತ್ತು.

ಇಂದು ನಡೆದ ವಿಚಾರಣೆ ಸಂದರ್ಭದಲ್ಲಿ ಡಿಎನ್‌ಎ ವರದಿ ಎರಡು ದಿನಗಳಲ್ಲಿ ಕೈಸೇರುವ ಸಾಧ್ಯತೆ ಇರುವುದರಿಂದ ಆಕ್ಷೇಪಣೆ ಸಲ್ಲಿಸಲು ಮತ್ತೆ ಎರಡು ದಿನಗಳ ಅವಕಾಶ ನೀಡಬೇಕು ಎಂದು ಶಾಂತಿಭಾಯಿ ನ್ಯಾಯಾ ಧೀಶರಲ್ಲಿ ಮನವಿ ಮಾಡಿದರು. ಅದರಂತೆ ನ್ಯಾಯಾಧೀಶರು ವಿಚಾರಣೆ ಯನ್ನು ಮುಂದೂಡಿದರು.

ಮುಂದಿನ ವಾರ ಆರೋಪಪಟ್ಟಿ ಸಲ್ಲಿಕೆ

ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಪಟ್ಟಿಯನ್ನು ಸಿಐಡಿ ತನಿಖಾ ಧಿಕಾರಿ ಚಂದ್ರಶೇಖರ್ ಮುಂದಿನ ವಾರ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣದ ಆರೋಪಿಗಳನ್ನು ಆ.7ರಂದು ಬಂಧಿಸಿರುವುದರಿಂದ ನ.7 (90ದಿನಗಳು)ರ ಒಳಗೆ ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಬೇಕಾಗಿದೆ. ಇದೀಗ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಡಿಎನ್‌ಎ ವರದಿಯ ನಿರೀಕ್ಷೆಯಲ್ಲಿ ಸಿಐಡಿ ಪೊಲೀಸರು ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News