×
Ad

ಉಡುಪಿ ಸರಕಾರಿ ಆಸ್ಪತ್ರೆಯ ಖಾಸಗೀಕರಣ: ಸಿಗದ ಉತ್ತರಗಳು

Update: 2016-10-26 22:06 IST

ಉಡುಪಿ, ಅ.26: ಸುಮಾರು ಎರಡು ತಿಂಗಳ ಕಣ್ಣುಮುಚ್ಚಾಲೆಯ ಬಳಿಕ ಇದೀಗ ಎಲ್ಲಾ ನಿಚ್ಚಳವಾಗಿದೆ. ಕಳೆದ ಸುಮಾರು ಎಂಟು ದಶಕಗಳಿಗೂ ಅಧಿಕ ಸಮಯದಿಂದ ಉಡುಪಿ ಜಿಲ್ಲೆ ಮಾತ್ರವಲ್ಲ ಆಸುಪಾಸಿನ ಜಿಲ್ಲೆಗಳ ಬಡವರ ಪಾಲಿಗೆ ‘ಸಂಜೀವಿನಿ’ಯಂತಿದ್ದ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಎಂದೇ ಕರೆಯಲಾಗುವ ‘ಹಾಜಿ ಅಬ್ದುಲ್ಲಾ ಶುಶ್ರೂಷಾಲಯ’ವನ್ನು ಇದೀಗ ಖಾಸಗಿಯವರ ಸುಪರ್ದಿಗೆ ಒಪ್ಪಿಸಲಾಗಿದೆ.

ಮೂಲತ: ಉಡುಪಿಯವರೇ ಆದ ಈಗ ಎನ್‌ಆರ್‌ಐ ಉದ್ಯಮಿಯಾಗಿ ರುವ ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷ ಬಿ.ಆರ್.ಶೆಟ್ಟಿ ಅವರ ಬಿ.ಆರ್.ಎಸ್. ಹೆಲ್ತ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆ ಜಿಲ್ಲೆಯ ಮೂಡನಿಡಂಬೂರು ಗ್ರಾಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೇರಿದ ಮೂರು ನಿವೇಶನಗಳ ಒಟ್ಟು 3.88 ಎಕರೆ ಜಮೀನನ್ನು 30 ವರ್ಷ ಗುತ್ತಿಗೆ ಆಧಾರದ ಮೇಲೆ (ಅಗತ್ಯ ಬಿದ್ದರೆ ಇನ್ನೂ 30 ವರ್ಷ ಮುಂದುವರಿಸಲು) ನೀಡಲು ಸರಕಾರ ಅಧಿಕೃತವಾಗಿ ಒಪ್ಪಿಕೊಂಡಿದೆ. ಈ ಬಗ್ಗೆ ಸದ್ಯವೇ ಸರಕಾರ ಹಾಗೂ ಬಿ.ಆರ್.ಶೆಟ್ಟಿ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಇಂದು ಸುದ್ದಿಗೋಷ್ಠಿಯಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಪ್ರಮೋದ್ ತನ್ನ ನಿವಾಸದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರು ಪ್ರಶ್ನೆಗಳ ಸುರಿಮಳೆಗೈದರೂ ಕೆಲವನ್ನು ಹೊರತುಪಡಿಸಿ ಉಳಿದ ಪ್ರಶ್ನೆಗಳಿಗೆ ಹಾರಿಕೆಯ ಉತ್ತರಗಳನ್ನೇ ನೀಡಿದರು.

ಜಿಲ್ಲೆಯ ಕಡುಬಡವರಿಗೆ, ವಲಸೆ ಕಾರ್ಮಿಕರಿಗೆ ಹಾಗೂ ಜನಸಾಮಾನ್ಯರಿಗೆ ಅತ್ಯುತ್ತಮ ಸೇವೆ ನೀಡುವ ಸರಕಾರಿ ಆಸ್ಪತ್ರೆಗಳಲ್ಲಿ ಇದೂ ಒಂದಾಗಿ ರಾಜ್ಯದಲ್ಲಿ ಗುರುತಿಸಿಕೊಂಡಿದೆ. ಇಲ್ಲಿ ಪ್ರತಿವರ್ಷ ಚಿಕಿತ್ಸೆ ಪಡೆಯುತ್ತಿರುವವರ ಹಾಗೂ ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವವರ ಸಂಖ್ಯೆಯನ್ನು ಗಮನಿಸಿದರೆ ಇದು ಸಾಬೀತಾಗುತ್ತದೆ. ಈ ಮಟ್ಟಿಗೆ ಮಹಿಳಾ ಆಸ್ಪತ್ರೆ ಜಿಲ್ಲೆಯ ಅತ್ಯುತ್ತಮ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲದಂತಿದೆ. ಇಷ್ಟಾದರೂ ಈ ಆಸ್ಪತ್ರೆಯನ್ನೇ ಯಾಕೆ ಖಾಸಗೀಕರಣಕ್ಕೆ ಆಯ್ಕೆ ಮಾಡಿದ್ದೀರಿ ಎಂದು ಕೇಳಿದಾಗ ಸಚಿವರ ಬಳಿ ಸಮರ್ಪಕ ಉತ್ತರವಿರಲಿಲ್ಲ.

ನೂರಾರು ಕೋಟಿ ರೂ.ವೌಲ್ಯದ ಜಾಗವನ್ನು ಯಾಕೆ 60 ವರ್ಷ ಗುತ್ತಿಗೆಗೆ ನೀಡುತಿದ್ದೀರಿ. ತಾಯ್ನಿಡಿನ ಮೇಲೆ ಮಮತೆ ಇದ್ದರೆ ಅವರು ಸೂಚಿಸಿದ ಹೆಸರಿನಲ್ಲಿ ಆಸ್ಪತ್ರೆ ಕಟ್ಟಿಸಿಕೊಂಡು ಸರಕಾರವೇ ಯಾಕೆ ನಿರ್ವಹಣೆ ಮಾಡಬಾರದು, ತನ್ನ ಜಾಗದಲ್ಲಿ ಆಸ್ಪತ್ರೆ ನಿರ್ಮಿಸುವಾಗ ದಾನಪತ್ರದಲ್ಲಿ ಕೇವಲ ಸರಕಾರಿ ಆಸ್ಪತ್ರೆಗೆ ಮಾತ್ರ ಅವಕಾಶ ಎಂದು ಹಾಜಿ ಅಬ್ದುಲ್ಲಾ ಅವರು ಹೇಳಿರುವ ಬಗ್ಗೆಯೂ ಅವರು ಸ್ಪಷ್ಟ ಉತ್ತರ ನೀಡದೇ ದಾನಪತ್ರವೇ ಕಾಣೆಯಾಗಿದೆ ಎಂದರು!

ಬಿ.ಆರ್.ಶೆಟ್ಟಿ ಅವರ ಸಂಸ್ಥೆ ನಿರ್ಮಿಸುವ 200 ಮತ್ತು 400 ಹಾಸಿಗೆಗಳ ಎರಡೂ ಆಸ್ಪತ್ರೆಗಳು ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಎಂದೇ ಹೇಳಿದರೂ ಕೊನೆಗೆ ಅವರು ನಿರ್ಮಿಸುವುದು ಸೂಪರ್ ಸ್ಪೆಷ್ಟಾಲಿಟಿ ಆಸ್ಪತ್ರೆ, ಅಲ್ಲಿ ಮಹಿಳೆಯರ ಹಾಗೂ ಮಕ್ಕಳ ವಿಭಾಗಗಳಿರುತ್ತವೆ ಎಂದರು.

ಬಿ.ಆರ್.ಎಸ್‌ಗೆ ಯಾಕೆ?

ಆಸ್ಪತ್ರೆಯನ್ನು ಖಾಸಗೀಕರಣ ಮಾಡುವುದಾದರೆ ಗ್ಲೋಬಲ್ ಟೆಂಡರ್ ಕರೆಯದೇ, ಕೇವಲ ಬಿ.ಆರ್.ಶೆಟ್ಟಿ ಅವರ ಪ್ರಸ್ತಾಪವನ್ನು ಪಡೆದು ಅವರಿಗೆ ಕಣ್ಣುಮುಚ್ಚಿ ಅಮೂಲ್ಯ ಜಾಗವನ್ನು ಲೀಸ್‌ನಲ್ಲಿ ನೀಡಲು ಕಾರಣವೇನು ಎಂದು ಪದೇ ಪದೇ ಕೇಳಿದಾಗಲೂ ಸ್ಪಷ್ಟ ಕಾರಣ ನೀಡಲಿಲ್ಲ. ರಾಜ್ಯದಲ್ಲಿ ಸರಕಾರಿ ಆಸ್ಪತ್ರೆಗಳ ಖಾಸಗೀಕರಿಸುವ ಹಿಂದಿನ ಪ್ರಯತ್ನಗಳು ತೀವ್ರ ವೈಫಲ್ಯ ಅನುಭವಿಸಿರುವುದನ್ನು ಅವರ ಗಮನಕ್ಕೆ ತಂದಾಗ, ಉಡುಪಿ ಉಳಿದ ಜಿಲ್ಲೆಗಳಂತಲ್ಲ ಎಂದು ಬಿಟ್ಟರು. ಈಗ ಮಹಿಳಾ ಆಸ್ಪತ್ರೆಯಲ್ಲಿ ಎಲ್ಲರಿಗೂ ಉಚಿತ ಚಿಕಿತ್ಸೆ ಸಿಗುವಾಗ ಕೇವಲ ಬಿಪಿಎಲ್ ಕಾರ್ಡುದಾರರಿಗೆ ಉಚಿತ ಚಿಕಿತ್ಸೆ ಸಿಕ್ಕಿದರೆ ಉಳಿದವರ ಕತೆ ಏನು ಎಂದು ಪ್ರಶ್ನಿಸಿದಾಗ, ರಾಜ್ಯ ಸರಕಾರ ‘ಯುನಿವರ್ಸಲ್’ ಕಾರ್ಡ್ ನೀಡುವ ಯೋಜನೆ ರೂಪಿಸಿದ್ದು, ಅವರಿಗೂ ಉಚಿತ ಚಿಕಿತ್ಸೆ ಸಿಗುತ್ತದೆ ಎಂದರು.

ಹಾಜಿ ಅಬ್ದುಲ್ಲಾ ಹೆಸರು ಮೊದಲ್ಯಾಕಿಲ್ಲ? 

ಆಸ್ಪತ್ರೆಗೆ ಹೆಸರು ನೀಡುವಾಗ ಹಾಜಿ ಅಬ್ದುಲ್ಲಾ ಹೆಸರು ಮೊದಲ್ಯಾಕಿಲ್ಲ. ಅವರೇ ಈ ಆಸ್ಪತ್ರೆಯ ನಿಜವಾದ ವಾರಸುದಾರರು ಎಂದರೆ ಅದಕ್ಕೂ ಸಚಿವರು ಉತ್ತರಿಸಲಿಲ್ಲ. ಅಬ್ದುಲ್ಲಾ ಅವರ ದಾನಪತ್ರ, ವಿಲ್ ‘ನಾಪತ್ತೆ’ಯಾಗಿರುವ ವಿಷಯವನ್ನೂ ಅವರು ಬಹಿರಂಗ ಪಡಿಸಿದರು.

ಸರಕಾರದೊಂದಿಗೆ ಮಾಡಿಕೊಂಡ ಒಪ್ಪಂದ ಹೊರತಾಗಿಯೂ ಇಂಥ ಖಾಸಗಿ ಸಂಸ್ಥೆಗಳು ಎಲ್ಲಾ ನಿಬಂಧನೆಗಳನ್ನು ಮೀರಿದ ಹತ್ತಾರು ದೃಷ್ಟಾಂತಗಳು ಜಿಲ್ಲೆಯಲ್ಲೇ ಇರುವಾಗ ಇಲ್ಲಿ ಖಾಸಗಿ ಸಂಸ್ಥೆ ಬಡವರಿಗೆ ಉಚಿತ ಚಿಕಿತ್ಸೆ ನೀಡುವ ಭರವಸೆ ಏನಿದೆ ಎಂದು ಕೇಳಿದಾಗ, ಇದಕ್ಕಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಮೇಲ್ವಿಚಾರಣಾ ಸಮಿತಿಯೊಂದು ಇರಲಿದೆ ಎಂದರು.

ಆದರೆ ಸರಕಾರಿ ಅಧಿಕಾರಿಗಳು ಸಚಿವರು, ಶಾಸಕರು, ಜನಪ್ರತಿನಿಧಿಗಳು ಹೇಳಿದಂತೆ ಕೇಳುವಾಗ, ನಿಜವಾಗಿಯೂ ಬಡವರಿಗೆ ನ್ಯಾಯ ಯಾರು ಕೊಡಿಸುತ್ತಾರೆ ಎಂದರೆ ಅವರು ಸರಿಯಾದ ಉತ್ತರ ನೀಡಲಿಲ್ಲ. ಖಾಸಗಿಯವರಿಂದ ನೇಮಕಗೊಳ್ಳುವ ವೈದ್ಯರು, ನರ್ಸ್‌ಗಳು ಹಾಗೂ ಸಿಬ್ಬಂದಿಗಳು ಬಡವರ ಸೇವೆಯನ್ನು ನಿರ್ವಂಚನೆಯಿಂದ ಮಾಡುವರೇ ಎಂದಾಗ ನಸುನಗೆ ಬೀರಿದರು.

ಒಟ್ಟಿನಲ್ಲಿ ಬಡವರನ್ನು ದೊರೆಯಂತೆ ಕಾಣುವ ಸರಕಾರಿ ವ್ಯವಸ್ಥೆಯೊಂದು ಖಾಸಗಿಯವರ ಕೈಗೆ ಹೋದಾಗ, ನಿಜವಾದ ಬಡವರ ‘ಸ್ಥಿತಿ’ ಹಾಗೂ ‘ಗತಿ’ ಏನಾಗಲಿದೆ ಎಂಬುದಕ್ಕೆ ಕಾಲವೇ ಉತ್ತರ ನೀಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News