×
Ad

ಸಮುದ್ರತೀರದಿಂದ 10 ಕಿ.ಮೀ. ಹೊರಗೆ ನಿರ್ಮಾಣಯೋಗ್ಯ ಮರಳು: ಭೂ ಸರ್ವೇಕ್ಷಣಾ ಇಲಾಖೆ

Update: 2016-10-27 18:50 IST

ಮಂಗಳೂರು, ಅ.27: ಸಮುದ್ರ ತೀರದಿಂದ 10 ಕಿ.ಮೀ. ಹೊರಗೆ ನಿರ್ಮಾಣಯೋಗ್ಯ ಮರಳನ್ನು ಈಗಾಗಲೇ ಪತ್ತೆ ಹಚ್ಚಲಾಗಿದೆ ಎಂದು ಕೇಂದ್ರ ಸರಕಾರದ ಅಧೀನದಲ್ಲಿರುವ ಭೂ ಸರ್ವೇಕ್ಷಣಾ ಇಲಾಖೆಯ ಡೈರೆಕ್ಟರ್ ಜನರಲ್ ಎಂ.ರಾಜು ಹೇಳಿದರು.

ಜಿಲ್ಲಾ ಭೂ ಸರ್ವೇಕ್ಷಣಾ ಇಲಾಖೆಯ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳ ವ್ಯಾಪ್ತಿಯಲ್ಲಿ 2,797 ಚ.ಕಿ.ಮೀ.ನಲ್ಲಿ ಆಂಧ್ರಪ್ರದೇಶ, ತಮಿಳುನಾಡು, ಪಾಂಡಿಚೇರಿ ವ್ಯಾಪ್ತಿಯಲ್ಲಿ 4,525 ಚ.ಕಿ.ಮೀ. ಭೂಗರ್ಭ ಪ್ರದೇಶದಲ್ಲಿ ನಿರ್ಮಾಣಯೋಗ್ಯ ಮತ್ತು ಕಾರ್ಬೊನೇಟ್ ಮರಳು ನಿಕ್ಷೇಪಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಹೇಳಿದರು.

ಸಾಗರ ಭೂಗರ್ಭದೊಳಗಿರುವ ಮರಳು ಸೇರಿದಂತೆ ಲವಣಗಳ ಬಳಕೆಯ ಕುರಿತು ಕೇಂದ್ರ ಸರಕಾರ ಉತ್ಸುಕವಾಗಿದ್ದು, ಈ ಕುರಿತು ಕೇಂದ್ರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀತಿ ನಿರೂಪಣೆಯ ಹಂತದಲ್ಲಿದೆ. ಆದರೆ ಸದ್ಯಕ್ಕೆ ಭೂ ಸರ್ವೇಕ್ಷಣಾ ಇಲಾಖೆಗೆ ಸೇರಿದ ಯಂತ್ರಗಳು ಸಾಗರ ಮಟ್ಟದಿಂದ ಕೇವಲ 3 ಮೀ. ಆಳವನ್ನಷ್ಟೇ ಕೊರೆಯುವ ಸಾಮರ್ಥ್ಯ ಹೊಂದಿವೆ. ಇದರಿಂದ ಭೂಮಿಯಡಿಯ ನಿಕ್ಷೇಪಗಳ ಸಮಗ್ರ ಮಾಹಿತಿ ದೊರೆಯುವುದಿಲ್ಲ. ಅದಕ್ಕಾಗಿ ಹೊಸ ತಂತ್ರಜ್ಞಾನದ ಮೂಲಕ ಕೊರೆಯುವ ಯಂತ್ರವನ್ನು ಬಳಕೆ ಮಾಡಲು ಉದ್ದೇಶಿಸಿದ್ದು, ಈ ಹೊಸ ಯಂತ್ರ 30 ಮೀ. ಆಳದವರೆಗೂ ಕೊರೆಯುವ ಸಾಮರ್ಥ್ಯ ಹೊಂದಿರುತ್ತದೆ. ಈ ಪ್ರಕ್ರಿಯೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿದ್ದು, ಜಾಗತಿಕ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ನಂತರ ಲವಣ ನಿಕ್ಷೇಪಗಳ ನಿಖರ ಹಾಗೂ ಸಮಗ್ರ ಮಾಹಿತಿ ಪಡೆಯಲು ಸಾಧ್ಯ ಎಂದು ಹೇಳಿದರು.

ಮರಳು ಸೇರಿದಂತೆ ಲವಣ ನಿಕ್ಷೇಪಗಳನ್ನು ಗುರುತಿಸಿ ಮಾಹಿತಿ ನೀಡುವುದು ಮಾತ್ರ ಭೂ ಸರ್ವೇಕ್ಷಣಾ ಇಲಾಖೆಯ ಹೊಣೆಗಾರಿಕೆ. ಲವಣಗಳನ್ನು ತೆಗೆಯುವ ಕಾರ್ಯವನ್ನು ಕೇಂದ್ರ ಸರಕಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಡೆಸಲಿದೆ ಎಂದು ರಾಜು ತಿಳಿಸಿದರು.

ಗುಜರಾತ್ ವ್ಯಾಪ್ತಿಯ ಸಾಗರ ಭೂಗರ್ಭದ 31,954 ಚ.ಕಿ.ಮೀ.ನಲ್ಲಿ ಹಾಗೂ ಪೂರ್ವ ಕರಾವಳಿ ವ್ಯಾಪ್ತಿಯಲ್ಲಿ 1,300 ಚ.ಕಿ.ಮೀ. ಪ್ರದೇಶದಲ್ಲಿ ಲೈಮ್ ಮಡ್ ನಿಕ್ಷೇಪ ಗುರುತಿಸಲಾಗಿದೆ. ಪಶ್ಚಿಮ ಮತ್ತು ಪೂರ್ವ ಕರಾವಳಿಯ ಭೂಗರ್ಭದಲ್ಲಿ ಶೇ.35 ಪ್ರಮಾಣದ ರಸಗೊಬ್ಬರ ಕಾರ್ಖಾನೆಗೆ ಬಳಸುವ ಕಚ್ಚಾವಸ್ತು ಪಾಸ್ಫೋರೈಟ್ ನಿಕ್ಷೇಪ ಗುರುತಿಸಲಾಗಿದೆ. ಸೀಸ, ಝಿಂಕ್, ತಾಮ್ರ, ಕೊಬಾಲ್ಟ್, ಚಿನ್ನ, ಬೆಳ್ಳಿ ಇತ್ಯಾದಿ ಅಪರೂಪದ ಖನಿಜಗಳನ್ನೊಳಗೊಂಡ ಸೀ ಫ್ಲೋರ್ ಮ್ಯಾಸಿವ್ ಸಲ್ಫೈಡ್ (ಎಸ್‌ಎಂಎಸ್)ಗಳನ್ನು ಅಂಡಮಾನ್ ಸಮುದ್ರಗರ್ಭದಲ್ಲಿ ಗುರುತಿಸಲಾಗಿದೆ. ಬರಲಿರುವ ಹೊಸ ತಂತ್ರಜ್ಞಾನದಿಂದ ಇನ್ನಷ್ಟು ನಿಖರವಾಗಿ ನಿಕ್ಷೇಪಗಳನ್ನು ಗುರುತಿಸಲಾಗುವುದು ಎಂದರು.

ಭೂ ಸರ್ವೇಕ್ಷಣಾ ಇಲಾಖೆ ನೀಡುವ ಮಾಹಿತಿಗಳನ್ನು ಕೇಂದ್ರ ಸರಕಾರದ ಭೂ ವಿಜ್ಞಾನ ಸಚಿವಾಲಯ, ರಕ್ಷಣಾ ಸಚಿವಾಲಯ, ಒಎನ್‌ಜಿಸಿ (ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಶನ್ ಲಿಮಿಟೆಡ್) ಬಳಕೆ ಮಾಡಿಕೊಳ್ಳಲಿವೆ. ಆದರೆ ತೈಲ, ಅನಿಲ, ರೇಡಿಯೋಆಕ್ಟಿವ್ ನಿಕ್ಷೇಪಗಳ ಪತ್ತೆ ಕಾರ್ಯ ಭೂ ಸರ್ವೇಕ್ಷಣಾ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಅದರ ಜವಾಬ್ದಾರಿಯನ್ನು ಒಎನ್‌ಜಿಸಿಗೆ ನೀಡಲಾಗಿದೆ ಎಂದು ಅವರು ಹೇಳಿದರು.

ಇಲಾಖೆಯ ಡೆಪ್ಯುಟಿ ಡೈರೆಕ್ಟರ್ ಜನರಲ್ ವಿ.ದೇವದಾಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News