ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಮೆಮ್ಸ್ ಲ್ಯಾಬ್’ ಉದ್ಘಾಟನೆ

Update: 2016-10-27 13:53 GMT

ಮೂಡುಬಿದಿರೆ, ಅ.27: ಮಿಜಾರ್‌ನಲ್ಲಿರುವ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ಸಜ್ಜುಗೊಳಿಸಲಾಗಿರುವ ‘ಮೈಕ್ರೋ ಇಲೆಕ್ಟ್ರೊ ಮೆಕ್ಯಾನಿಕಲ್ ಲ್ಯಾಬ್ (ಮೆಮ್ಸ್ ಲ್ಯಾಬ್)ನ್ನು ಲೋಕಾರ್ಪಣೆಗೊಳಿಸಲಾಯಿತು.

ಕೇಂದ್ರ ರಕ್ಷಣಾ ಸಚಿವಾಲಯದ ಮಾಜಿ ವೈಜ್ಞಾನಿಕ ಸಲಹೆಗಾರ ಪದ್ಮವಿಭೂಷಣ ಡಾ.ವಾಸುದೇವ ಕೆ.ಆತ್ರೆ ಲ್ಯಾಬ್‌ನ್ನು ಉದ್ಘಾಟಿಸಿ, ಆಟೊಮೊಬೈಲ್, ಆರೋನ್ಯಾಟಿಕ್ಸ್, ಮೊಬೈಲ್, ವ್ಯವಸಾಯ, ರಕ್ಷಣೆ, ಆರೋಗ್ಯ, ಬಯೋ ಮೆಡಿಕಲ್, ಸಿವಿಲ್ ಸೇರಿದಂತೆ ಹಲವಾರು ರಂಗಗಳಲ್ಲಿ ಮಹತ್ವದ ಕೊಡುಗೆ ನೀಡಬಲ್ಲ ಮೈಕ್ರೋ ಇಲೆಕ್ಟ್ರೊ ಮೆಕ್ಯಾನಿಸಂ ತಾಂತ್ರಿಕತೆಯು ಜಗತ್ತಿನಲ್ಲಿ ಕ್ರಾಂತಿಯನ್ನು ಉಂಟುಮಾಡುತ್ತಿದೆ ಎಂದು ಹೇಳಿದರು.

ರಕ್ತ ಪರೀಕ್ಷೆಗಾಗಿ ಮಿ.ಮೀ. ಲೆಕ್ಕದಲ್ಲಿ ರಕ್ತ ಸೆಳೆಯುವ ಕಾಲ ಹೋಗಿದೆ. ಒಂದು ಬಿಂದು ರಕ್ತ ತೆಗೆದು 10 ನಿಮಿಷಗಳಲ್ಲಿ ಫಲಿತಾಂಶ ನೀಡುವ ಕಾಲ ಬಂದಿದೆ. ಕೂದಲಿಗಿಂತಲೂ ಸೂಕ್ಷ್ಮ ಮೈಕ್ರೋ ಚಿಪ್‌ನ್ನು ದೇಹದಲ್ಲಿ ಅಳವಡಿಸಿಬಿಟ್ಟರಾಯಿತು. ದೇಹದ ಆರೋಗ್ಯ ಪರಿಸ್ಥಿತಿ ತಿಳಿದು, ಅದಕ್ಕೆ ತಕ್ಕ ಔಷಧ ನೀಡುವಂಥ ಕಾಲ ಬಂದಿದೆ. ಹೀಗೆಯೇ ವಿವಿಧ ರಂಗಗಳಲ್ಲಿ ಮೆಮ್ಸ್ ಲ್ಯಾಬ್‌ಗಳು ಮಹತ್ವದ ಪಾತ್ರವಹಿಸುತ್ತಿವೆ. ಇದನ್ನು ಸದುಪಯೋಗಪಡಿಸಿಕೊಳ್ಳುವ ಆಸಕ್ತಿ, ಜಾಣ್ಮೆಯನ್ನು ಇಂಜಿನಿಯರಿಂಗ್ ವಿದ್ಯಾರ್ಥಿಗಳು ತೋರಬೇಕಾಗಿದೆ ಎಂದು ಅವರು ಹೇಳಿದರು.
 
ವಿಭಾಗ ಮುಖ್ಯಸ್ಥ, ಮೆಮ್ಸ್ ಲ್ಯಾಬ್ ಪ್ರಭಾರಿ ಡಾ.ಡಿ.ವಿ. ಮಂಜುನಾಥ್ ತಮ್ಮ ಪ್ರಸ್ತಾವನೆಯಲ್ಲಿ ಲ್ಯಾಬ್ ಸ್ಥಾಪನೆ ಮತ್ತು ಪ್ರಯೋಜನಗಳ ಬಗ್ಗೆ ವಿವರಣೆ ನೀಡಿದರು.

ಟ್ರಸ್ಟಿ ವಿವೇಕ ಆಳ್ವ, ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ವೇದಿಕೆಯಲ್ಲಿದ್ದರು. ಕಾನ್ಪುರ ಐಐಟಿ ಪೂರ್ವ ಸಂದರ್ಶಕ ಪ್ರಾಧ್ಯಾಪಕ, ಬೆಂಗಳೂರಿನ ಅಡಾ ಗ್ರೂಪ್‌ನ ಪೂರ್ವ ನಿರ್ದೇಶಕ ಡಾ. ಪ್ರಕಾಶ್ ಮಂಗಳಗಿರಿ ದಿಕ್ಸೂಚಿ ಭಾಷಣ ಮಾಡಿದರು.

ಆಳ್ವಾಸ್ ಎಜುಕೇಶನ್ ಫೌಂಡೇಶನ್‌ನ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಪದ್ಮವಿಭೂಷಣ ಡಾ.ವಾಸುದೇವ ಕೆ.ಆತ್ರೆ ಮತ್ತು ಡಾ. ಪ್ರಕಾಶ್ ಡಿ.ಮಂಗಳಗಿರಿ ಅವರನ್ನು ಗೌರವಿಸಿದರು. ಮೆಮ್ಸ್ ಲ್ಯಾಬ್ ಪ್ರಧಾನಿ ಮೋದಿಯವರ ಆಶಯಕ್ಕೆ ತಕ್ಕಂತೆ ಪ್ರಯೋಜನಕಾರಿಯಾಗಲಿದೆ. ಕಾಲೇಜಿನ ಒಳಗಿನ ಮತ್ತು ಹೊರಗಿನವರಿಗೆ ಅನುಕೂಲವಾಗಲಿದೆ. ಅದೇ ವೇಳೆ, ಈ ವ್ಯವಸ್ಥೆ ಕಾಲ ಕಾಲಕ್ಕೆ ಅಪ್‌ಗ್ರೆಡೇಶನ್ ಆಗಬೇಕಾಗಿದೆ ಎಂದು ಹೇಳಿದರು.

ಉಪನ್ಯಾಸಕಿ ಶ್ರುತಿ ನಿರೂಪಿಸಿದರು. ಉಪನ್ಯಾಸಕಿ ತಾನ್ಯಾ ಎಂ.ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News