ಕೈಬಿಟ್ಟ ಗುತ್ತಿಗೆದಾರನಿಗೆ ಮತ್ತೆ ಆದ್ಯತೆ: ಸದಸ್ಯರಿಂದ ವ್ಯಾಪಕ ಆಕ್ರೋಶ

Update: 2016-10-27 14:11 GMT

ಮೂಡುಬಿದಿರೆ, ಅ.27: ಕಾರ್ಮಿಕರಿಗೆ ಸರಿಯಾಗಿ ಸಂಬಳ ನೀಡದೆ ವಂಚಿಸುತ್ತಿದ್ದ ಶಿವಮೊಗ್ಗ ಮೂಲದ ಗುತ್ತಿಗೆದಾರನ ಕಾರ್ಮಿಕರನ್ನು ನೇಮಕ ಮಾಡಬಾರದು ಮತ್ತು ಆ ಗುತ್ತಿಗೆದಾರನ ಗುತ್ತಿಗೆಯನ್ನು ರದ್ದುಗೊಳಿಸಬೇಕೆಂದು ಹಿಂದೆ ಪುರಸಭಾ ಅಧಿವೇಶನದಲ್ಲಿ ತೀರ್ಮಾನಿಸಲಾಗಿತ್ತು. ಆದರೆ ರದ್ದುಗೊಂಡಿರುವ ಗುತ್ತಿಗೆದಾರನಿಗೆ ಮತ್ತೆ ಹೊಸ ಕಾರ್ಮಿಕರನ್ನು ನೇಮಿಸಲು ಅವಕಾಶ ನೀಡುವ ಮೂಲಕ ಗುತ್ತಿಗೆದಾರನಿಗೆ ಪುರಸಭೆಯಿಂದ ಮತ್ತೆ ಆದ್ಯತೆ ನೀಡಲಾಗಿದ್ದು, ಸಭೆಯಲ್ಲಿ ನಿರ್ಣಯವಾಗದೇ ಹೇಗೆ ಇಂತಹ ತೀರ್ಮಾನ ಕೈಗೊಂಡಿದ್ದೀರೆಂದು ಪುರಸಭಾ ಸದಸ್ಯ ರತ್ನಾಕರ ದೇವಾಡಿಗ ಗುರುವಾರ ಪುರಸಭಾ ಅಧಿವೇಶನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಪುರಸಭಾಧ್ಯಕ್ಷೆ ರೂಪಾ ಎಸ್.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಪುರಸಭೆಯ ಸಭಾಭವನದಲ್ಲಿ ಮಾಸಿಕ ಸಭೆ ನಡೆಯಿತು. ಹಿಂದೆ ಆ ಗುತ್ತಿಗೆದಾರನನ್ನು ವಿರೋಧಿಸಿ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದೇವೆ. ಅಂತಹ ಗುತ್ತಿಗೆದಾರರಿಗೆ ಬೆಂಬಲ ನೀಡಬಾರದೆಂದು ಇತರ ಸದಸ್ಯರು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ತುರ್ತು ಕಾಮಗಾರಿಗೆ ಕಾರ್ಮಿಕರ ಅಭಾವ ಇರುವುದರಿಂದ ಹೊಸ ಕಾರ್ಮಿಕರ ನೇಮಕಕ್ಕೆ ಅವಕಾಶ ನೀಡಿದ್ದೇವೆ ಎಂದು ತಿಳಿಸಿದರು.

ಪುರಸಭೆಯ ಹಳೆಯ ಎರಡು ಕಟ್ಟಡ ಹಾಗೂ ಕಲ್ಲಬೆಟ್ಟುವಿನಲ್ಲಿರುವ ಅಗ್ನಿ ಶಾಮಕ ಠಾಣೆಯಿದ್ದ ಹಳೆ ಕಟ್ಟಡವನ್ನು ಖಾಸಗಿಯವರಿಗೆ ನೀಡಿದ್ದು, ಸರಿಯಾದ ನಿರ್ವಹಣೆಯಿಲ್ಲದೆ ಅದು ಸ್ವರೂಪವನ್ನು ಕಳೆದುಕೊಳ್ಳುತ್ತಿದೆ. ಈ ಕಟ್ಟಡಗಳನ್ನು ಯಾವುದಾದರೂ ಕಚೇರಿಗಳಿಗೆ ಬಳಸಿದರೆ ಉಪಯೋಗವಾಗದೇ ಎಂದು ಸದಸ್ಯ ನಾಗರಾಜ ಪೂಜಾರಿ ಸಭೆೆಯಲ್ಲಿ ಪ್ರಸ್ತಾಪಿಸಿದರು. ತ್ಯಾಜ್ಯ ನಿರ್ವಾಹಣೆ ಗುತ್ತಿಗೆ ಕಾರ್ಮಿಕರಿಗೆ ತಾತ್ಕಲಿಕವಾಗಿ ಅಲ್ಲಿ ವ್ಯವಸ್ಥೆ ಮಾಡಲಾಗಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸಿದ ಬಳಿಕ ತೆರವುಗೊಳಿಸಲಾಗುವುದೆಂದು ಪುರಸಭಾಧಿಕಾರಿ ಶೀನ ನಾಯ್ಕ ತಿಳಿಸಿದರು.

78 ಲಕ್ಷ ರೂ. ವಿದ್ಯುತ್ ಬಿಲ್ ಬಾಕಿ

ಪುರಸಭೆಯು ಮೆಸ್ಕಾಂಗೆ 78 ಲಕ್ಷ ರೂ. ವಿದ್ಯುತ್ ಬಿಲ್ ಪಾವತಿಸಲು ಬಾಕಿಯಿದೆ. ಮೇಲಧಿಕಾರಿಗಳಿಂದ ಸೂಚನೆ ಬಂದಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಗುವುದು ಎಂದು ಮೆಸ್ಕಾಂ ಅಧಿಕಾರಿ ಸತೀಶ್ ತಿಳಿಸಿದರು. ಈ ಕುರಿತು ಸರಕಾರದ ಗಮನಕ್ಕೆ ತಂದಿದ್ದು, ಅನುದಾನ ಬಿಡುಗಡೆಗೊಂಡಲ್ಲಿ ಶೀಘ್ರ ಪಾವತಿಸಲಾಗುವುದೆಂದು ಪುರಸಭಾಧಿಕಾರಿ ತಿಳಿಸಿದರು.

ಮಹಾವೀರ ಕಾಲೇಜು ಬಳಿಯ ವಿಶಾಲನಗರದಲ್ಲಿ ಆಟೋ ಪಾರ್ಕ್‌ಗೆ ಅವಕಾಶ ನೀಡಬೇಕೆಂದು ಬಂದ ಮನವಿಯನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಪುರಸಭಾ ವ್ಯಾಪ್ತಿಯಲ್ಲಿರುವ ಆಟೊಪಾರ್ಕ್‌ಗಳಲ್ಲಿ ಹಲವಾರು ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸಲು ಹಿಂದೆ ನಿರ್ಣಯಿಸಲಾದ ಸಂಖ್ಯೆ ನೀಡುವ ಕ್ರಮ ಜಾರಿಯಾಗಬೇಕು. ಹೊಸ ಆಟೊಪಾರ್ಕ್‌ಗಳನ್ನು ಸದ್ಯ ಘೋಷಿಸುವುದು ಬೇಡ ಎಂದು ಸದಸ್ಯ ಪಿ.ಕೆ ಥೋಮಸ್ ಸಲಹೆ ನೀಡಿದರು.

ಪುರಸಭಾ ವ್ಯಾಪ್ತಿಯಲ್ಲಿ ಜಂಗಲ್ ಕಟ್ಟಿಂಗ್ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಸದಸ್ಯ ದಿನೇಶ್ ಪೂಜಾರಿ ಆರೋಪಿಸಿದರು. ಜಂಗಲ್‌ಕಟ್ಟಿಂಗ್ ಯಂತ್ರಗಳ ಕೊರತೆಯಿರುವುದರಿಂದ ತೊಂದರೆಯಾಗಿದೆ. ಕೌನ್ಸಿಲ್ ಸಮ್ಮತಿಸಿದರೆ ಹೆಚ್ಚುವರಿ ಯಂತ್ರಗಳ ವ್ಯವಸ್ಥೆ ಮಾಡಬಹುದೆಂದು ಪರಿಸರ ಅಧಿಕಾರಿ ಶಿಲ್ಪಾ ಹೇಳಿದರು.

ಪುರಸಭಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಉಪಾಧ್ಯಕ್ಷೆ ಶಕುಂತಳಾ ದೇವಾಡಿಗ, ಇಂಜಿನಿಯರ್ ದಿನೇಶ್, ಕಂದಾಯ ಅಧಿಕಾರಿ ಧನಂಜಯ್ ಸಭೆೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News