ಉಡುಪಿ ಬಿಷಪ್‌ರ ದೀಪಾವಳಿ ಸಂದೇಶ

Update: 2016-10-27 14:56 GMT

ಉಡುಪಿ, ಅ.27: ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅ.ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರು ನಾಡಿನ ಜನತೆಗೆ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದ್ದಾರೆ. ಅವರ ಸಂದೇಶದ ಪೂರ್ಣಪಾಠ ಹೀಗಿದೆ.

‘ಕತ್ತಲನ್ನು ದೂರುವುದರ ಬದಲು ಒಂದು ದೀಪವನ್ನು ಹೊತ್ತಿಸು’ ಎಂಬುದು ಹಳೆಯ ಗಾದೆ ಮಾತು. ಅನೀತಿ, ಅನ್ಯಾಯ, ಅಜ್ಞಾನ, ಮರಣ ಇವು ಕತ್ತಲ ಲೋಕಕ್ಕೆ ಸೇರಿದ ಸಂಕೇತಗಳು. ಆದುದರಿಂದ ಉಪನಿಷತ್ತಿನ ‘ಅಸತೋಮಾ ಸದ್ಗಮಯ, ತಮಸೋಮ ಜ್ಯೋತಿರ್ಗಮಯ, ಮೃತ್ಯೋರ್ಮ ಅಮೃತಂ ಗಮಯ’ ಎಂಬ ಪ್ರಾರ್ಥನೆ ಅಪ್ಯಾಯಮಾನವಾಗಿದೆ. ಅಸತ್ಯದಿಂದ ಸತ್ಯದೆಡೆಗೂ, ತಮಸ್ಸಿನಿಂದ ಪ್ರಭೆಯೆಡೆಗೂ, ಮೃತ್ಯುವಿನಿಂದ ಅಮರತ್ವದೆಡೆಗೂ ನಮ್ಮನ್ನು ಕರೆದೊಯ್ಯು ಎಂಬುದು ಸೃಷ್ಠಿಕರ್ತನಾದ ಭಗವಂತನಲ್ಲಿ ಮಾನವನ ಅವಿರತ ಮೊರೆಯಾಗಿದೆ.

ಮನೆ ಮನೆಯಲಿ, ಮನ ಮನದಲಿ ಜ್ಯೋತಿ ಬೆಳಗಲಿ, ಜ್ಞಾನ ಜ್ಯೋತಿ ಬೆಳಗಲಿ ಎಂಬ ಗೀತೆಯಂತೆ ಬೆಳಕಿನ ಹಬ್ಬ ದೀಪಾವಳಿ ಮನೆ, ಮನಗಳ ಕತ್ತಲೆಯನ್ನು ಹೋಗಲಾಡಿಸಲಿ. ಮಾನವನ ಜೀವನದಲ್ಲಿ ಸತ್ಯದ ಬೆಳಕಿನ ಮತ್ತು ಅಮರತ್ವದ ಮಹತ್ವವನ್ನು ದೀಪಾವಳಿ ತಿಳಿಸುತ್ತದೆ. ತಾನು ಬೆಳಗಿ ಬೇರೆಯ ವರನ್ನು ಬೆಳಗಿಸುವ ಶಕ್ತಿ ದೀಪಕ್ಕಿದೆ. ಅಂತರಂಗದಲ್ಲಿರುವ ಕತ್ತಲೆಯನ್ನೋಡಿಸಿ, ಬೆಳಕಿನ ಪ್ರಣತಿಯ ಹಚ್ಚಿ ದೀಪ ಬೆಳಗಿಸುವ ಮೂಲಕ ಬೆಳಗುವ ದಿವ್ಯ ಜ್ಯೋತಿಯ ಹಬ್ಬ ದೀಪಾವಳಿ. ಎಲ್ಲೆಲ್ಲೂ ಜ್ಞಾನ, ನಿರ್ಮಲ ಆನಂದ, ಶುದ್ಧ ಮನಸ್ಸಿನ ಪ್ರೀತಿಯ ಬೆಳಗಿಸುವ ಸಂಕೇತವಾಗಿ ಆಚರಿಸಲ್ಪಡುವ ಹಬ್ಬವಿದು.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇವಾಲಯ ಮತ್ತು ಮನೆಗಳನ್ನು ಅನೇಕ ದಿನಗಳವರೆಗೆ ದೀಪಗಳಿಂದ ಅಲಂಕರಿಸಲಾಗುತ್ತದೆ. ಯಾವ ಮನೆಗಳಲ್ಲಿ ದೀಪಗಳು ಬೆಳಗುತ್ತವೋ ಆ ಕುಟುಂಬಕ್ಕೆ ಸುಭಿಕ್ಷೆ, ಸಮೃದ್ಧಿ, ಸುಖ ಸಂತೋಷ ದೊರಕುತ್ತದೆ ಎಂಬ ನಂಬಿಕೆಯೊಡನೆ ಮನೆ-ಮನಗಳಲ್ಲಿರುವ ದುಃಖ, ದುಷ್ಟಶಕ್ತಿಗಳನ್ನು ಹೊಡೆದೋಡಿಸಿ, ಉತ್ತಮ ಬೆಳಕನ್ನು ಹರಿಸುವ ಮೂಲಕ ಸಮೃದ್ಧಿ, ಸನ್ಮಂಗಳ ಉಂಟು ಮಾಡುವುದು ಎಂಬ ಭರವಸೆ ದೀಪಾವಳಿಯದ್ದು.
ದೀಪಾವಳಿ ಹಬ್ಬದ ಆಚರಣೆ ಮಾನವನಲ್ಲಿ ಸುಜ್ಞಾನವನ್ನೂ, ಸಾತ್ವಿಕ ಗುಣವನ್ನೂ ಪ್ರಜ್ವಲಗೊಳಿಸಲಿ. ಅಂತರಂಗ ಮತ್ತು ಬಹಿರಂಗ ಶುದ್ಧಿ ಈ ಹಬ್ಬಕ್ಕೆ ರಂಗನ್ನು ಕೊಡಲಿ. ಶುಭ್ರ ಮನಸ್ಸೆಂಬ ತುಂಬು ಹಣತೆಯಲ್ಲಿ, ಪ್ರೀತಿಯೆಂಬ ಬತ್ತಿ ಹೊಸೆದು, ಮಮತೆಯ ಎಣ್ಣೆ ಸುರಿದು, ನಿರ್ಮಲ ಮನಸ್ಸೆಂಬ ಬೆಂಕಿ ಹಚ್ಚಿದಾಗ, ಕಾಣುವ ಪ್ರಭೆಯು ಎಲ್ಲರ ಮನಗಳನ್ನು ಬೆಳಗಿ ಬಾಳನ್ನು ಚಿರಂತನ ಪರಂಜ್ಯೋತಿಯಾಗಿ ಅನವರತ ಬೆಳಗುತ್ತಿರಲಿ ಎಂಬುದೇ ನಮ್ಮ ಹಾರೈಕೆ.
ನಾಡಿನ ಸಮಸ್ತ ಬಂಧುಬಾಂಧವರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News