ಕಿಲ್ಲೆ ಮೈದಾನದಲ್ಲಿಯೇ ಸಂತೆಗೆ ಅವಕಾಶ ನೀಡುವಂತೆ ನಗರ ಕಾಂಗ್ರೆಸ್‌ನಿಂದ ಎಸಿಗೆ ಮನವಿ

Update: 2016-10-27 15:06 GMT

ಪುತ್ತೂರು, ಅ.27: ಪುತ್ತೂರು ನಗರಸಭೆಯ ಪಕ್ಕದ ಕಿಲ್ಲೆ ಮೈದಾನ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಶತಮಾನಗಳಿಂದ ಸೋಮವಾರ ನಡೆದುಕೊಂಡು ಬರುತ್ತಿರುವ ವಾರದ ಸಂತೆಯನ್ನು ಎರಡು ತಿಂಗಳ ಹಿಂದೆ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಿದರೂ ಅದಕ್ಕೆ ಪೂರಕ ಜನಸ್ಪಂದನೆ ವ್ಯಕ್ತವಾಗದ ಹಿನ್ನಲೆಯಲ್ಲಿ ವಾರದ ಸಂತೆಯನ್ನು ಕಿಲ್ಲೆ ಮೈದಾನದಲ್ಲಿಯೇ ನಡೆಸಬೇಕೆಂದು ಆಗ್ರಹಿಸಿ ಪುತ್ತೂರು ನಗರ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಗುರುವಾರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ನೇತೃತ್ವದಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಗಣೇಶ್ ರಾವ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸೂರಜ್ ಶೆಟ್ಟಿ, ಹಿಂದುಳಿದ ವರ್ಗಗಳ ಘಟಕದ ಪುತ್ತೂರು ನಗರಾಧ್ಯಕ್ಷ ರೋಶನ್, ನಗರ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಾದಿಕ್ ಬರೆಪ್ಪಾಡಿ, ಪುರಸಭಾ ಮಾಜಿ ಸದಸ್ಯ ಇಸಾಕ್ ಸಾಲ್ಮರ, ನಗರ ಕಾಂಗ್ರೆಸ್ ಕಾರ್ಯದರ್ಶಿ ಚಂದ್ರಶೇಖರ್ ಪಡೀಲು, ಕಾಂಗ್ರೆಸ್ ಪ್ರಮುಖರಾದ ಜತ್ತಪ್ಪ ಗೌಡ ಒಳಮೊಗ್ರು, ಸುದೇಶ್ ಚಿಕ್ಕಪುತ್ತೂರು, ಬಾಲಕೃಷ್ಣ ರೈ ನೆಲ್ಲಿಕಟ್ಟೆ, ಅಬ್ದುರ್ರಝಾಕ್, ಮೋಹನ್ ರೈ ಬನ್ನೂರು ಶ್ರೀಧರ್ ಭಂಡಾರಿ, ದಿವಾಕರ ರೈ ಕಡ್ಲಿಮಾರ್ ಮೊದಲಾದವರು ನಿಯೋಗದಲ್ಲಿ ಉಪವಿಭಾಗಾಧಿಕಾರಿಗಳು ಕಚೇರಿಗೆ ತೆರಳಿ ಕಚೇರಿಯ ಮ್ಯಾನೇಜರ್‌ರ ಮೂಲಕ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಸಂತೆ ಸ್ಥಳಾಂತರದಿಂದಾಗಿ ಹಲವು ರೀತಿಯ ವ್ಯತಿರಿಕ್ತ ಬದಲಾವಣೆಗಳು ಆಗುತ್ತಿದ್ದು, ಜನತೆ ಗೊಂದಲಕ್ಕೀಡಾಗಿದ್ದಾರೆ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಡುವೆ ಸಂಘರ್ಷಕ್ಕೆ ಹಾದಿ ಮಾಡಿಕೊಟ್ಟಿದೆ. ಸಂತೆಯಲ್ಲಿ ಪಾಲ್ಗೊಳ್ಳುವ ಕೃಷಿಕರು ಹಾಗೂ ವ್ಯಾಪಾರಸ್ಥರಿಗೆ ತೀವ್ರ ಹೊಡೆತ ಬಿದ್ದಿದೆ ಎಂದು ಮನವಿಯಲ್ಲಿ ತಿಳಿಸಿರುವ ಅವರು ಎಲ್ಲಾ ವರ್ಗದ ಜನತೆಗೆ, ಸರಕಾರಿ ನೌಕರರಿಗೆ ಹಾಗೂ ಕಚೇರಿ ಕೆಲಸಕ್ಕಾಗಿ ಬರುವ ಜನತೆಗೆ ಅನುಕೂಲವಾಗುವಂತೆ ಪುತ್ತೂರಿನ ಹೃದಯ ಭಾಗದಲ್ಲಿರುವ ಕಿಲ್ಲೆ ಮೈದಾನದಲ್ಲಿಯೆ ಸೋಮವಾರದ ಸಂತೆ ವ್ಯಾಪಾರಕ್ಕೆ ಅನುವು ಮಾಡಿಕೊಡುವ ಮೂಲಕ ಗೊಂದಲಕ್ಕೆ ತೆರೆ ಎಳೆಯಬೇಕೆಂದು ಅವರು ಮನವಿ ಮೂಲಕ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News