ಒಬ್ಬರಿಂದ ಜಮೀನಿನ ಹಣ ಪಡೆದು ಬೇರೊಬ್ಬರಿಗೆ ಮಾರಾಟ
ಮಂಗಳೂರು, ಅ. 27: ಜಾಗ ಮಾರಾಟ ಮಾಡುವುದಾಗಿ 49.75 ಲಕ್ಷ ರೂ. ಪಡೆದು ಆ ಜಾಗವನ್ನು ಬೇರೊಬ್ಬರಿಗೆ ಮಾರಾಟ ಮಾಡಿ ವಂಚನೆಯ ದೂರಿನ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ನ್ಯಾಯಾಲಯವು ಪೊಲೀಸರಿಗೆ ಆದೇಶಿಸಿದೆ.
ವಂಚನೆಯ ಬಗ್ಗೆ ಮುಲ್ಕಿ, ಕೂರ್ನಾಡು ನಿವಾಸಿ ಕೀರ್ತನ್ ಶೆಟ್ಟಿ ಹಾಗೂ ಜಯಾನಂದ ಎ.ರಾವ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರಿಂದ ನ್ಯಾಯಾಲಯ ಈ ಆದೇಶ ನೀಡಿದೆ. ಬಂಟ್ವಾಳ ತಾಲೂಕು ಮೂಡ ಗ್ರಾಮದ ಭಂಡಾರಿಬೆಟ್ಟು ನಿವಾಸಿ ಜಗದೀಶ್ ಹಾಗೂ ಬಂಟ್ವಾಳ ಕಸಬಾ ಗ್ರಾಮದ ಬೈಪಾಸ್ ಜಂಕ್ಷನ್ ನಿವಾಸಿ ಮಹಾಬಲ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬಂಟ್ವಾಳ ಕಸಬಾ ಗ್ರಾಮದ ಬಡ್ಡಕಟ್ಟೆಯಲ್ಲಿರುವ 1.20 ಎಕ್ರೆ ಸ್ಥಳವನ್ನು ಜಗದೀಶ್ ಎಂಬವರು ದೂರುದಾರರಿಗೆ 2014 ಜುಲೈ 23 ರಂದು ಮಾರಾಟ ಮಾಡಲು ಕರಾರು ಮಾಡಿಕೊಂಡಿದ್ದರು. ಇದಕ್ಕಾಗಿ ಚೆಕ್, ಡಿಡಿ, ನೇರವಾಗಿ ಒಟ್ಟು 49.75 ಲಕ್ಷ ರೂ. ಜಗದೀಶ್‌ರಿಗೆ ಪಾವತಿಸಿದ್ದೆ. ಆದರೆ, ಜಗದೀಶ್ ಇದೇ ಜಾಗವನ್ನು 2016 ಮಾರ್ಚ್ 9 ರಂದು ಸುದೇಶ್ ಭಂಡಾರಿ ಅವರ ಹೆಸರಿಗೆ ಬಂಟ್ವಾಳ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟರ್ ಮಾಡಿದ್ದಾರೆ. ಈಗಾಗಲೇ ದೂರುದಾರರ ಕರಾರು ಚಾಲ್ತಿಯಲ್ಲಿ ಇದ್ದರೂ ಜಗದೀಶ್ ತನ್ನ ಸಂಬಂಧಿ ಮಹಾಬಲ ಸಫಲ್ಯರಿಗೆ ಮಾರಾಟ ಮಾಡಿ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದು, ನ್ಯಾಯಾಲಯವು ಇದೀಗ ಪ್ರಕರಣವನ್ನು ತನಿಖೆ ನಡೆಸುವಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಆದೇಶ ನೀಡಿದೆ.