ಉಡುಪಿ: ಸರಕಾರಿ ಆಸ್ಪತ್ರೆ ಖಾಸಗೀಕರಣ ವಿರೋಧಿಸಿ ಇಂದು ಪ್ರತಿಭಟನೆ
ಉಡುಪಿ, ಅ.27: ಹಾಜಿ ಅಬ್ದುಲ್ಲಾ ಸಾಹೇಬರು ದಾನ ಮಾಡಿದ ಭೂಮಿಯಲ್ಲಿರುವ ಉಡುಪಿ ಸರಕಾರಿ ಮಕ್ಕಳ ಮತ್ತು ಮಹಿಳೆಯರ ಹೆರಿಗೆ ಆಸ್ಪತ್ರೆಯ ಖಾಸಗೀಕರಣವನ್ನು ವಿರೋಧಿಸಿ ಉಡುಪಿಯ ಸರಕಾರಿ ಮಕ್ಕಳ ಹಾಗೂ ಮಹಿಳಾ ಹೆರಿಗೆ ಆಸ್ಪತ್ರೆ ರಕ್ಷಣಾ ನಾಗರಿಕ ಒಕ್ಕೂಟವು ಅ.28ರಂದು ಸಂಜೆ 4ಕ್ಕೆ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
ನಗರದ ಜೋಡುಕಟ್ಟೆಯಿಂದ ಹೊರಡುವ ಮೌನ ಮೆರವಣಿಗೆಯು ಕೆ.ಎಂ.ಮಾರ್ಗವಾಗಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಸಮಾಪನಗೊಳ್ಳಲಿದೆ. ಬಳಿಕ ಅಲ್ಲಿ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಜನರು ಅಲ್ಲದೆ ವಲಸೆ ಕಾರ್ಮಿಕರು ಮತ್ತು ಇತರ ಜಿಲ್ಲೆಗಳ ಜನರಿಗೂ ಸೇವೆ ನೀಡುತ್ತಿರುವ ಈ ಆಸ್ಪತ್ರೆಯನ್ನು ಉಳಿಸುವಲ್ಲಿ ಸಾರ್ವಜನಿಕರು ಕೈ ಜೊಡಿಸಬೇಕೆಂದು ಒಕ್ಕೂಟ ಪ್ರಕಟನೆಯಲ್ಲಿ ಮನವಿ ಮಾಡಿದೆ.
ಹೋರಾಟಕ್ಕೆ ಮುಸ್ಲಿಮ್ ಒಕ್ಕೂಟ ಬೆಂಬಲ
ಉಡುಪಿ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ರಾಜ್ಯ ಸರಕಾರ ಖಾಸಗಿಯವರಿಗೆ ಒಪ್ಪಿಸುತ್ತಿರುವುದನ್ನು ತೀವ್ರವಾಗಿ ಖಂಡಿಸಿರುವ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟವು ನಾಳೆ ನಡೆಯುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದೆ.
ಗುರುವಾರ ಉಡುಪಿ ಜಾಮಿಯ ಮಸೀದಿಯಲ್ಲಿ ನಡೆದ ಜಿಲ್ಲಾ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಣಯ ತೆಗೆದು ಕೊಳ್ಳಲಾಯಿತು. ಹಾಜಿ ಅಬ್ದುಲ್ಲಾ ಸಾಹೇಬರು ದಾನ ಮಾಡಿರುವ ಈ ಜಾಗವನ್ನು ಸರಕಾರ ಖಾಸಗಿಯವರಿಗೆ ನೀಡಬಾರದು. ಮುಖ್ಯಮಂತ್ರಿವರು ಈ ನಿರ್ಧಾರವನ್ನು ಕೂಡಲೇ ರದ್ದುಪಡಿಸಬೇಕು ಎಂದು ಒಕ್ಕೂಟ ಆಗ್ರಹಿಸಿದೆ.