ನನ್ನ ಮಗ ಎಲ್ಲಿದ್ದಾನೆ ? : ಕೇಳುವವರು ಇಲ್ಲದ ನಜೀಬ್ ತಾಯಿ ಅಳಲು
ಹೊಸದಿಲ್ಲಿ,ಅ.28: ‘‘ಹದಿಮೂರು ದಿನಗಳ ಮೇಲಾಯಿತು. ನನ್ನ ಮಗು ಎಲ್ಲಿಯೂ ಕಾಣುತ್ತಿಲ್ಲ’’ ಹೀಗೆಂದು ಅಸಹಾಯಕರಾಗಿ ಕಣ್ಣೀರು ಸುರಿಸುತ್ತಾರೆ ನಾಪತ್ತೆಯಾಗಿರುವ ಜೆ ಎನ್ ಯು ವಿದ್ಯಾಥಿ ನಜೀಬ್ ಅಹ್ಮದ್ ಅವರ ತಾಯಿ ಫಾತಿಮಾ ನಫೀರ್.ಎಬಿವಿಪಿ ಕಾರ್ಯಕರ್ತರಿಂದ ಎರಡು ವಾರಗಳ ಹಿಂದೆ ಹಲ್ಲೆಗೊಳಗಾದ ನಂತರನಜೀಬ್ ನಾಪತ್ತೆಯಾಗಿದ್ದರು. ಪ್ರತಿಯೊಂದು ಫೋನ್ ಕರೆ ಬರುವಾಗಲೂ ಅದು ತನ್ನ ಮಗನ ಕರೆ ಅಥವಾ ಆತನ ಬಗ್ಗೆ ಏನಾದರೂ ಮಾಹಿತಿ ನೀಡುವ ಕರೆಯಾಗಿರಬಹುದೆಂದು ಆ ತಾಯಿಗೆ ಅನಿಸುತ್ತಿದೆ.
ನಜೀಬ್ ತನ್ನ ಹೆತ್ತವರ ಹಿರಿಯ ಪುತ್ರ. ಆತನಿಗೆ ಇಬ್ಬರು ಸಹೊದರರು ಹಾಗೂ ಒಬ್ಬಳು ಸಹೋದರಿ ಇದ್ದಾರೆ. ತಂದೆಮೇಸ್ತ್ರಿ ಕೆಲಸ ಮಾಡುತ್ತಿದ್ದವರು ಮಾಡಿನಿಂದ ಬಿದ್ದ ನಂತರ ಹೃದಯಾಘಾತಕ್ಕೂ ಒಳಗಾಗಿ ಈಗ ಹಾಸಿಗೆ ಹಿಡಿದಿದ್ದಾರೆ. ತನ್ನ ಎಲ್ಲಾ ಮಕ್ಕಳೂ ವಿದ್ಯಾಭ್ಯಾಸ ಪಡೆಯುವಂತೆ ಫಾತಿಮಾ ನೋಡಿಕೊಂಡಿದ್ದಾರೆ. ಆಕೆಯ ಎರಡನೇ ಪುತ್ರ ಎಂ.ಟೆಕ್ ಪೂರ್ತಿಗೊಳಿಸಿದ್ದು ಯುಪಿಎಸ್ಸಿ ಪರೀಕ್ಷೆಗೆ ಹಾಜರಾಗುತ್ತಿದ್ದಾನೆ. ನಜೀಬ್ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದರೂ ಅದರಲ್ಲಿ ಯಶಸ್ಸು ಕಾಣದೆ ಕೊನೆಗೆ ಜೆ ಎನ್ ಯು ವಿನಲ್ಲಿ ಪ್ರವೇಶ ಪಡೆದಿದ್ದನು.
ತನ್ನ ಮಗ ಜೆ ಎನ್ ಯು ಸೇರುವುದು ಮೊದಲು ತಮಗಿಷ್ಟವಿಲ್ಲದೇ ಇದ್ದರೂ, ಈ ಸಂಸ್ಥೆ ಭಾರತದ ಆಕ್ಸ್ ಫರ್ಡ್ ಇದ್ದಂತೆ ಎಂದು ಹೇಳಿ ನನ್ನ ಮನವೊಲಿಸಿದ್ದ, ಎಂದು ಹೇಳುವ ಆಕೆ ತನ್ನ ಮಗ ಮುಗ್ಧ,ಆತನಿಗೆ ಎಲ್ಲವೂ ನಾನಾಗಿದ್ದೆ ಎಂದು ನೆನಪಿಸಿಕೊಲ್ಳುತ್ತಾರೆ.
ಅಕ್ಟೋಬರ್ 14 ರ ರಾತ್ರಿ 1 ಗಂಟೆಗೆ ಆತ ನನಗೆ ಕರೆ ಮಾಡಿ, ಕೆಟ್ಟ ಘಟನೆಯೊಂದು ನಡೆದಿದೆ ಹಾಗೂ ತಾನು ಸಫ್ದರ್ ಜಂಗ್ ಆಸ್ಪತ್ರೆಯಲ್ಲಿರುವುದಾಗಿ ಹೇಳಿ ನನ್ನನ್ನು ಕೂಡಲೇ ಅಲ್ಲಿಗೆ ಬರುವಂತೆ ತಿಳಿಸಿದ್ದು. ಮುಂದಿನ ಎರಡು ಗಂಟೆಗೊಳಗಾಗಿ ಕಿರಿಯ ಪುತ್ರನೊಂದಿಗೆ ನಾನು ದೆಹಲಿಯ ಬಸ್ಸನ್ನೇರಿ ಅಲ್ಲಿ 11 ಗಂಟೆಗೆ ಮಗನಿಗೆ ಕರೆ ಮಾಡಿದಾಗ ಆತ ಅದಾಗಲೇ ಹಾಸ್ಟೆಲಿಗೆ ತೆರಳಿದ್ದಾನೆಂಬ ಮಾಹಿತಿ ದೊರೆತಿತ್ತು. ಆದರೆ ಆತ ಅಲ್ಲಿರಲ್ಲ. ಆತನ ಚಪ್ಪಲಿ ಹಾಗೂ ಮೊಬೈಲ್ ಫೋನ್ ಕೋಣೆಯಲ್ಲಿತ್ತು. ಆತನಿಗೆ ನಡೆಸಿದ ಹುಡುಕಾಟ ಯಶಸ್ಸು ಕಂಡಿಲ್ಲ,’’ ಎಂದು ಆಕೆ ಕಣ್ಣೀರಿಡುತ್ತಾ ವಿವರಿಸುತ್ತಾರೆ.
ಕುಟುಂಬ ಮೂಲಗಳ ಪ್ರಕಾರ ನಜೀಬ್ ತನ್ನ ಕೋಣೆಯಲ್ಲಿ ಮಲಗಿದ್ದಾಗ ಮೂವರು ಎಬಿವಿಪಿ ಕಾರ್ಯಕರ್ತರು ಆತನ ಕೋಣೆಗೆ ಪ್ರಚಾರಾರ್ಥ ಹೊಕ್ಕಿದ್ದರೆನ್ನಲಾಗಿದೆ.ಅಲ್ಲಿ ಏನು ನಡೆಯಿತೆಂದು ತಿಳಿಯದೇ ಹೋದರೂ, ನಜೀಬ್ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆಂದು ಎಬಿವಿಪಿ ಕಾರ್ಯಕರ್ತನೊಬ್ಬ ದೂರಿದ್ದ. ಆದರೆ ಅದಕ್ಕೆ ಯಾವುದೇ ಸಾಕ್ಷ್ಯಗಳಿರಲಿಲ್ಲ. ಆದರೆ ನಿಜಾಂಶವೇನು ಎಂದು ಗೊತ್ತಿರುವ ನಜೀಬ್ ನಾಪತ್ತೆಯಾಗಿದ್ದಾನೆ. ಆದರೆ ಮೂಲಗಳ ಪ್ರಕಾರ ಎಬಿವಿಪಿ ವಿದ್ಯಾರ್ಥಿಗಳು ಹಲವು ಇತರರನ್ನು ಕರೆಸಿ ನಜೀಬ್ ನಿಗೆ ಚೆನ್ನಾಗಿ ಥಳಿಸಿದ್ದಾರೆ. ಕೆಲವರ ಪ್ರಕಾರ ಕನಿಷ್ಠ 20 ಮಂದಿ ಅವರಲ್ಲಿ ಮೂವರು ಹೊರಗಿನವರು ಹಾಸ್ಟೆಲ್ಲಿಗೆ ಬಂದು ವಾರ್ಡನ್ ಸಮ್ಮುಖದಲ್ಲೇ ನಜೀಬ್ ನಿಗೆ ಹೊಡೆದಿದ್ದಾರೆನ್ನಲಾಗಿದೆ. ನಂತರ ನಜೀಬ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಜೀಬ್ ನ ವಿರುದ್ಧ ಎಬಿವಿಪಿ ದೂರು ದಾಖಲಿಸಿದ್ದರಿಂದ ಪೊಲೀಸ್ ದಾಖಲೆಗಳಲ್ಲಿ ಆತ ಆರೋಪಿಯಾಗಿದ್ದಾನೆ. ಜೆ ಎನ್ ಯು ವಿದ್ಯಾರ್ಥಿಗಳು ನಜೀಬ್ ನ ಬಗ್ಗೆ ಚಿಂತಿತರಾಗಿದ್ದಾರೆ, ಆದರೆ ಉಪಕುಲಪತಿಗಳು ಒಂದು ಪಕ್ಷವನ್ನು ವಹಿಸಿ ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆಂದು ಕೆಲವರು ದೂರುತ್ತಿದ್ದಾರೆ.