ಬೇಬಿ ಪೌಡರ್ ನಿಂದ ಕ್ಯಾನ್ಸರ್ : ಜಾನ್ಸನ್ ಎಂಡ್ ಜಾನ್ಸನ್ ಗೆ ಮತ್ತೆ ನ್ಯಾಯಾಲಯದಲ್ಲಿ ಸೋಲು

Update: 2016-10-28 09:58 GMT

ಸೇಂಟ್ ಲೂಯಿಸ್,ಅ.28: ಜಾನ್ಸನ್ ಆ್ಯಂಡ್ ಜಾನ್ಸನ್ ಮತ್ತೆ ನ್ಯಾಯಾಲಯದಲ್ಲಿ ಸೋಲನ್ನು ಕಂಡಿದೆ. ಕಂಪನಿಯ ಬೇಬಿ ಪೌಡರ್‌ನ ನಿರಂತರ ಬಳಕೆಯಿಂದಾಗಿ ತಾನು ಅಂಡಾಶಯದ ಕ್ಯಾನ್ಸರ್‌ಗೆ ತುತ್ತಾಗಿದ್ದೇನೆ ಎಂದು ದೂರಿದ್ದ ಕ್ಯಾಲಿಫೊರ್ನಿಯಾದ ಮಹಿಳೆಗೆ ಏಳು ಕೋಟಿ ಡಾ.ಪರಿಹಾರವನ್ನು ನೀಡುವಂತೆ ಸೇಂಟ್ ಲೂಯಿಸ್‌ನ ನ್ಯಾಯಾಲಯವು ಅದಕ್ಕೆ ಆದೇಶಿಸಿದೆ.

ಕ್ಯಾಲಿಫೋರ್ನಿಯಾದ ಮೊಡೆಸ್ಟೊ ನಿವಾಸಿ ಡೆಬೋರಾ ದಾಖಲಿಸಿದ್ದ ಮೊಕದ್ದಮೆಯ ವಿಚಾರಣೆ ಸೆ.26ರಂದು ಆರಂಭಗೊಂಡಿತ್ತು. ಆಕೆಗೆ ಅಂಡಾಶಯದ ಕ್ಯಾನ್ಸರ್ ಇರುವುದು 2012ರಲ್ಲಿ ಪತ್ತೆಯಾಗಿತ್ತು. ತನ್ನ ಬೇಬಿ ಪೌಡರ್‌ನ ತಯಾರಿಕೆ ಮತ್ತು ಮಾರಾಟದಲ್ಲಿ ಬಳಕೆದಾರರ ಹಿತವನ್ನು ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯು ಕಡೆಗಣಿಸುತ್ತಿದೆ ಎಂದು ಆಕೆ ಆರೋಪಿಸಿದ್ದಳು.ನ್ಯಾಯಾಲಯ ಸರಿಯಾದ ತೀರ್ಪು ನೀಡಿರುವುದು ನಮಗೆ ಸಮಾಧಾನವನ್ನುಂಟು ಮಾಡಿದೆ. ತನ್ನ ಉತ್ಪನ್ನಗಳಿಗೂ ಅಂಡಾಶಯದ ಕ್ಯಾನ್ಸರ್‌ಗೂ ಸಂಬಂಧವಿದೆ ಎಂದು ಜಾನ್ಸನ್ ಆ್ಯಂಡ್ ಜಾನ್ಸನ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಅಗತ್ಯವಿದೆ ಎನ್ನುವುದನ್ನು ನ್ಯಾಯಾಲಯವು ಮತ್ತೊಮ್ಮೆ ದೃಢಪಡಿಸಿದೆ ಎಂದು ಡೆಬೋರಾ ಪರ ವಕೀಲ ಜಿಮ್ ಒಂಡರ್ ಹೇಳಿದರು.

ಅಂಡಾಶಯ ಕ್ಯಾನ್ಸರ್‌ಗೆ ಗುರಿಯಾಗಿರುವ ಮಹಿಳೆಯರು ಮತ್ತು ಅವರ ಕುಟುಂಬಗಳ ಬಗ್ಗೆ ನಮಗೆ ಸಹಾನುಭೂತಿಯಿದೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಿರುವ ಜಾನ್ಸನ್ ಆ್ಯಂಡ್ ಜಾನ್ಸನ್‌ನ ವಕ್ತಾರೆ ಕ್ಯಾರೋಲ್ ಗುಡ್‌ರಿಚ್ ಅವರು, ಕಂಪನಿಯ ಬೇಬಿ ಪೌಡರ್ ಸುರಕ್ಷಿತವಾಗಿದೆ ಎನ್ನುವದಕ್ಕೆ ವಿಜ್ಞಾನದ ಸಮರ್ಥನೆಯಿದೆ, ಹೀಗಾಗಿ ನಾವು ಈ ತೀರ್ಪಿನ ವಿರುದ್ಧ ವೆುೀಲ್ಮನವಿ ಸಲ್ಲಿಸಲಿದ್ದೇವೆ ಎಂದಿದ್ದಾರೆ.

ಈ ವರ್ಷದ ಆರಂಭದಲ್ಲಿ ಸೇಂಟ್ ಲೂಯಿಸ್‌ನ ನ್ಯಾಯಾಲಯದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿಯೂ ಜಾನ್ಸನ್ ಆ್ಯಂಡ್ ಜಾನ್ಸನ್ ಸೋಲು ಅನುಭವಿಸಿತ್ತು ಮತ್ತು ಒಟ್ಟೂ 12.70ಕೋ.ಡಾ.ಪರಿಹಾರ ನೀಡುವಂತೆ ನ್ಯಾಯಾಲಯವು ಆದೇಶಿಸಿತ್ತು.

ಅಮೆರಿಕದಲ್ಲಿ ಈ ವರ್ಷ ನಿರೀಕ್ಷಿಸಲಾಗಿರುವ 17 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳಲ್ಲಿ ಸುಮಾರು 22,000 ಪ್ರಕರಣಗಳು ಅಂಡಾಶಯ ಕ್ಯಾನ್ಸರ್‌ದ್ದಾಗಿರಲಿವೆ ಎನ್ನುವುದು ಒಂದು ಅಂದಾಜು.

ಸುಮಾರು 2,000 ಮಹಿಳೆಯರು ಅಮೆರಿಕದ ವಿವಿಧ ನ್ಯಾಯಾಲಯಗಳಲ್ಲಿ ಇಂತಹುದೇ ಪ್ರಕರಣಗಳನ್ನು ದಾಖಲಿಸಿದ್ದಾರೆ ಮತ್ತು ಸಾವಿರಾರು ಇತರ ಪ್ರಕರಣಗಳನ್ನು ವಕೀಲರು ಪರಿಶೀಲಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News