ಬೈಕಂಪಾಡಿ ಕೈಗಾರಿಕಾ ಪ್ರದೇಶವಿನ್ನು ಕೈಗಾರಿಕಾ ನಗರ ಪ್ರಾಧಿಕಾರ!
ಮನಪಾ ಸಾಮಾನ್ಯ ಸಭೆ
ಮಂಗಳೂರು, ಅ.28: ಮಹಾನಗರ ಪಾಲಿಕೆ ವ್ಯಾಪ್ತಿಯ ಬೈಕಂಪಾಡಿ ಕೈಗಾರಿಕಾ ಪ್ರದೇಶವನ್ನು ಕೈಗಾರಿಕಾ ನಗರ ಪ್ರಾಧಿಕಾರವನ್ನಾಗಿ ಮಾಡುವ ಸಲುವಾಗಿ ಪಾಲಿಕೆಯಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಕೋರಿ ಇಂದು ನಡೆದ ಮನಪಾ ಸಾಮಾನ್ಯ ಸಭೆಯಲ್ಲಿ ಕಾರ್ಯಸೂಚಿ ಮಂಡಿಸಲ್ಪಟ್ಟಿತು.
ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಪಕ್ಷ ಸದಸ್ಯರು ಮಾಹಿತಿಯನ್ನು ಬಯಸಿದ ಹಿನ್ನೆಲೆಯಲ್ಲಿ ನಗರ ಯೋಜನೆ ಸಮಿತಿಯಲ್ಲಿ ಈ ಕಾರ್ಯಸೂಚಿಯನ್ನು ವಿಲೇವಾರಿ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಕೈಗಾರಿಕಾ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ಪ್ರದೇಶ ಸೇರಿ ರಾಜ್ಯದ 8 ಕೈಗಾರಿಕಾ ಪ್ರದೇಶಗಳನ್ನು ಕೈಗಾರಿಕಾ ನಗರ ಪ್ರಾಧಿಕಾರವನಾಗಿಸಲು ರಾಜ್ಯ ಸರಕಾರ ನಿರ್ದೇಶಿಸಿದೆ. ಸ್ಥಳೀಯ ಕೈಗಾರಿಕಾ ಸಂಸ್ಥೆಗಳು ನಗರ ಪ್ರಾಧಿಕಾರದ ನಿರ್ವಹಣೆಯನ್ನು ತೋರುವ ನಿಟ್ಟಿನಲ್ಲಿ ಬೈಕಂಪಾಡಿಯಲ್ಲಿ ಕೆನರಾ ಸಣ್ಣ ಕೈಗಾರಿಕಾ ಸಂಘಕ್ಕೆ ಆ ಹೊಣೆಯನ್ನು ನೀಡಲು ತೀರ್ಮಾನಿಸಲಾಗಿದೆ. ರಾಜ್ಯದ ಇಲೆಕ್ಟ್ರಾನಿಕ್ ಸಿಟಿ ಪೀಣ್ಯದಲ್ಲಿ ಈಗಾಗಲೇ ಕೈಗಾರಿಕಾ ಪ್ರಾಧಿಕಾರ ರಚನೆಯಾಗಿದೆ. ಬೈಕಂಪಾಡಿ ರಚನೆಯಾದರೆ ರಾಜ್ಯದಲ್ಲಿ ಎರಡನೆಯದ್ದಾಗಲಿದೆ ಎಂದು ಕೈಗಾರಿಕಾ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್ ಸಭೆಯಲ್ಲಿ ತಿಳಿಸಿದರು.
ವಿಪಕ್ಷ ಸದಸ್ಯ ತಿಲಕ್‌ರಾಜ್ ಮಾತನಾಡಿ, ಕಾರ್ಯಸೂಚಿಯಲ್ಲಿ ಎಷ್ಟು ಎಕರೆ ನೀಡಲಾಗುತ್ತದೆ. ಸರಕಾರ ಕೆನರಾ ಸಣ್ಣ ಕೈಗಾರಿಕೆಗೆ ಅಧಿಕಾರ ಕೊಟ್ಟ ಬಗ್ಗೆಯೂ ಮಾಹಿತಿ ಇಲ್ಲ. ಹಾಗಾಗಿ ನಗರ ಯೋಜನಾ ಸಮಿತಿಯಲ್ಲಿ ಚರ್ಚೆಯಾಗಲಿ ಎಂದು ಆಗ್ರಹಿಸಿದರು.
ಸದಸ್ಯ ಪರುಷೋತ್ತಮ ಚಿತ್ರಾಪುರ ಪ್ರತಿಕ್ರಿಯಿಸಿ, ಕೈಗಾರಿಕಾ ಪ್ರದೇಶದಲ್ಲಿ ರಸ್ತೆ, ದಾರಿದೀಪ ವ್ಯವಸ್ಥೆ ಸರಿಯಾಗಲ್ಲಿ. ಖರ್ಚು ಮಾಡಲು ಮನಪಾ ಬಜೆಟ್‌ನಲ್ಲಿ ಹಣ ಇಲ್ಲ. ಸರಕಾರದ ನಿರ್ದೇಶದನಂತೆ ಕೈಗಾರಿಕಾ ನಗರ ಪ್ರಾಧಿಕಾರವಾದರೆ ಅಭಿವೃದ್ಧಿ ಆಗಲಿದೆ ಎಂದು ಹೇಳಿದರು. ಮನಪಾ ವ್ಯಾಪ್ತಿಯ ಬೈಕಂಪಾಡಿ ಕೈಗಾರಿಕಾ ಪ್ರದೇಶದ 1407 ಎಕರೆ ಈ ಕೈಗಾರಿಕಾ ನಗರ ಪ್ರಾಧಿಕಾರಕ್ಕೆ ಒಳಪಡಲಿದೆ. ಸ್ಥಳೀಯ ಸಂಸ್ಥೆಗಳೇ ಅದರ ಅಭಿವೃದ್ಧಿಯನ್ನು ಮಾಡಬೇಕಾಗಿದ್ದು, ಸಂಗ್ರಹವಾಗುವ ತೆರಿಗೆಯಲ್ಲಿ ಶೇ. 30ರಷ್ಟನ್ನು ಮನಪಾಕ್ಕೆ ಸಲ್ಲಿಸಬೇಕಾಗಿದೆ ಎಂದು ಗೋಕುಲ್‌ದಾಸ್ ನಾಯಕ್ ಮಾಹಿತಿ ನೀಡಿದರು.
ಈ ಬಗ್ಗೆ ಸದಸ್ಯರ ಒತ್ತಾಯದ ಮೇರೆಗೆ, ನಗರ ಯೋಜನಾ ಸಮಿತಿಯಲ್ಲಿ ವಿಲೇಗೆ ಕಳುಹಿಸಲು ನಿರ್ಣಯಿಸಲಾಯಿತು.
ಎಂಆರ್‌ಪಿಎಲ್ ರಸ್ತೆ ದುರಸ್ತಿ: ಟೆಂಡರ್‌ಗೆ ಅನುಮೋದನೆ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸುರತ್ಕಲ್‌ನ ಎಂಆರ್‌ಪಿಎಲ್ ರಸ್ತೆಯ ಕಟ್ಲ ಜಂಕ್ಷನ್‌ನಿಂ ಕಾರ್ಗೋ ಗೇಟ್‌ವರೆಗೆ ಆಯ್ದ ಭಾಗಗಳಲ್ಲಿ ಡಾಮರೀಕರಣ ಕಾಮಗಾರಿಗೆ 99,87000 ರೂ. ಅಂದಾಜು ವೆಚ್ಚದ ಆಡಳಿತ ಮಂಜೂರಾತಿ ಹಾಗೂ ಟೆಂಡರ್ ಕರೆಯಲು ಪೂರ್ವಭಾವಿ ಅನುಮೋದನೆಯನ್ನು ಸಭೆಯಲ್ಲಿ ನೀಡಲಾಯಿತು.