×
Ad

ಪುರಸಭೆಕ್ಕೊಳಪಟ್ಟ ಅಂಗಡಿಗಳ ಹರಾಜು: ಕರಾರಿಗೆ ಒಪ್ಪದವರ ಠೇವಣಿ ಜಫ್ತಿ

Update: 2016-10-28 16:05 IST

ಭಟ್ಕಳ, ಅ.28: ಪುರಸಭಾ ಆಡಳಿತಕ್ಕೆ ಒಳಪಡುವ ಅಂಗಡಿ ಮಳಿಗೆಗಳ ಹರಾಜಿಗೆ ಸಂಬಂಧಿಸಿದಂತೆ ಪುರಸಭೆಯ ಅಧ್ಯಕ್ಷ ಮುಹಮ್ಮದ್ ಸಾದಿಕ್ ಮಟ್ಟಾರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಹತ್ವದ ನಿರ್ಣಯವೊಂದನ್ನು ತೆಗೆದುಕೊಳ್ಳಲಾಗಿದೆ. ಅಂಗಡಿ ಮಳಿಗೆ ಹರಾಜು ಪ್ರಕ್ರಿಯೆಯ ಎಲ್ಲ ದಾಖಲೆಗಳನ್ನು ಜಿಲ್ಲಾಧಿಕಾರಿಗೆ ಒಪ್ಪಿಸಿ ಅವರಿಂದ ಅನುಮೋದನೆ ಪಡೆಯಲು ನಿರ್ಣಯಿಸಲಾಯಿತು. ಪುರಸಭೆಯ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆಯು ಭಾರಿ ಚರ್ಚೆಗೆ ಒಳಪಟ್ಟಿದ್ದು, ಒಂದು ಸಾವಿರ ರೂ.ಗೂ ಕಡಿಮೆ ಬಾಡಿಗೆಯ ಅಂಗಡಿಗಳು 50-60 ಸಾವಿರ ರೂ.ಗೆ ಹರಾಜು ಆಗಿದ್ದು, ಕೆಲವೊಂದು ಅಂಗಡಿಗಳು ಲಕ್ಷಕ್ಕೂ ಅಧಿಕ ಮೌಲ್ಯಕ್ಕೆ ಬಿಡ್ ಆಗಿದ್ದ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿತ್ತು. ಅಂಗಡಿ ಮಳಿಗೆಗಳ ಹರಾಜಿನಲ್ಲಿ ನಿಗದಿಯಾದ ದರದಂತೆ ಬಿಡ್‌ದಾರರಿಂದ ಕರಾರು ಪತ್ರಕ್ಕೆ ಸಹಿ ಮಾಡಿಸಿಕೊಳ್ಳುವುದು. ಇದಕ್ಕೆ ಅವರು ಒಪ್ಪದೇ ಇದ್ದಲ್ಲಿ ಹರಾಜಿಗೆ ವ್ಯಯಿಸಿದ ಠೇವಣಿ ಹಣವನ್ನು ಜಫ್ತಿ ಮಾಡಿ ಮುಂದೆ ಪುರಸಭೆಯ ಯಾವುದೇ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಅವರನ್ನು ಕಪ್ಪುಪಟ್ಟಿಗೆ ಸೇರಿಸುವ ನಿರ್ಣಯವನ್ನು ಸಭೆಯಲ್ಲಿ ಅಂಗೀಕರಿಸಲಾಗಿದೆ. ಇಲ್ಲಿನ ಹಳೆಬಸ್ ನಿಲ್ದಾಣದ ಪಕ್ಕದ ಹಳೆಯ ಪುರಸಭಾ ಕಟ್ಟವನ್ನು ಕೆಡವಿ ನೂತನ ಕಟ್ಟಡವನ್ನು ನಿರ್ಮಿಸುವುದಕ್ಕೆ ಸಂಬಂಧಿಸಿದಂತೆ ಕಾನೂನು ತೊಡಕುಗಳ ಬಗ್ಗೆ ಅಧ್ಯಯನ ನಡೆಸಿ ರೂಪುರೇಷೆ ಸಿದ್ಧಪಡಿಸಲು ಸಮಿತಿಯೊಂದನ್ನು ರಚಿಸಲು ನಿರ್ಧರಿಸಲಾಯಿತು. ಸಮಿತಿಯ ವರದಿಯ ಆಧಾರದ ಮೇಲೆ ಮುಂದಿನ ಕ್ರಮವನ್ನು ಜರಗಿಸುವ ಕುರಿತು ಸಭೆ ನಿರ್ಣಯಿಸಿತು. ಪುರಸಭಾ ಉಪಾಧ್ಯಕ್ಷ ಕೆ.ಎಂ.ಅಶ್ಫಾಕ್, ಮುಖ್ಯಾಧಿಕಾರಿ ರಮೇಶ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News