×
Ad

ಅಧಿಕಾರಿಗಳ ವಿರುದ್ಧ ಸುಳ್ಯ ತಾ.ಪಂ. ಸದಸ್ಯರು ಗರಂ

Update: 2016-10-28 18:14 IST

ಸುಳ್ಯ, ಅ.28: ವಿವಿಧ ವಿಚಾರಗಳಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ವಿರುದ್ಧ ಸದಸ್ಯರು ಆಕ್ರೋಶಗೊಂಡ ಘಟನೆ ಈ ಬಾರಿಯ ತಾಲೂಕು ಪಂಚಾಯತ್ ಸಭೆಯಲ್ಲಿ ನಡೆಯಿತು.

 ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷೆ ಶುಭದಾ ರೈ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಕಾರ್ಯನಿರ್ವಾಹಣಾಧಿಕಾರಿ ಮಧುಕುಮಾರ್, ತಹಶೀಲ್ದಾರ್ ಎಂ.ಎಂ.ಗಣೇಶ್ ಮೊದಲಾದವರಿದ್ದರು.

ತಾ.ಪಂ. ಸಾಮಾನ್ಯ ಸಭೆಯಲ್ಲಿ ಹಲವು ಅಧಿಕಾರಿಗಳು ಗೈರು ಹಾಜರಾಗಿರುವುದು ಸದಸ್ಯರು ಹಾಗೂ ಕಾರ್ಯನಿರ್ವಾಹಣಾಧಿಕಾರಿಗಳನ್ನು ಕೆರಳಿಸಿತು. ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಇಲಾಖಾಧಿಕಾರಿಗಳು ಇಲ್ಲದಿರುವುದು ಆಕ್ರೋಶಕ್ಕೆ ಕಾರಣವಾಯಿತು. ಅಧಿಕಾರಿಗಳು ಸಭೆಯನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಹೀಗಾದರೆ ಇಂಥ ಸಭೆಗಳನ್ನು ನಡೆಸುವುದರಲ್ಲಿ ಅರ್ಥವಿಲ್ಲ. ಸಭೆಯನ್ನು ಹಗುರವಾಗಿ ತೆಗೆದುಕೊಳ್ಳುವುದು ಸರಿಯಲ್ಲವೆಂದು ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ ಹೇಳಿದರು. ಮುಂದುವರೆದು ಮಾತನಾಡಿದ ಕಾರ್ಯನಿರ್ವಾಹಣಾಧಿಕಾರಿ, ಅಧಿಕಾರಿಗಳಿಗೆ ಸಭೆಗೆ ಹಾಜರಾಗಲು ಅಸಾಧ್ಯವಾದಲ್ಲಿ ಮುಂಚಿತವಾಗಿ ಅಧ್ಯಕ್ಷರಿಗೆ ತಿಳಿಸಬೇಕು. ಆದರೆ ಅಧಿಕಾರಿಗಳು ಹೀಗೆ ಮಾಡುತ್ತಿಲ್ಲ. ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಇದರಿಂದ ಕಷ್ಟವಾಗುತ್ತದೆ ಎಂದು ಗರಂ ಆದರು.

ಸುಳ್ಯ ತಾಲೂಕಿನ ಸರಕಾರಿ ಶಾಲೆಗಳ ಸ್ಥಳದ ಗಡಿ ಗುರುತು ಕುರಿತಂತೆ ಅಶೋಕ್ ನೆಕ್ರಾಜೆಯವರ ಪ್ರಶ್ನೆಗೆ ಉತ್ತರಿಸಿದ ಸರ್ವೇ ಸೂಪರ್‌ವೈಸರ್ 40 ಶಾಲೆಗಳ ಗಡಿ ಗುರುತು ತಯಾರಿಸಿದ್ದು 38 ಶಾಲೆಗಳ ವರದಿಯನ್ನು ಈಗಾಗಲೇ ನೀಡಲಾಗಿದೆ. ಅಳತೆ ದಿನಾಂಕ ನಿಗದಿಪಡಿಸಲಾಗಿದೆ ಎಂದು ಹೇಳಿದರು. ಈ ಉತ್ತರದಿಂದ ಅಸಮಾಧಾನಗೊಂಡ ಆಶೋಕ್ ನೆಕ್ರಾಜೆಯವರು ತಾ.ಪಂ ಸಭೆಯಲ್ಲಿ ಈ ವಿಚಾರದ ಬಗ್ಗೆ ಗಂಭೀರ ಚರ್ಚೆ ನಡೆದರೂ ಇನ್ನೂ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಅಧಿಕಾರಿಗಳು ಮಾಡುವ ಎಡವಟ್ಟಿನಿಂದ ನಮ್ಮ ಮನವಿಗೆ ಬೆಲೆ ಇಲ್ಲದಂತಾಗಿದೆ ಎಂದರು.

ಸರ್ವೇ ಇಲಾಖೆಯವರು ಸಾರ್ವಜನಿಕರೊಂದಿಗೆ ಚೆನ್ನಾಗಿ ಮಾತನಾಡುವ ಸೌಜನ್ಯವನ್ನೂ ಬೆಳೆಸಿಕೊಳ್ಳಬೇಕು. ನಿಮ್ಮ ಇಲಾಖೆ ಮಾತ್ರವಲ್ಲ ಬಹುತೇಕ ಎಲ್ಲಾ ಇಲಾಖೆಯ ಅಧಿಕಾರಿಗಳು ಕಚೆರಿಗೆ ಬರುವವರೊಡನೆ ಸರಿಯಾಗಿ ಮಾತನಾಡುವ ಸೌಜನ್ಯವನ್ನೂ ಬೆಳೆಸಿಕೊಳ್ಳಬೇಕು ಎಂದು ರಾಧಾಕೃಷ್ಣ ಬೊಳ್ಳೂರು ಹೇಳಿದರು.

ತಾಲೂಕಿನ ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಮತ್ತು ಲೋಕೋಪಯೋಗಿ ರಸ್ತೆಗಳನ್ನು ಆರ್‌ಟಿಸಿಯಲ್ಲಿ ನೋಂದಾಯಿಸುವ ವಿಚಾರ ತಾಲೂಕು ಪಂಚಾಯತ್ ಸಭೆಯಲ್ಲಿ ಸುದೀರ್ಘ ಚರ್ಚೆಗೆ ಕಾರಣವಾಯಿತು. ಲೋಕೋಪಯೋಗಿ ರಸ್ತೆಗಳ ಪಟ್ಟಿಯನ್ನು ಈಗಾಗಲೇ ಸಲ್ಲಿಸಲಾಗಿದೆ ಎಂದು ಎಇಇ ಹೇಳಿದರು. ಈ ಕುರಿತಂತೆ ಗ್ರಾಮ ಕರಣಿಕರಿಗೆ ಜವಾಬ್ದಾರಿ ನೀಡಿ ಸರ್ವೇ ಮಾಹಿತಿ ಪಡೆದು ಈ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ರಾಧಾಕೃಷ್ಣ ಬೊಳ್ಳೂರು ಹೇಳಿದರು. ಈ ಪ್ರಕ್ರಿಯೆಯಲ್ಲಿ ಸರ್ವೇ ನಡೆದು ಪ್ರಕ್ರಿಯೆ ಪೂರ್ಣಗೊಳ್ಳಬೇಕಾದರೆ 25 ವರ್ಷ ಹಿಡಿಯಬಹುದು. ಹೀಗಾಗಿ ಗ್ರಾಮ ಕರಣಿಕರ ಐ ಸ್ಕೆಚ್ ಪರಿಗಣಿಸಿ ನೋಂದಣಿ ಮಾಡುವುದು ಉತ್ತಮ. ಸಾರ್ವಜನಿಕ ಜಾಗಗಳನ್ನು ಉಳಿಸಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದು ಅಬ್ದುಲ್ ಗಫೂರ್ ಹೇಳಿದರು.

ತಾಲೂಕಿನ ಅನೇಕ ಕಡೆ ಅರಣ್ಯ ಭೂಮಿ, ಕಂದಾಯ ಭೂಮಿ ಎಂದು ವಿಂಗಡಣೆ ಆಗದಿರುವುದರಿಂದ ಸಮಸ್ಯೆ ಉಂಟಾಗಿದೆ. ತಹಶೀಲ್ದಾರ್ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಅಬ್ದುಲ್ ಗಫೂರ್ ಹೇಳಿದರು. ಸುಬ್ರಹ್ಮಣ್ಯದ ಅಂಗನವಾಡಿ ಕೇಂದ್ರದ ಕುರಿತಂತೆ ವಿವಾದವೂ ಸಭೆಯಲ್ಲಿ ಪ್ರತಿಧ್ವನಿಸಿತು. ಅಂಗನವಾಡಿಗೆ ಮಂಜೂರಾದ ಜಾಗದಲ್ಲಿ ಅಂಗನವಾಡಿ ನಿರ್ಮಾಣಗೊಳ್ಳದಂತೆ ಕೆಲವು ಸ್ಥಾಪಿತ ಹಿತಾಸಕ್ತಿಗಳು ಪ್ರಯತ್ನಿಸುತ್ತಿವೆ. ಅವರ ಕುಮ್ಮಕ್ಕಿನಿಂದ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಆಶೋಕ್ ನೆಕ್ರಾಜೆ ಆರೋಪಿಸಿದರು. ಈ ಕುರಿತು ಸಿಡಿಪಿಒ ಸೂಕ್ತ ಕ್ರಮ ಕೈಗೊಳ್ಳಬೇಕು. ಶಾಸಕರ ಹಾಗೂ ತಾಲೂಕು ಪಂಚಾಯತ್ ಅಧ್ಯಕ್ಷರ ಉಪಸ್ಥಿತಿಯಲ್ಲಿ ವಿವಾದ ಬಗೆ ಹರಿಸಬೇಕೆಂದು ರಾಧಾಕೃಷ್ಣ ಬೊಳ್ಳೂರು ಅಭಿಪ್ರಾಯಪಟ್ಟರು.

ತಾಲೂಕಿನ ರೈತ ಆತ್ಯಹತ್ಯೆ ಪ್ರಕರಣದಲ್ಲಿ ಪರಿಹಾರ ಮಂಜೂರು ಮಾಡುವ ಕುರಿತು ಸಮಿತಿಯ ತೀರ್ಮಾನವನ್ನು ಸಭೆ ಒಪ್ಪಿಕೊಳ್ಳಲಿಲ್ಲ. ರೈತರ ವಸ್ತು ಸ್ಥಿತಿಯ ಬಗ್ಗೆ ನಮಗೆ ಗೊತ್ತಿದೆ. ಅಧಿಕಾರಿಗಳು ಕುಳಿತಲ್ಲಿ ವರದಿ ತಯಾರಿಸಿ ತೀರ್ಮಾನಿಸುವುದು ಸರಿಯಲ್ಲ. ಈ ಕುರಿತು ನಾವು ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದು ಆಶೋಕ್ ನೆಕ್ರಾಜೆ ಹೇಳಿದರು. ಇಂಥ ವ್ಯವಸ್ಥೆಗಳ ವಿರುದ್ಧ ದಂಗೆ ಏಳಬೇಕಾದ ಸ್ಥಿತಿ ಇದೆ ಎಂದು ಹರೀಶ್ ಕಂಜಿಪಿಲಿ ಹೇಳಿದರು.
  
ಟಿಪ್ಪುಜನ್ಮ ದಿಣಾಚರಣೆಯನ್ನು ವಿರೋಧಿಸಿ ನಿರ್ಣಯ ಕೈಗೊಳ್ಳಬೇಕು ಎಂಬ ಕುರಿತು ತಾಲೂಕು ಪಂಚಾಯತ್ ಸಭೆಯಲ್ಲಿ ಸದಸ್ಯರು ಎತ್ತಿದ ಪ್ರಸ್ತಾಪ ವ್ಯಾಪಕ ಚರ್ಚೆಗೆ ಕಾರಣವಾಯಿತು. ಸದಸ್ಯ ಉದಯ ಕೊಪ್ಪಡ್ಕ ಮಾತನಾಡಿ, ನ.10ರಂದು ಟಿಪ್ಪುಜಯಂತಿ ಆಚರಿಸುವಂತೆ ಸರಕಾರ ಸುತ್ತೋಲೆ ಹೊರಡಿಸಿದೆ. ಆದರೆ ಟಿಪ್ಪು ಓರ್ವ ಆಕ್ರಮಣಕಾರಿ ವ್ಯಕ್ತಿಯಾಗಿದ್ದು, ಟಿಪ್ಪು ದಿನಾಚರಣೆ ವಿರೋಧಿಸಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರಸ್ತಾವವನ್ನು ಸದಸ್ಯರಾದ ಅಶೋಕ್ ನೆಕ್ರಾಜೆ, ಅಬ್ದುಲ್ ಗಫೂರ್, ತೀರ್ಥರಾಮ ಜಾಲ್ಸೂರು ವಿರೋಧಿಸಿದರು. ಸರಕಾರದ ಸುತ್ತೋಲೆಯನ್ನು ಅಧೀನ ಸಂಸ್ಥೆಗಳು ಪಾಲಿಸಲೇಬೇಕು ಎಂದು ಅಶೋಕ್ ನೆಕ್ರಾಜೆ ಹೇಳಿದರು. ನಿರ್ಣಯ ಅಂಗೀಕರಿಸಿದರೆ ಘರ್ಷಣೆಗೆ ಕಾರಣವಾಗಬಹುದು ಎಂದು ಅಬ್ದುಲ್ ಗಫೂರ್ ಹೇಳಿದರು.

ಕಳೆದ ವರ್ಷ ಕೊಡಗು, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯಾದ್ಯಂತ ಟಿಪ್ಪು ದಿನಾಚರಣೆಯಂದು ಘರ್ಷಣೆಗಳು ನಡೆದಿವೆ. ಟಿಪ್ಪು, ಹಲವು ದೇವಸ್ಥಾನ, ಚರ್ಚ್‌ಗಳನ್ನು ಹಾನಿಮಾಡಿದ್ದಾನೆ. ಆಕ್ರಮಣಕಾರಿಯ ದಿನಾಚರಣೆ ವಿರೋಧಿಸಿ ನಿರ್ಣಯಕ್ಕೆ ಬೆಂಬಲ ಇದೆ ಎಂದು ಹರೀಶ್ ಕಂಜಿಪಿಲಿ ಹೇಳಿದರು. ಶಾಂತಿಭಂಗಕ್ಕೆ ಕಾರಣವಾಗಬಹುದು ಎಂಬ ದೃಷ್ಟಿಯಿಂದ ನಿರ್ಣಯ ಕೈಗೊಳ್ಳಬಹುದು ಎಂದು ಅಧ್ಯಕ್ಷ ಚನಿಯ ಕಲ್ತಡ್ಕ ಹೇಳಿದರು. ಪುಷ್ಪಾವತಿ ಬಾಳಿಲ, ಪುಷ್ಪಾಮೇದಪ್ಪಇದಕ್ಕೆ ಬೆಂಬಲ ಸೂಚಿಸಿದರು.

ಸರಕಾರದ ಆದೇಶ ಪಾಲಿಸಬೇಕಾಗುತ್ತದೆ ಎಂದು ಕಾರ್ಯನಿರ್ವಹಣಾಧಿಕಾರಿ ಮಧುಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News