ಯೋಧ ಏಕನಾಥ ಶೆಟ್ಟಿಯವರ ಸಮವಸ್ತ್ರ, ಸೊತ್ತುಗಳು ಕುಟುಂಬಕ್ಕೆ ಹಸ್ತಾಂತರ

Update: 2016-10-28 13:10 GMT

ಬೆಳ್ತಂಗಡಿ, ಅ.28: ಮೂರು ತಿಂಗಳ ಹಿಂದೆ ಬಂಗಾಳ ಕೊಲ್ಲಿಯಲ್ಲಿ ನಾಪತ್ತೆಯಾಗಿರುವ ಸೇನಾ ವಿಮಾನದಲ್ಲಿದ್ದ ಗುರುವಾಯನಕರೆ ನಿವಾಸಿ ಯೋಧ ಏಕನಾಥ ಶೆಟ್ಟಿ(48)ಯವರ ಪಾರ್ಥಿವ ಶರೀರ ಸಿಗದ ಹಿನ್ನೆಲೆಯಲ್ಲಿ ಅವರು ಉಪಯೋಗಿಸುತ್ತಿದ್ದ ಸೇನಾ ಸಮವಸ್ತ್ರ ಮತ್ತು ಇತರ ಪರಿಕರಗಳನ್ನು ಮಿಲಿಟರಿ ಗೌರವದೊಂದಿಗೆ ಶುಕ್ರವಾರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಪೋರ್ಟ್‌ಬ್ಲೇರ್‌ನಿಂದ ಮಿಲಿಟರಿ ವಿಶೇಷ ವಿಮಾನದಲ್ಲಿ ಚೆನ್ನೈಗೆ ಸಮವಸ್ತ್ರವುಳ್ಳ ಪೆಟ್ಟಿಗೆಯನ್ನು ತರಲಾಗಿದ್ದು, ಅಲ್ಲಿಂದ ಮಂಗಳೂರಿಗೆ ರೈಲಿನಲ್ಲಿ ತಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಇಟ್ಟು ಗೌರವಗಳನ್ನು ಸಲ್ಲಿಸಲಾಯಿತು. ಬಳಿಕ ಅಲ್ಲಿಂದ ಪೊಲೀಸ್ ವಾಹನದ ಮೂಲಕ ಬೆಳ್ತಂಗಡಿ ತರಲಾಯಿತು. ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಮುಂದೆ ಗೌರವದೊಂದಿಗೆ ಬರಮಾಡಿಕೊಳ್ಳಲಾಯಿತು. ನಂತರ ಅಲ್ಲಿಂದ ಮೆರವಣಿಗೆಯ ಮೂಲಕ ಗುರುವಾಯನಕೆರೆಯ ಹವ್ಯಕ ಭವನದ ಬಳಿಯಿರುವ ನಿವಾಸಕ್ಕೆ ತರಲಾಯಿತು.

ಶೆಟ್ಟಿಯವರ ಸ್ವಗೃಹದಲ್ಲಿ ವಾಯು ಸೇನಾ ನಿವೃತ್ತ ಅಧಿಕಾರಿ ಸುರೇಂದ್ರ ಅವರು ಎಸ್ಪಿ ಗುಲಾಬ್ ರಾವ್ ಬೊರಸೆ, ತಾಲೂಕು ತಹಶೀಲ್ದಾರ್ ಪುಟ್ಟಸ್ವಾಮಿ, ಶಾಸಕಿ ಶಕುಂತಲಾ ಶೆಟ್ಟಿಯವರ ಸಮ್ಮುಖದಲ್ಲಿ ಸೇನಾ ಕ್ರಮದಂತೆ ಏಕನಾಥ ಶೆಟ್ಟಿಯವರ ಪತ್ನಿ ಜಯಂತಿ ಅವರಿಗೆ ಸಮವಸ್ತ್ರ ಹಾಗೂ ಇತರ ಪರಿಕರಗಳನ್ನು ಹಸ್ತಾಂತರಿಸಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಸಾಲಾಗಿ ಬಂದು ಗೌರವ ಸಲ್ಲಿಸಿದರು. ಸುಮಾರು 250ಕ್ಕೂ ಹೆಚ್ಚು ದ್ವಿಚಕ್ರ ವಾಹನ ಹಾಗೂ ಇತರ ವಾಹನಗಳು ಮೆರವಣಿಗೆಯಲ್ಲಿದ್ದವು. ಏಕನಾಥರ ಸಮವಸ್ತ್ರವಿದ್ದ ಪೆಟ್ಟಿಗೆಯನ್ನು ಮನೆಯೊಳಗಡೆ ತರುತ್ತಿದ್ದಂತೆ ಕುಟುಂಬದವರು ಹಾಗೂ ನೆರೆದವರು ಭಾವುಕರಾದರು.

ಚೆನ್ನೈನಿಂದ ಅಂಡಮಾನ್‌ನ ಪೋರ್ಟ್‌ಬ್ಲೇರ್‌ಗೆ ಜು.22ರಂದು ಹೊರಟ್ಟಿದ್ದ ಸೇನಾ ವಿಮಾನವು ಬಂಗಾಲ ಕೊಲ್ಲಿಯಲ್ಲಿ ನಾಪತ್ತೆಯಾಗಿತ್ತು. ಅದರಲ್ಲಿ ನಾಪತ್ತೆಯಾಗಿದ್ದ 29 ಸೈನಿಕರಲ್ಲಿ ಏಕನಾಥ ಶೆಟ್ಟಿ ಒಬ್ಬರಾಗಿದ್ದರು. ಸೇನೆ ವಿಮಾನಕ್ಕಾಗಿ ಸತತ ಹುಡುಕಾಟ ನಡೆಸುತ್ತಿತ್ತು. ಆದರೆ ಸಮುದ್ರದಲ್ಲಿ ಯೋಧರ ಶವಗಳಾಗಲಿ ವಿಮಾನದ ಕುರುಹುಗಳಾಗಲಿ ಇದುವರೆಗೆ ಕಂಡು ಬಂದಿಲ್ಲವಾದ ಕಾರಣ ಯೋಧರು ಮೃತಪಟ್ಟಿದ್ದಾರೆ ಎಂದು ಸೇನೆ ಘೋಷಿಸಿದೆ. ಹೀಗಾಗಿ ಪರಿಹಾರಕ್ಕಾಗಿ ಸೇನಾ ಇಲಾಖಾ ನಿಯಮದಂತೆ ಅವರ ಸಮವಸ್ತ್ರ ಹಾಗೂ ಇನ್ನಿತರ ಪರಿಕರಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವ ಕ್ರಮವಿದೆ.

ಹಸ್ತಾಂತರ ಸಂದರ್ಭ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಕಾಂಚೋಡು, ಮಾಜಿ ಸೈನಿಕರಾದ ಎಂ.ಆರ್.ಜೈನ್, ಸುನೀಲ್ ಶೆಣೈ, ರಾಮ ಭಟ್, ಜಗನ್ನಾಥ್, ಐ.ಎಂ. ಸುಬ್ರಹ್ಮಣ್ಯ, ತಂಗಚ್ಛನ್, ಎಂ.ಬಿ.ಪಿಂಟೊ, ವಿಕ್ಟರ್ ಕ್ರಾಸ್ತಾ, ಕಾಂತಪ್ಪಗೌಡ, ಮೋಹನ ಶೆಟ್ಟಿಗಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕುವೆಟ್ಟು ಗ್ರಾಪಂ ಅಧ್ಯಕ್ಷ ಅಶೋಕ್ ಕೋಟ್ಯಾನ್, ಮಾಜಿ ಶಾಸಕ ಪ್ರಭಾಕರ ಬಂಗೇರ, ಜಿಪಂ ಸದಸ್ಯರಾದ ಮಮತಾ ಶೆಟ್ಟಿ, ಧರಣೇಂದ್ರ ಕುಮಾರ್, ತುಂಗಪ್ಪಬಂಗೇರ, ತಾಪಂ ಸದಸ್ಯ ಗೋಪಿನಾಥ ನಾಯಕ್, ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯ ಪಾಲಕ ಪ್ರಭಾರ ಅಭಿಯಂತರ ಶಿವಪ್ರಸಾದ ಅಜಿಲ, ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ.ಆರ್.ನರೇಂದ್ರ, ಬಿಜೆಪಿ ಯುವ ಮೊರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜಾ, ಬಿಜೆಪಿ ತಾಲೂಕಾಧ್ಯಕ್ಷ ರಂಜನ್ ಜಿ. ಗೌಡ, ಎಸ್ಸೈ ರವಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News