×
Ad

ನಾವು ಭಿನ್ನತೆಯಲ್ಲೂ ಐಕ್ಯರಾಗಿದ್ದೇವೆ: ಸರಕಾರಕ್ಕೆ ಖಾಝಿ ಬೇಕಲ್ ಉಸ್ತಾದ್ ಎಚ್ಚರಿಕೆ

Update: 2016-10-28 19:32 IST

ಮಂಗಳೂರು, ಅ. 28: ಮುಸ್ಲಿಮ್ ಸಮುದಾಯವು ಭಿನಾಭಿಪ್ರಾಯದಲ್ಲಿ ಹಂಚಿಹೋಗಿದ್ದಾರೆ ಎಂಬ ಕೀಳರಿಮೆ ಬೇಡ. ನಾವು ಭಿನ್ನತೆಯಲ್ಲೂ ಐಕ್ಯತೆಯಿಂದಿದ್ದೇವೆ. ಶರೀಅತ್ ವಿಷಯದಲ್ಲಿ ಕೈ ಹಾಕಬೇಡಿ ಎಂದು ಉಡುಪಿ ಸಂಯುಕ್ತ ಖಾಝಿ ಬೇಕಲ್ ಇಬ್ರಾಹೀಂ ಮುಸ್ಲಿಯಾರ್ ಇಂದಿಲ್ಲಿ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಅವರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣ ಎದುರು ಎಸ್‌ಜೆಯು, ಎಸ್‌ಜೆಎಂ, ಎಸ್‌ವೈಎಸ್, ಎಸೆಸೆಫ್, ಎಸ್‌ಎಂಎ, ಎಸ್‌ಇಡಿಸಿ, ಕೆಎಂಜೆಸಿ, ಕೆಸಿಎಫ್ ಸಂಘಟನೆಗಳ ವತಿಯಿಂದ ಶರೀಅತ್ ನಿಯಮಗಳಲ್ಲಿ ಸರಕಾರದ ಹಸ್ತಕ್ಷೇಪ ಖಂಡಿಸಿ ಮತ್ತು ಸಮಾನ ನಾಗರಿಕ ಸಂಹಿತೆಯನ್ನು ವಿರೋಧಿಸಿ ನಡೆದ ಪ್ರತಿಭಟನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಇಸ್ಲಾಂ ಪರಿಪೂರ್ಣ ಧರ್ಮವಾಗಿದೆ. ಇದರಲ್ಲಿ ರದ್ದತಿ, ಸೇರ್ಪಡೆಗೆ ಅವಕಾಶಗಳಿಲ್ಲ. ಇಂತಹ ಸೇರ್ಪಡೆ ಅಥವಾ ರದ್ದತಿಗೆ ಸ್ವತಃ ಪ್ರವಾದಿ ಮುಹಮ್ಮದ್ (ಸ) ಅವರಿಗೇ ಅನುಮತಿ ಇಲ್ಲ. ಹೀಗಿರುವಾಗ ಕೇಂದ್ರ ಸರಕಾರ ತ್ರಿವಳಿ ತಲಾಖ್ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಇಂತಹ ದುಷ್ಕೃತ್ಯ ನಡೆದರೆ ದೇಶದಲ್ಲಿ ಮುಸ್ಲಿಮರಿಂದ ಭಾರೀ ವಿರೋಧ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.

ತಲಾಖ್ ಎಂಬುದು ದೇವನಿಗೂ ಅನಿಷ್ಟವಾದ ಕ್ರಿಯೆ. ತನಗೆ ಮನ ಬಂದಂತೆ ತಲಾಖ್ ನೀಡಲು ಇಸ್ಲಾಂನಲ್ಲಿ ಅವಕಾಶಗಳಿಲ್ಲ. ಪತಿ-ಪತ್ನಿ ಜೀವನ ಮುಂದೆ ಸರಿ ಹೊಂದುವುದಿಲ್ಲ ಎಂದು ಖಾತರಿ ಪಡಿಸಿದಾಗ ತಲಾಖ್ ಅನಿವಾರ್ಯ ತೆ ಎದುರಾದಬಹುದು. ಇದಕ್ಕೂ ಇಸ್ಲಾಂನಲ್ಲಿ ಹೆಣ್ಣಿಗೆ ಪರವಾಗಿ ಹಲವು ನೀತಿ, ನಿಯಮಗಳಿವೆ. ಒಂದೇ ಬಾರಿ ಮೂರು ತಲಾಖ್ ಹೇಳುವಂತಿಲ್ಲ. ಪ್ರಥಮ ತಲಾಖ್ ನೀಡುವಾಗ ಹೆಣ್ಣಿಗೆ ಸರಿ ಹೊಂದಲು ಕಾಲಾವಕಾಶ ನೀಡಬೇಕು. ಎರಡನೆ ಬಾರಿ ತಲಾಖ್ ಹೇಳುವಾಗಲೂ ಸಮಾವಕಾಶ ನೀಡಬೇಕು. ಮೂರನೆ ಬಾರಿ ಹೇಳುವ ಮೊದಲು ಪತಿ ಮತ್ತು ಪತ್ನಿಯ ಕಡೆಯಿಂದ ಒಬ್ಬೊಬ್ಬರನ್ನು ಮಧ್ಯಸ್ತರಾಗಿ ಮಾತುಕತೆ ನಡೆಸಬೇಕು. ಮಾತುಕತೆಯಲ್ಲೂ ಪತಿ-ಪತ್ನಿ ಒಟ್ಟಿಗೆ ಬಾಳಲು ಸಹಮತ ವ್ಯಕ್ತವಾಗದೆ ಇದ್ದಾಗ ಮೂರನೆ ತಲಾಖ್ ಅನಿವಾರ್ಯವಾಗುತ್ತದೆ. ಆದರೆ ಇಸ್ಲಾಂನ ನೀತಿ-ನಿಯಮಗಳಿಗೆ ವಿರುದ್ಧವಾಗಿ ಮತ್ತು ದೇಶದ ಕೋಟ್ಯಂತರ ಮುಸ್ಲಿಮರ ಭಾವನೆಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಕೇಂದ್ರ ಸರಕಾರ ವರ್ತಿಸಿದರೆ ಇಡೀ ಮುಸ್ಲಿಂ ಸಮುದಾಯ ಒಂದಾಗಲಿದೆ ಎಂದು ಖಾಝಿ ಕೇಂದ್ರದ ಆಡಳಿತ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಈ ವಿಷಯದಲ್ಲಿ ರಾಜಕೀಯ ನಡೆಸುವುದು ಬೇಡ. ನಮಗೆ ಯಾವ ಸರಕಾರ ಅಧಿಕಾರಕ್ಕೆ ಬಂದರೂ ಶರೀಅತ್ ಬೇಕೇ ಬೇಕು. ಇದರಲ್ಲಿ ಯಾರಿಗೂ ಹಸ್ತಕ್ಷೇಪ ನಡೆಸಲು ಅಧಿಕಾರವಿಲ್ಲ. ಭಾರತದಲ್ಲಿ ಇತರ ಧರ್ಮೀಯರಂತೆ ಮುಸ್ಲಿಮರೂ ಜೀವನ ನಡೆಸುತ್ತಿದ್ದಾರೆ. ಇತರ ಧರ್ಮೀಯರಿಗೆ ಅವರವರ ಧರ್ಮಕ್ಕನುಗುಣವಾಗಿ ಜೀವಿಸಲು ಅವಕಾಶ ನೀಡಿದಂತೆ ಮುಸ್ಲಿಮರಿಗೂ ಅವಕಾಶ ನೀಡಬೇಕು ಎಂದು ಖಾಝಿ ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸೆಸೆಫ್ ರಾಜ್ಯಾಧ್ಯಕ್ಷ ಎನ್‌ಕೆಎಂ ಶಾಫಿ ಸಅದಿ ಬೆಂಗಳೂರು, ದೇಶದ ವಿವಿಧ ರಾಜ್ಯಗಳಲ್ಲಿ ಚುನಾವಣೆ ಸನ್ನಿತವಾಗುತ್ತಿದೆ. ಇದರ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರಕಾರ ರಾಜಕೀಯ ದುರುದ್ದೇಶಕ್ಕಾಗಿ ಶರೀಅತ್ ವಿಷಯಕ್ಕೆ ಕೈಹಾಕಿದಂತಿದೆ. ಇಸ್ಲಾಮಿನ ಶರೀಅತ್ ಮುಸ್ಲಿಮರಿಗೆ ಉಸಿರಾಗಿದೆ. ಪ್ರಾಣ ತೆತ್ತರೂ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಬಿಡುವುದಿಲ್ಲ. ಶರೀಅತ್ ವಿಷಯದಲ್ಲಿ ಹಸ್ತಕ್ಷೇಪ ಮತ್ತು ಸಮಾನ ನಾಗರಿಕ ಸಂಹಿತೆಯನ್ನು ಖಂಡಿಸಿ ಎಸೆಸೆಫ್ ವತಿಯಿಂದ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಯಲಿವೆ ಎಂದರು.

ತ್ರಿವಳಿ ತಲಾಖ್ ಬಗ್ಗೆ ಕಾಂಗ್ರೆಸ್ ಚಕಾರ ಎತ್ತದಿರುವುದಕ್ಕೆ ಮತ್ತು ಈ ವಿಷಯದಲ್ಲಿ ಈವರೆಗೂ ಅಧಿಕೃತವಾಗಿ ಹೇಳಿಕೆ ನೀಡದಿರುವುದಕ್ಕೆ ಅವರು ವಿಷಾದ ವ್ಯಕ್ತಪಡಿಸಿದರು.

ಮುಖ್ಯ ಭಾಷಣಕಾರರಾಗಿ ಮಾತನಾಡಿದ ಎಂಎಸ್‌ಎಂ ಅಬ್ದುರ್ರಶೀದ್ ಝೈನಿ, ಭಾರತ ಸಂವಿಧಾನವು ಪ್ರತಿಯೊಬ್ಬರಿಗೂ ಅವರವರ ಧಾರ್ಮಿಕ ಸ್ವಾತಂತ್ರಕ್ಕೆ ಧಕ್ಕೆಯಾಗದಂತೆ ಜೀವಿಸಲು ಅವಕಾಶ ನೀಡುವಂತೆ ಹೇಳಿದೆ. ತಮ್ಮ ಧರ್ಮವನ್ನು ಪಾಲಿಸುವ, ಬೋಧಿಸುವ, ಆರಾಧಿಸುವ ಹಕ್ಕು ನೀಡಿದೆ. ಅಲ್ಲದೆ, ಅಲ್ಪಸಂಖ್ಯಾತರ ಹಕ್ಕುಗಳನ್ನು ಹೇಗೆ ಸಂರಕ್ಷಿಸಬೇಕೆಂಬುದನ್ನೂ ಹೇಳಿದೆ. ಹೀಗಿರುವಾ ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕುಗಳಿಗೆ ಚ್ಯುತಿ ಬರುವಂತೆ ಇಸ್ಲಾಮಿನ ಶರೀಅತ್ ಕಾನೂನುಗಳಲ್ಲಿ ಬದಲಾವಣೆ ಮಾಡಲು ಹೊರಟಿರುವ ಕೇಂದ್ರದ ನಡೆ ಅಸಾಂವಿಧಾನಿಕವಾದುದು ಎಂದರು.

‘ಇಶಾರ' ಪಾಕ್ಷಿಕದ ಕಾರ್ಯನಿರ್ವಾಹಕ ಸಂಪಾದಕ ಅಬ್ದುಲ್ ಹಮೀದ್ ಬಜ್ಪೆ, ಎಸ್‌ವೈಎಸ್ ರಾಜ್ಯಾಧ್ಯಕ್ಷ ಕೆ.ಪಿ.ಹುಸೈನ್ ಸಅದಿ, ಕಎಂಜೆಯು ಇದರ ಪ್ರಧಾನ ಕಾರ್ಯದರ್ಶಿ ಎಚ್.ಐ.ಅಬೂಸುಫ್ಯಾನ್ ಇಬ್ರಾಹೀಂ ಮದನಿ, ಜಾಫರ್ ಸಖಾಫ್ ತಂಙ್ಳ್ ಕೋಟೇಶ್ವರ, ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ, ಕೆ.ಕೆ.ಮುಹಿಯೂದ್ದೀನ್ ಕಾಮಿಲ್ ಸಖಾಫಿ, ಮೀರಾನ್ ಸಾಹೇಬ್ ಕಡಬ, ಎಂ.ಎ.ಸಿದ್ದೀಖ್ ಸಖಾಫಿ ಮೂಳೂರು, ಕೆ.ಎಚ್.ಇಸ್ಮಾಯೀಲ್ ಸಅದಿ ಕಿನ್ಯ, ಎಂ.ಪಿ.ಅಶ್ರಫ್ ಸಅದಿ ಮಲ್ಲೂರು, ರಶೀದ್ ಬೆಳ್ಳಾರೆ, ಕತಾರ್ ಬಾವ ಹಾಜಿ, ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಇಸ್ಹಾಕ್ ಝುಹ್ರಿ, ಸಿರಾಜುದ್ದೀನ್ ಸಖಾಫಿ ಕನ್ಯಾನ, ಇಸ್ಮಾಯೀಲ್ ಸಅದಿ ಉರುಮಣೆ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಬಳಿಕ ನಿಯೋಗವೊಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಎಂ.ಬಿ.ಮುಹಮ್ಮದ್ ಸಾದಿಕ್ ಸ್ವಾಗತಿಸಿದರು. ಅಶ್ರಫ್ ಕಿನಾರ ವಂದಿಸಿದರು. ಯಾಕೂಬ್ ಸಅದಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News