ದಲಾಯಿ ಲಾಮಾ ಅರುಣಾಚಲ ಭೇಟಿಯಿಂದ ದ್ವಿಪಕ್ಷೀಯ ಸಂಬಂಕ್ಕೆ ಹಾನಿ: ಚೀನಾ ಎಚ್ಚರಿಕೆ

Update: 2016-10-28 15:07 GMT

ಬೀಜಿಂಗ್, ಅ.28: ಟಿಬೇಟ್‌ನ ಧರ್ಮಗುರು ದಲಾಯಿ ಲಾಮಾ ಅವರ ಉದ್ದೇಶಿತ ಅರುಣಾಚಲ ಭೇಟಿ ಗಡಿ ಪ್ರದೇಶದಲ್ಲಿ ಇರುವ ಶಾಂತಿ ಮತ್ತು ಸ್ಥಿರತೆಗೆ ಧಕ್ಕೆ ತರುತ್ತದೆ ಮತ್ತು ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಹಾಳುಗೆಡಹುವ ಸಾಧ್ಯತೆಯಿದೆ ಎಂದು ಚೀನಾ ಎಚ್ಚರಿಸಿದೆ. ಅರುಣಾಚಲ ಮುಖ್ಯಮಂತ್ರಿಯ ಆಹ್ವಾನದ ಮೇರೆಗೆ ದಲಾಯಿ ಲಾಮಾ ಆ ರಾಜ್ಯಕ್ಕೆ ಭೇಟಿ ನೀಡುವ ಉದ್ಧೇಶವಿದ್ದು ಇದಕ್ಕೆ ಭಾರತದ ಸರಕಾರ ಅನುಮತಿ ನೀಡಿದೆ ಎಂಬ ವರದಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಲು ಕಾಂಗ್, ಭಾರತ- ಚೀನಾ ಗಡಿಯ ಪೂರ್ವ ಭಾಗ ಕುರಿತು ಚೀನಾದ ನಿಲುವು ಅಚಲ ಮತ್ತು ಸ್ಪಷ್ಟವಾಗಿದೆ ಎಂದು ತಿಳಿಸಿದರು. ದಲಾಯಿ ಲಾಮಾ ಮತ್ತು ಅವರ ಸಂಚುಕೂಟವು ಚೀನಾ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದು ಚೀನಾ- ಭಾರತದ ಗಡಿ ವಿವಾದ ವಿಷಯದಲ್ಲಿ ನಾಚಿಕೆಗೇಡಿನ ವರ್ತನೆ ತೋರುತ್ತಿದೆ ಎಂದರು. ದಲಾಯಿ ಲಾಮಾ ಪ್ರಕರಣದ ಗಂಭೀರತೆ ಮತ್ತು ಭಾರತ- ಚೀನಾ ಗಡಿ ವಿಷಯದ ಸೂಕ್ಷ್ಮತೆಯನ್ನು ಭಾರತ ಅರಿತುಕೊಂಡಿದೆ. ಟಿಬೆಟ್ ವಿಷಯದ ಕುರಿತಾದ ರಾಜಕೀಯ ಬದ್ಧತೆಯನ್ನು ಗೌರವಿಸಿ, ಗಡಿ ಸಮಸ್ಯೆಯ ಬಗ್ಗೆ ದ್ವಿಪಕ್ಷೀಯ ಸಾಮರಸ್ಯತೆ ಕಾಯ್ದುಕೊಳ್ಳುವಂತೆ ಭಾರತವನ್ನು ಕೇಳಿಕೊಳ್ಳುತ್ತೇವೆ. ದಲಾಯಿ ಲಾಮಾ ಅವರ ಚೀನಾ ವಿರೋಧಿ ಪ್ರತ್ಯೇಕತಾವಾದದ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸಿಕೊಡಬಾರದು ಎಂದವರು ಎಚ್ಚರಿಸಿದರು. ಈ ಹಿಂದೆಯೂ ದಲಾಯಿ ಲಾಮಾ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದರು ಎಂದು ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ವಿಕಾಸ್ ಸ್ವರೂಪ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಲು ಕಾಂಗ್, ಒಮ್ಮೆ ತಪ್ಪು ಮಾಡಿದ್ದೀರಿ ಎಂದ ಮಾತ್ರಕ್ಕೆ ಮತ್ತೊಮ್ಮೆ ತಪ್ಪು ಮಾಡಬಹುದು ಎಂದು ಭಾವಿಸಬಾರದು ಎಂದು ಹೇಳಿದರು. ಅರುಣಾಚಲ ಪ್ರದೇಶವು ದಕ್ಷಿಣ ಟಿಬೇಟ್‌ನ ಭೂಭಾಗಕ್ಕೆ ಸೇರಿದೆ ಎಂದು ಹೇಳಿಕೊಳ್ಳುತ್ತಿರುವ ಚೀನಾ, ಈ ರಾಜ್ಯಕ್ಕೆ ದಲಾಯಿ ಲಾಮಾರಷ್ಟೇ ಅಲ್ಲ, ಭಾರತೀಯ ನಾಯಕರು, ವಿದೇಶದ ಗಣ್ಯ ವ್ಯಕ್ತಿಗಳು ಕೂಡಾ ಭೇಟಿ ನೀಡುವುದನ್ನು ಸತತವಾಗಿ ವಿರೋಧಿಸುತ್ತಲೇ ಬಂದಿದೆ. ಉಭಯ ರಾಷ್ಟ್ರಗಳ ಮಧ್ಯೆ 3,448 ಕಿ.ಮೀ. ಉದ್ದದ ವಾಸ್ತವ ನಿಯಂತ್ರಣ ರೇಖೆಯ ವಿಷಯದಲ್ಲಿ ವಿವಾದವಿದೆ. 1962ರ ಯುದ್ದದಲ್ಲಿ ಚೀನಾ ವಶಪಡಿಸಿಕೊಂಡಿರುವ ಅಕ್‌ಸೈ ಚಿನ್ ಪ್ರದೇಶ ಕೂಡಾ ವಿವಾದಾತ್ಮಕ ಪ್ರದೇಶದ ವ್ಯಾಪ್ತಿಗೆ ಸೇರುತ್ತದೆ ಎಂಬುದು ಭಾರತದ ವಾದವಾಗಿದೆ. ಭಾರತದಲ್ಲಿ ಅಮೆರಿಕಾ ರಾಯಭಾರಿಯಾಗಿರುವ ರಿಚರ್ಡ್ ವರ್ಮ ಅಕ್ಟೋಬರ್ 24ರಂದು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವುದನ್ನು ಬಲವಾಗಿ ವಿರೋಧಿಸಿದ್ದ ಚೀನಾ, ಭಾರತ-ಚೀನಾ ಗಡಿ ವಿವಾದದ ವಿಷಯದಲ್ಲಿ ಮೂಗು ತೂರಿಸಬೇಡಿ ಎಂದು ಅಮೆರಿಕಾವನ್ನು ಎಚ್ಚರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News