×
Ad

ಉಡುಪಿ ದೇಶಕ್ಕೆ ಅತ್ಯುತ್ತಮ ಮಾದರಿ ನೀಡಲಿ: ಸಚಿವ ಪ್ರಮೋದ್

Update: 2016-10-28 20:41 IST

ಉಡುಪಿ, ಅ.28: ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್, ಅಭಿವೃದ್ಧಿ, ಸ್ವಚ್ಛತೆ ಹೀಗೆ ಎಲ್ಲದರಲ್ಲೂ ದೇಶದಲ್ಲೇ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆ ಸ್ವಚ್ಛತೆ ಯಲ್ಲೂ ದೇಶಕ್ಕೆ ಮಾದರಿಯಾಗಲಿ. ಈಗಿನ ಏಳನೇ ಸ್ಥಾನದಿಂದ ಒಂದನೇ ಸ್ಥಾನಕ್ಕೆ ನೆಗೆಯಲಿ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಶುಭ ಹಾರೈಸಿದ್ದಾರೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಉಡುಪಿ ಜಿಪಂ ಇಂದು ಆಯೋಜಿಸಿದ ‘ಬಯಲು ಬಹಿರ್ದೆಸೆ ಮುಕ್ತ’ ಸಾಧನೆಗಾಗಿ ಸಾಧಕ ಗ್ರಾಪಂಗಳ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ರಾಜ್ಯದ 30 ಜಿಲ್ಲೆಗಳ ಪೈಕಿ ಮೂರು ಜಿಲ್ಲೆಗಳು ಮಾತ್ರ ಸಂಪೂರ್ಣ ಅಭಿವೃದ್ಧಿ ಹೊಂದಿದ ಜಿಲ್ಲೆಗಳಾಗಿ ಗುರುತಿಸಲ್ಪಟ್ಟಿವೆ. ಅವುಗಳೆಂದರೆ ಉಡುಪಿ, ದ.ಕ. ಹಾಗೂ ಬೆಂಗಳೂರು ನಗರ ಜಿಲ್ಲೆಗಳು. ಈ ನಡುವೆ ಜಿಲ್ಲೆಯ ಕಿರೀಟಕ್ಕೆ ಇನ್ನೊಂದು ಗರಿ ಎಂಬಂತೆ ಸ್ವಚ್ಛತೆಯಲ್ಲಿ ಜಿಲ್ಲೆಗೆ ದೇಶದಲ್ಲೇ ಏಳನೇ ಸ್ಥಾನ ಪಡೆದಿದೆ. ಇದರಲ್ಲಿ ಗ್ರಾಪಂಗಳ ಪಾತ್ರ ವಿಶೇಷವಾಗಿದೆ ಎಂದರು.

ಅದೇ ರೀತಿ ಘನತ್ಯಾಜ್ಯ ವಿಲೇಯಲ್ಲೂ ಜಿಲ್ಲೆ ಪ್ರಥಮ ಸ್ಥಾನ ಪಡೆಯಬೇಕು ಎಂದ ಸಚಿವರು, ತ್ಯಾಜ್ಯನಿರ್ವಹಣೆ ಸಮಸ್ಯೆ ಈಗ ಗಂಭೀರವಾಗಿದೆ. ಅದಕ್ಕೆ ಅಗ್ರಪ್ರಾಶಸ್ತ್ಯವನ್ನು ನೀಡಬೇಕಾಗಿದೆ. ಇದಕ್ಕೆ ಸರಕಾರಿ ಜಾಗದ ಅಗತ್ಯವಿದೆ. ಈಗಿರುವ ಉಪಾಯವೆಂದರೆ 4-5 ಗ್ರಾಮಗಳು ಸೇರಿ ಸಂಯುಕ್ತವಾಗಿ ತ್ಯಾಜ್ಯವಿಲೇವಾರಿ ಘಟಕ ನಿರ್ಮಿಸಿಕೊಳ್ಳುವುದಾಗಿದೆ. ಗ್ರಾಮಗಳು ಒಂದು ಪ್ರದೇಶವನ್ನು ಗುರುತಿಸಿದರೆ ಅವುಗಳನ್ನು ಪರಿಶೀಲಿಸಿ ಮುಂದಿನ ಕ್ರಮವನ್ನು ಸರಕಾರ ತೆಗೆದುಕೊಳ್ಳಲಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗ ಬೇಕೆಂದರು.

 ಉಡುಪಿ ಜಿಪಂ ಅಧ್ಯಕ್ಷ ದಿನಕರಬಾಬು ಸ್ವಚ್ಛತಾ ಸಹಾಯವಾಣಿಗೆ ಚಾಲನೆ ನೀಡಿದರು. ‘ಸ್ವಚ್ಛ ಗ್ರಾಪಂ ನಿರ್ಮಾಣದತ್ತ ಮುಂದಿನ ಹೆಜ್ಜೆ’ ಕಿರುಹೊತ್ತಿಗೆ ಯನ್ನು ಬಿಡುಗಡೆಗೊಳಿಸಿದ ಸಂಸದೆ ಶೋಭಾ ಕರಂದ್ಲಾಜೆ, ಉಡುಪಿಯ ಜಾಗೃತ ಜನತೆ ಸ್ವಚ್ಛತೆಯಲ್ಲಿ ಗ್ರಾಮೀಣ ಪ್ರದೇಶದಂತೆ ನಗರದಲ್ಲೂ ನಂಬರ್ ಒಂದು ಪಟ್ಟಕ್ಕೇರಲಿ ಎಂದು ಶುಭಹಾರೈಸಿದರು.

ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್‌ರಾವ್, ಕುಂದಾಪುರ ತಾಪಂ ಅಧ್ಯಕ್ಷೆ ಜಯಶ್ರೀ ಎಸ್. ಮೊಗವೀರ, ಕಾರ್ಕಳ ತಾಪಂ ಅಧ್ಯಕ್ಷೆ ಮಾಲಿನಿ ಜೆ ಶೆಟ್ಟಿ, ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬುಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷರು, ತಾಪಂಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕಅಧಿಕಾರಿ, ತಾಪಂಗಳ ಕಾರ್ಯನಿರ್ವಾಹಕ ಅಧಿಕಾರಿ ಗಳನ್ನು ಸನ್ಮಾನಿಸಲಾಯಿತು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಸ್ವಾಗತಿಸಿದರು. ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News