ಭಾರತೀಯ ಕಾಲ್ ಸೆಂಟರ್‌ಗಳು ಕದ್ದ ಅಮೆರಿಕನ್ನರ ಹಣ 2004 ಕೋಟಿ ರೂ.: ಅಮೆರಿಕ ಗೃಹ ಕಾರ್ಯದರ್ಶಿ
ವಾಶಿಂಗ್ಟನ್, ಅ. 28: ಸಾವಿರಾರು ಅಮೆರಿಕನ್ನರನ್ನು ವಂಚಿಸಿವೆ ಎಂದು ಆರೋಪಿಸಲಾದ ಐದು ಭಾರತೀಯ ಕಾಲ್ ಸೆಂಟರ್‌ಗಳು ಸಂತ್ರಸ್ತರಿಂದ 300 ಮಿಲಿಯ ಡಾಲರ್ (2004 ಕೋಟಿ ರೂಪಾಯಿ)ಗೂ ಅಧಿಕ ಹಣವನ್ನು ಕದ್ದಿವೆ ಎಂದು ಅಮೆರಿಕದ ಗೃಹ ಕಾರ್ಯದರ್ಶಿ ಜೆಹ್ ಜಾನ್ಸನ್ ಹೇಳಿದ್ದಾರೆ.
ಅಮೆರಿಕದ ಹಲವು ಇಲಾಖೆಗಳ ಜಂಟಿ ಕಾರ್ಯಾಚರಣೆ ಫಲವಾಗಿ ಎಲ್ಲಾ ಐದು ಕಾಲ್‌ಸೆಂಟರ್‌ಗಳು ಹಾಗೂ 31 ಭಾರತೀಯರು ಸೇರಿದಂತೆ 56 ಮಂದಿಯ ವಿರುದ್ಧ ಆರೋಪ ಹೊರಿಸುವುದು ಸಾಧ್ಯವಾಯಿತು ಹಾಗೂ ಅಮೆರಿಕದಲ್ಲಿ 20 ಮಂದಿಯನ್ನು ಬಂಧಿಸುವುದು ಸಾಧ್ಯವಾಯಿತು ಎಂದು ಜಾನ್ಸನ್ ಗುರುವಾರ ತಿಳಿಸಿದರು.
‘‘ಅವರು ಸಾವಿರಾರು ಸಂತ್ರಸ್ತರಿಂದ 2004 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಸುಲಿಗೆ ಮಾಡಿದ್ದಾರೆ’’ ಎಂದು ಅವರು ಹೇಳಿದರು.
ಅಹ್ಮದಾಬಾದ್‌ನಲ್ಲಿರುವ ಈ ಕಾಲ್‌ಸೆಂಟರ್‌ಗಳ ಜಾಲದ ವ್ಯಕ್ತಿಗಳು ಅಮೆರಿಕದ ಗೃಹ ಇಲಾಖೆ, ಆಂತರಿಕ ಕಂದಾಯ ಸೇವೆಗಳು ಅಥವಾ ಇತರ ಸರಕಾರಿ ಅಧಿಕಾರಿಗಳಂತೆ ನಟಿಸಿ ಅಮೆರಿಕನ್ನರಿಗೆ ಫೋನ್ ಮಾಡುತ್ತಿದ್ದರು. ನಿಮ್ಮ ವಿರುದ್ಧ ಬಂಧನ ವಾರಂಟ್‌ಗಳು ಹೊರಟಿವೆ, ಗಡಿಪಾರು ಆದೇಶ ನೀಡಲಾಗಿದೆ ಅಥವಾ ಆದಾಯತೆರಿಗೆ ಬಾಕಿ ಇದೆ ಎಂಬುದಾಗಿ ಅವರನ್ನು ಹೆದರಿಸಿ, ಅವುಗಳನ್ನು ರದ್ದುಪಡಿಸಬೇಕಾದರೆ ಹಣ ನೀಡುವಂತೆ ಒತ್ತಾಯಿಸುತ್ತಿದ್ದರು.
ಅಮೆರಿಕದಲ್ಲಿ ವಾಸಿಸುತ್ತಿರುವ ಜನರಿಗೆ ಕರೆ ಮಾಡಿ ಸುಲಿಗೆ ಮಾಡಿದ ಅಹ್ಮದಾಬಾದ್‌ನ ಕಾಲ್‌ಸೆಂಟರ್‌ಗಳೆಂದರೆ- ಎಚ್‌ಗ್ಲೋಬಲ್, ಕಾಲ್ ಮಂತ್ರ, ವರ್ಲ್ಡ್‌ವೈಡ್ ಸೊಲ್ಯೂಶನ್, ಝಾರಿಯಾನ್ ಕಮ್ಯುನಿಕೇಶನ್ಸ್ ಮತ್ತು ಶರ್ಮಾ ಬಿಪಿಒ ಸರ್ವಿಸಸ್.
ಅಮೆರಿಕದ ವಿವಿಧ ಸರಕಾರಿ ಸಂಸ್ಥೆಗಳು ಮೂರು ವರ್ಷಗಳ ಸುದೀರ್ಘ ತನಿಖೆಯ ಬಳಿಕ ಈ ಕಂಪೆನಿಗಳ ಅಪರಾಧವನ್ನು ಸಾಬೀತುಪಡಿಸಿವೆ.
‘‘ತಮಗೆ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಕರೆಗಳು ಬಂದಿವೆ ಎಂಬುದಾಗಿ ಈವರೆಗೆ 18 ಲಕ್ಷಕ್ಕೂ ಅಧಿಕ ಮಂದಿ ದೂರು ನೀಡಿದ್ದಾರೆ. 5 ಕೋಟಿ ಡಾಲರ್ (334 ಕೋಟಿ ರೂ.)ಗೂ ಅಧಿಕ ಹಣ ನೀಡಿದ್ದೇವೆ ಎಂಬುದಾಗಿ 9,600ಕ್ಕೂ ಅಧಿಕ ಮಂದಿ ಹೇಳಿದ್ದಾರೆ’’ ಎಂದು ತೆರಿಗೆ ವಿಭಾಗದ ಟ್ರೆಶರಿ ಇನ್ಸ್‌ಪೆಕ್ಟರ್ ಜನರಲ್ ಜೆ. ರಸೆಲ್ ಜಾರ್ಜ್ ಹೇಳಿದರು.
ಈ ವಂಚನೆಯಲ್ಲಿ ಒಬ್ಬರಿಂದಲೇ ಸುಲಿಗೆ ಮಾಡಲಾದ ಗರಿಷ್ಠ ಮೊತ್ತ 90.85 ಲಕ್ಷ ರೂ. ಎಂದು ಅಧಿಕಾರಿಗಳು ಹೇಳಿದ್ದಾರೆ. ಅದನ್ನು ಕ್ಯಾಲಿಫೋರ್ನಿಯದ ವ್ಯಕ್ತಿಯೊಬ್ಬರಿಂದ ವಸೂಲು ಮಾಡಲಾಗಿತ್ತು.