ಲಾರಿಯ ನಂಬರ್ ನೀಡಿದರೆ ಸಾಕು, ಸಿಗುತ್ತದೆ ಒಡಿಶಾದ ಮರಳು ಸಾಗಾಟ ಪಾಸ್!

Update: 2016-10-28 15:28 GMT

ಮಂಜೇಶ್ವರ, ಅ.28: ಮಂಜೇಶ್ವರದ ಹೊಸಂಗಡಿ ಬಳಿಯ ವಾಮಂಜೂರು ಚೆಕ್‌ಪೋಸ್ಟ್‌ನ್ನು ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿದ್ದ ನಕಲಿ ಮರಳು ಸಾಗಾಟದ ಪಾಸ್ ಮಾರಾಟ ಮಾಡುತ್ತಿದ್ದ ದಂಧೆಯನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಈ ಪ್ರಕರಣದ ಹಿಂದೆ ಮಾಫಿಯಾ ಇರುವುದಾಗಿ ಶಂಕೆ ಮೂಡಿದ್ದು, ಉನ್ನತಮಟ್ಟದ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜೇಶ್ವರ ಪೊಲೀಸರಿಗೆ ಆದೇಶ ನೀಡಿದ್ದಾರೆ.

ಕೆಲ ದಿನಗಳ ಹಿಂದೆ ವಾಮಂಜೂರು ಚೆಕ್‌ಪೋಸ್ಟ್‌ನಲ್ಲಿ ಅಕ್ರಮ ಮರಳು ಸಾಗಾಟದ ಲಾರಿಯನ್ನು ವಶಕ್ಕೆ ಪಡೆೆದಾಗ ಅವರಲಿ ಒಡಿಶಾದ ನಕಲಿ ಮರಳು ಪಾಸ್‌ಗಳು ಕಂಡು ಬಂದಿತ್ತು. ಅದರ ಬೆನ್ನಲ್ಲೇ ವಶಕ್ಕೆ ಪಡೆದ ಲಾರಿಯಲ್ಲೂ ಇದೇ ರೀತಿಯ ಮರಳು ಪಾಸ್‌ಗಳು ಪತ್ತೆಯಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆಕ್‌ಪೋಸ್ಟ್ ಪರಿಸರದಲ್ಲಿ ಕಾರ್ಯಾಚರಿಸುತ್ತಿರುವ ಬಾರಕ್ ಎಂಟರ್‌ಪ್ರೈಸಸ್ ಎಂಬ ಹೆಸರಿನ ಆನ್‌ಲೈನ್ ಡಿಕ್ಲರೇಶನ್‌ನ ಮಾಲಕ ಕುಂಡಂಕುಝಿ ಚೆಡಿಕುಂಡ್ ನಿವಾಸಿ ಮುಸ್ತಫಾ (40) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆಗೊಳಪಡಿಸಿದಾಗ ನಕಲಿ ಮರಳು ಪಾಸ್‌ಗಳ ಮಾಫಿಯಾ ಬೆಳಕಿಗೆ ಬಂದಿದೆ.

ಮಂಗಳೂರಿನ ಪ್ರೆಸ್ ಒಂದರಲ್ಲಿ ನಕಲಿ ಪಾಸ್‌ನ್ನು ಮುದ್ರಿಸುತ್ತಿರುವುದಾಗಿ, ಒಂದು ಪಾಸ್ ಗೆ 10 ಸಾವಿರ ರೂ. ಪಡೆದುಕೊಳ್ಳುತ್ತಿರುವುದಾಗಿ ಬಂಧಿತ ಆರೋಪಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಈತನ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಬೇವಿಂಜೆ, ಚೆಂಗಳ ಹಾಗೂ ಹೊಸಂಗಡಿಯಿಂದ ಮೂವರನ್ನು ಬಂಧಿಸಿದ್ದಾರೆ.

ಮುಸ್ತಫಾನ ಕಚೇರಿಗೆ ಪೊಲೀಸರು ದಾಳಿ ನಡೆಸಿದಾಗ ಅಲ್ಲಿ ಒಡಿಶಾದ ನಕಲಿ ಬಿಲ್ ಹಾಗೂ ಪಾಸ್‌ಗಳು ಲಭಿಸಿವೆ. ಕೇರಳದ ತಪಾಸಣಾ ಕೇಂದ್ರಕ್ಕೆ ಮರಳು ಲಾರಿಗಳು ಆಗಮಿಸಿದರೆ ಅಲ್ಲಿ ಕೇವಲ 1,500 ರೂ. ಪಾವತಿಸಿ ಮರಳನ್ನು ಸಾಗಿಸಬಹುದಾಗಿತ್ತು. ಆದರೆ ಎರಡು ಲಾರಿಗಳನ್ನು ಪೊಲೀಸರು ವಶಕ್ಕೆ ತೆಗೆದು ವಿಚಾರಿಸಿದಾಗಲೇ ನಕಲಿ ಪಾಸ್‌ಗಳ ಮಾಫಿಯಾ ಬೆಳಕಿಗೆ ಬಂದಿದೆ. ಪಾಸ್ ಅವಶ್ಯವಿದ್ದವರಿಗೆ ಲಾರಿಯ ನಂಬರ್‌ಗಳನ್ನು ನೀಡಿದರೆ ಕೂಡಲೇ ಅವರಿಗೆ ಮುಸ್ತಫಾ ಹಾಗೂ ತಂಡ ಪಾಸ್‌ನ್ನು ನೀಡುತ್ತಿತ್ತು. ಬೇಡಿಕೆಯ ಹಣ ನೀಡಿದರೆ ಒಡಿಶಾದಿಂದ ಸಾಗಿಸುತ್ತಿರುವ ಮರಳು ಎಂಬುದಾಗಿ ಖಚಿತಪಡಿಸಿಕೊಳ್ಳಲು ದಾರಿ ಮಧ್ಯೆ ಇರುವ ಚೆಕ್ ಪೋಸ್ಟ್‌ಗಳ ನಕಲಿ ಸೀಲ್‌ನ್ನು ಕೂಡಾ ಹಾಕಿ ಕೊಡಲಾಗುತಿತ್ತು. ಕರ್ನಾಟಕ ಕೇರಳ ಗಡಿಪ್ರದೇಶಗಳಿಂದ ಲೋಡ್ ಆಗುತ್ತಿರುವ ಮರಳನ್ನು ಒಡಿಶಾದಿಂದ ಬರುತ್ತಿರುವ ಮರಳೆಂಬುದಾಗಿ ಬಿಂಬಿಸಲಾಗುತಿತ್ತು ಎಂದು ತಿಳಿದುಬಂದಿದೆ. 

ಆನ್‌ಲೈನ್ ಸೆಂಟರ್‌ನ್ನು ನಡೆಸುತಿದ್ದ ಮುಸ್ತಫಾ ಐಷಾರಾಮಿ ಕಾರುಗಳಲ್ಲಿ ತಿರುಗಾಡಿಕೊಂಡು ಆಡಂಬರದ ಜೀವನ ನಡೆಸುತ್ತಿದ್ದ. ಹಲವು ರಾಜಕೀಯ ನೇತಾರರ ಸಂಪರ್ಕವನ್ನಿಟ್ಟುಕೊಂಡಿದ್ದ ಎಂಬುದು ಪೊಲೀಸರ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ನಕಲಿ ಪಾಸ್‌ಗಳನ್ನು ನೀಡುತ್ತಿದ್ದ ತಂಡದ ಕುರಿತು ಉನ್ನತಮಟ್ಟದಲ್ಲಿ ತನಿಖೆ ನಡೆಸಿದರೆ ಖಂಡಿತವಾಗಿಯೂ ಇನ್ನಷ್ಟು ಅಕ್ರಮಗಳು ಬಯಲಾಗಬಹುದು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News