ಅಡಿಕೆ ಮಂಡಳಿ ರಚನೆಗೆ ಬಿಜೆಪಿ ಬೆಂಬಲವಿಲ್ಲ: ಸಂಜೀವ ಮಠಂದೂರು

Update: 2016-10-28 18:05 GMT

ಪುತ್ತೂರು, ಅ.28: ಅಡಿಕೆ ಮಂಡಳಿ ರಚನೆಯಿಂದ ಅಡಕೆ ಬೆಳೆಗಾರರ ಹಿತರಕ್ಷಣೆ ಅಸಾಧ್ಯ. ಈ ನಿಟ್ಟಿನಲ್ಲಿ ಅಡಿಕೆ ಮಂಡಳಿ ರಚನೆಗೆ ಬಿಜೆಪಿ ಬೆಂಬಲ ಇಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಹೇಳಿದರು.

ಅವರು ಶುಕ್ರವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಡಿಕೆ ಮಂಡಳಿ ರಚನೆ ಮಾಡಬೇಕೆಂಬ ಬೇಡಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಂತಾರಾಜ್ಯ ಸಹಕಾರಿ ಸಂಸ್ಥೆಯಾಗಿರುವ ಕ್ಯಾಂಪ್ಕೊ ಈಗಾಗಲೇ ಅಡಿಕೆ ಬೆಳೆಗಾರರ ಹಿತಾಸಕ್ತಿಗಾಗಿ ಹೋರಾಟ ಮಾಡುತ್ತಿದೆ. ಬೆಲೆ ಸ್ಥಿರೀಕರಣಕ್ಕೂ ಶ್ರಮಿಸಿದೆ. ಇದರೊಂದಿಗೆ ಮ್ಯಾಮ್ಕೋಸ್, ಟಿಎಸ್‌ಎಸ್ ಮುಂತಾದ ಸಂಸ್ಥೆಗಳೂ ಕೆಲಸ ಮಾಡುತ್ತಿವೆ. ಅಡಕೆಯ ಉತ್ಪಾದನಾ ವೆಚ್ಚ ಕಾಲ ಕಾಲಕ್ಕೆ ಬದಲಾಗುತ್ತಿರುವ ಕಾರಣ ಇದಕ್ಕೊಂದು ವೈಜ್ಞಾನಿಕ ದರ ನಿಗದಿ ಕಷ್ಟವಾಗಿದೆ. ಆದರೂ ದರ ಪಾತಾಳಕ್ಕೆ ಕುಸಿದಾಗಲೂ ಎಲ್ಲ ಖಾಸಗಿ ಖರೀದಿದಾರರು ಖರೀದಿ ನಿಲ್ಲಿಸಿದಾಗಲೂ ಕ್ಯಾಂಪ್ಕೊ ಮಾತ್ರ ಬೆಳೆಗಾರರ ಕೈ ಹಿಡಿದಿದೆ ಎಂದ ಅವರು ಕೆಲವು ಅಧಿಕಾರ ಶಾಹಿ ನಾಯಕರು ಮಂಡಳಿಯ ಪ್ರಮುಖ ಹುದ್ದೆಗಳ ಮೇಲೆ ಕಣ್ಣಿಟ್ಟಿದ್ದು, ಅಡಿಕೆ ಮಂಡಳಿ ರಚನೆಗೆ ನಿರ್ದೇಶನ ನೀಡುತ್ತಿದ್ದಾರೆ. ಆದರೆ ಈ ಮಂಡಳಿಯಿಂದ ಅಡಿಕೆ ಬೆಳೆಗಾರರ ರಕ್ಷಣೆ ಮಾಡಲು ಸಾಧ್ಯವಿಲ್ಲ. ಈಗಾಗಲೇ ಕಾಫಿ ಮಂಡಳಿ, ತೆಂಗು ಮಂಡಳಿ, ರಬ್ಬರ್ ಮಂಡಳಿ, ಸಾಂಬಾರ ಮಂಡಳಿ ಎಂಬಿತ್ಯಾದಿ ಮಂಡಳಿಗಳಿವೆ. ಆದರೂ ಆಯಾ ಬೆಳೆಗಳ ಧಾರಣೆ ಕುಸಿದಾಗ ಏನೂ ಮಾಡಲಾಗದ ಸ್ಥಿತಿಯಲ್ಲಿವೆ. ಇಂಥ ಮಂಡಳಿಗಳು ಸರಕಾರದ ಪಾಲಿಗೆ ಬಿಳಿಯಾನೆಗಳೇ ಹೊರತು ಪ್ರಯೋಜನಕಾರಿಯಲ್ಲ ಎಂದರು.

ರಾಜ್ಯದ 141 ತಾಲೂಕುಗಳಲ್ಲಿ ಸುಮಾರು 1ಕೋಟಿ ಜನ ಅಡಿಕೆ ಬೆಳೆಯಿಂದ ಜೀವನ ನಡೆಸುತ್ತಿದ್ದಾರೆ. 2013ರಲ್ಲಿ ಸರಕಾರವು ಅಡಿಕೆ ಉತ್ಪನ್ನ ನಿಷೇಧದ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ತಂಬಾಕು ಹಾಗೂ ಅಡಿಕೆ ಉತ್ಪನ್ನ ಬೇರೆ ಬೇರೆಯಾಗಿ ಮಾರುಕಟ್ಟೆಗೆ ಪ್ರವೇಶಿಸಿದೆ. ಕ್ಯಾಂಪ್ಕೊ ಹಾಗೂ ಇತರ ಸಹಕಾರಿ ಸಂಸ್ಥೆಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಅಡಿಕೆ ಅರೋಗ್ಯಕರ ಎಂಬುದರ ಬಗ್ಗೆ ದಾವೆ ಹೂಡಿದ್ದು, ಇನ್ನೂ ವಿಚಾರಣೆ ಹಂತದಲ್ಲಿದೆ. ಆದರೆ ಕರ್ನಾಟಕ ರಾಜ್ಯ ಫುಡ್ ಸೇಫ್ಟಿ ಕಮೀಷನರ್ ಉತ್ಪಾದನೆ ದಾಸ್ತಾನು ಹಾಗೂ ವಿತರಣೆ ಒಟ್ಟಿಗೆ ಹಾಗೂ ಬೇರೆಬೇರೆಯಾಗಿ ಮಾರಾಟ ನಿಷೇಧಿಸಿ ಎಂದು ಆದೇಶಿಸಿದ್ದಾರೆ. ಇದರಿಂದ ಅಡಿಕೆ ಮಾರುಕಟ್ಟೆ ಕುಸಿತವಾಗುವ ಭಯ ಬೆಳೆಗಾರರದ್ದು. ಈ ನಿಟ್ಟಿನಲ್ಲಿ ಈ ಆದೇಶವನ್ನು ಸರಕಾರ ತಕ್ಷಣದಲ್ಲಿ ಹಿಂಪಡೆಯಬೇಕು ಎಂದು ಅಗ್ರಹಿಸಿದರು.

ಕರಾವಳಿಯಲ್ಲಿರುವ ಶೇ.70ರಷ್ಟು ಅಡಕೆ ಬೆಳೆಗಾರರು ಕೊಳವೆ ಬಾವಿ ನೀರು ಅವಲಂಬಿಸಿದ್ದಾರೆ. ಉಳಿದ ಬೆಳೆಗಾರರು ಸಾಂಪ್ರದಾಯಿಕ ನೀರಾವರಿ ಮೂಲಗಳನ್ನು ಬಳಸುತ್ತಿದ್ದಾರೆ. ಕೊಳವೆ ಬಾವಿ ನಿಷೇಧದ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರಿಗೆ ಹಿನ್ನಡೆಯಾಗಿದೆ. ಕೂಡಲೇ ಈ ಆದೇಶ ಕರಾವಳಿ ಭಾಗ ಹಾಗೂ ಅಡಿಕೆ ಬೆಳೆಗಾರರಿಗೆ ಅನ್ವಯವಾಗದಂತೆ ಆದೇಶ ಹೊರಡಿಸಬೇಕು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲ ಅಧ್ಯಕ್ಷ ಜೀವಂಧರ ಜೈನ್, ಮುಖಂಡರಾದ ರಾಜೀವ ಭಂಡಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News