×
Ad

ಹೊಸ ವಿಶ್ವದಾಖಲೆಗೆ ಇಸ್ರೋ ಸಜ್ಜು

Update: 2016-10-29 09:19 IST

ಮುಂಬೈ, ಅ.29: ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ವಿಶ್ವದಾಖಲೆ ಬರೆಯಲು ಸಜ್ಜಾಗಿದ್ದು, ಎಲ್ಲವೂ ಸುಗಮವಾಗಿ ನಡೆದರೆ, 2017ರ ಜನವರಿ 15ರಂದು ಭಾರತ ಈ ವಿಶಿಷ್ಟ ಸಾಧನೆ ಮಾಡಲಿದೆ. ಅಂದು 82 ವಿದೇಶಿ ಉಪಗ್ರಹಗಳನ್ನು ಏಕಕಾಲಕ್ಕೆ ಉಡಾಯಿಸುವ ಮಹತ್ವಾಕಾಂಕ್ಷಿ ಗುರಿ ಹಾಕಿಕೊಳ್ಳಲಾಗಿದೆ ಎಂದು ಮಾರ್ಸ್ ಆರ್ಬಿಟರ್ ಮಿಷನ್ ಯೋಜನೆಯ ನಿರ್ದೇಶಕ ಸುಬ್ಬಯ್ಯ ಅರುಣನ್ ಪ್ರಕಟಿಸಿದ್ದಾರೆ.
ಬ್ರಾಂಡ್ ಇಂಡಿಯಾ ಶೃಂಗ-2016ರಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿದ್ದ ಅವರು, "82 ಉಪಗ್ರಹಗಳ ಪೈಕಿ 60 ಅಮೆರಿಕಕ್ಕೆ ಸೇರಿದ್ದು, 20 ಯೂರೋಪಿಯನ್ ಯೂನಿಯನ್ ಹಾಗೂ ಎರಡು ಬ್ರಿಟನ್ ಉಪಗ್ರಹಗಳು" ಎಂದು ಹೇಳಿದ್ದಾರೆ.
ಅತಿಹೆಚ್ಚು ಉಪಗ್ರಹಗಳನ್ನು ಏಕಕಾಲಕ್ಕೆ ಉಡಾಯಿಸಿದ ದಾಖಲೆ ರಷ್ಯಾ ಹೆಸರಿನಲ್ಲಿದ್ದು, ಇದು 2014ರ ಜನವರಿ 19ರಂದು 37 ಉಪಗ್ರಹಗಳನ್ನು ಉಡಾಯಿಸಿತ್ತು. ಅಮೆರಿಕ 29 ಉಪಗ್ರಹಗಳನ್ನು 2013ರ ನವೆಂಬರ್ 19ರಂದು ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದು, 2016ರ ಜೂನ್ 22ರಂದು ಭಾರತ 20 ಉಪಗ್ರಹಗಳನ್ನು ನಭಕ್ಕೆ ಚಿಮ್ಮಿಸಿತ್ತು. ನೂತನ ಪ್ರಯತ್ನ ಯಶಸ್ವಿಯಾದಲ್ಲಿ ಭಾರತ ಜಾಗತಿಕ ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲಿದೆ.
ಈ ಐತಿಹಾಸಿಕ ಸಾಧನೆಗೆ ಬಳಕೆಯಾಗುವ ರಾಕೆಟ್, ನಾಲ್ಕು ಹಂತದ ಪಿಎಸ್‌ಎಲ್‌ವಿ-ಎಕ್ಸ್‌ಎಲ್‌ನ ಸುಧಾರಿತ ರೂಪವಾಗಿದ್ದು, 580 ಕೆಜಿ ತೂಕದ 82 ಉಪಗ್ರಹಗಳನ್ನು 20-25 ನಿಮಿಷಗಳ ಅಂತರದಲ್ಲಿ ಕಕ್ಷೆಗೆ ಸೇರಿಸಲು ಉದ್ದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News