ತಾನೇ ಬಾಂಬ್ ಇಟ್ಟು ಬಳಿಕ ಎಚ್ಚರಿಸಿದ ಹೈಕೋರ್ಟ್ ಉದ್ಯೋಗಿ !
ಲಕ್ನೋ, ಅ.29: ಹೈಕೋರ್ಟ್‌ನ ಗುತ್ತಿಗೆ ನೌಕರನಾಗಿದ್ದ ವ್ಯಕ್ತಿಯೊಬ್ಬ ಹೈಕೋರ್ಟ್ ಆವರಣದಲ್ಲಿ ಬಾಂಬ್ ಇಟ್ಟು, ಬಳಿಕ ಭದ್ರತಾ ಸಿಬ್ಬಂದಿಯನ್ನು ತಾನೇ ಎಚ್ಚರಿಸಿ ಸಿಕ್ಕಿಹಾಕಿಕೊಂಡಿರುವ ಪ್ರಕರಣ ಬಿಗಿ ಭದ್ರತೆಯ ಅಲಹಾಬಾದ್ ಹೈಕೋರ್ಟ್ ಆವರಣದಲ್ಲಿ ಬೆಳಕಿಗೆ ಬಂದಿದೆ.
ಲಂಚ್ ಬಾಕ್ಸ್‌ನಲ್ಲಿ ಅಲ್ಪಸಾಮರ್ಥ್ಯದ ಸ್ಫೋಟಕಗಳನ್ನು ತುಂಬಿಸಿ ಇಟ್ಟಿರುವುದು ಗಮನಕ್ಕೆ ಬಂದ ಬಳಿಕ ಆತನನ್ನು ಶುಕ್ರವಾರ ಬಂಧಿಸಲಾಯಿತು. ನ್ಯಾಯಾಲಯದ 55ನೆ ಸಂಖ್ಯೆಯ ಕೊಠಡಿಯಲ್ಲಿ ತಾನೇ ಬಾಂಬ್ ಅಡಗಿಸಿಟ್ಟು, ಬಳಿಕ ಭದ್ರತಾ ಸಿಬ್ಬಂದಿಯನ್ನು ಎಚ್ಚರಿಸಿದ್ದ. ಹೀಗೆ ಎಚ್ಚರಿಸಿದರೆ ಬಹುಮಾನದ ರೂಪದಲ್ಲಿ ತನ್ನ ಕೆಲಸ ಖಾಯಂ ಆಗುತ್ತದೆ ಎಂಬ ನಂಬಿಕೆಯಿಂದ ಮಾಜಿ ಕ್ಲಾಸ್-4 ನೌಕರ ಈ ತಂತ್ರ ಹೂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಗುರುವಾರ ರಾತ್ರಿ ಈತ ಮಾಹಿತಿ ಬಹಿರಂಗಪಡಿಸುತ್ತಿದ್ದಂತೆ ಕೋರ್ಟ್ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸಂತೋಷ್ ಕುಮಾರ್ ಅಗ್ರಹಾರಿ(38) ಎಂಬಾತ ಒಂದು ದಶಕದಿಂದ ಹೈಕೋರ್ಟ್‌ನಲ್ಲಿ ಹಂಗಾಮಿ ನೌಕರನಾಗಿ ದುಡಿಯುತ್ತಿದ್ದ. ಈತನ ಚಲನವಲನಗಳ ಬಗ್ಗೆ ಸಿಸಿಟಿವಿ ದೃಶ್ಯಾವಳಿಯಿಂದ ಮಾಹಿತಿ ಪಡೆದು ಆತನನ್ನು ಬಂಧಿಸಲಾಗಿದೆ ಎಂದು ವಿಶೇಷ ಎಸ್ಪಿ ಶಲಬ್ ಮಾಥುರ್ ಪ್ರಕಟಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಆತ ನಿರುದ್ಯೋಗಿಯಾಗಿದ್ದ. ಆತ ಉದ್ಯೋಗವನ್ನು ತಾನೇ ಬಿಟ್ಟಿದ್ದಾನೆಯೇ ಆಥವಾ ಗುತ್ತಿಗೆ ಅವಧಿ ವಿಸ್ತರಣೆಯಾಗಿರಲಿಲ್ಲವೇ ಎನ್ನುವುದು ಖಚಿತವಾಗಿ ತಿಳಿದುಬಂದಿಲ್ಲ.