ಉಳ್ಳಾಲ: ಮನೆಯೊಳಗೆ ಪೆಟ್ರೋಲ್ ಸುರಿದು ಬೆಂಕಿಯಿಕ್ಕಿದ ದುಷ್ಕರ್ಮಿಗಳು
ಉಳ್ಳಾಲ, ಅ.29: ದುಷ್ಕರ್ಮಿಗಳು ಮನೆಯೊಳಗೆ ಪೆಟ್ರೋಲ್ ಸುರಿದು ಬೆಂಕಿಯಿಕ್ಕಿದ ಘಟನೆ ಬಸ್ತಿಪಡ್ಪಿನಲ್ಲಿ ನಿನ್ನೆ ರಾತ್ರಿ ನಡೆದಿರುವುದು ವರದಿಯಾಗಿದೆ. ಘಟನೆಯಲ್ಲಿ ಓರ್ವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಉಳ್ಳಾಲ ಠಾಣಾ ವ್ಯಾಪ್ತಿಯ ಬಸ್ತಿಪಡ್ಪಿನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ನಿವಾಸಿ ತಾರನಾಥ ಯಾದವ್(58) ಗಾಯಗೊಂಡವರಾಗಿದ್ದಾರೆ. ತಾರನಾಥ್‌ರ ಮನೆಯ ವೆಂಟಿಲೇಟರ್ ಮೂಲಕ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಬೆಂಕಿಯು ಬೆಡ್‌ರೂಮ್‌ನೊಳಗೆ ಬಿದ್ದಿದೆ. ಈ ವೇಳೆ ಬೆಡ್‌ರೂಮ್‌ನಲ್ಲಿ ತಾರನಾಥ್‌ರೊಂದಿಗೆ ಅವರ ಪತ್ನಿ ವಿದ್ಯಾ ಹಾಗೂ 10 ವರ್ಷದ ಪುತ್ರ ಮಿಥುನ್ ಇದ್ದರು. ಕೃತ್ಯದ ಸುಳಿವರಿತ ತಾರನಾಥ್ ಬೆಂಕಿಯಿಂದ ಪತ್ನಿ, ಮಗನನ್ನು ರಕ್ಷಿಸಿದ್ದಾರೆ. ಈ ವೇಳೆ ತಾರನಾಥ್‌ರ ಎರಡೂ ಕೈಗಳಿಗೆ ಗಾಯಗಳಾಗಿವೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪರಿಸರದಲ್ಲಿ ಹರಡುತ್ತಿರುವ ಗಾಂಜಾ ಹಾವಳಿ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಪ್ರತೀಕಾರವಾಗಿ ತಾರನಾಥ್‌ರ ವಿರುದ್ಧ ಈ ದುಷ್ಕೃತ್ಯ ಎಸಗಲಾಗಿದೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.