×
Ad

ಮೇ.1ರಿಂದ ತಲಪಾಡಿ-ಕಾಲಿಕಡವು ಹೆದ್ದಾರಿ ಚತುಷ್ಪಥ ಕಾಮಗಾರಿ ಆರಂಭ

Update: 2016-10-30 08:58 IST

ಕಾಸರಗೋಡು, ಅ.30: ತಲಪಾಡಿಯಿಂದ ಕಾಲಿಕಡವು ತನಕ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆಗೆ   ಟೆಂಡರ್ ಪ್ರಕ್ರಿಯೆಯ ಅಧಿಸೂಚನೆ  ಡಿಸೆ೦ಬರ್ ನಲ್ಲಿ  ಹೊರಬೀಳಲಿದ್ದು, 2017ರ  ಮೇ  1ರಿಂದ  ಕಾಮಗಾರಿ ಆರಂಭಗೊಳ್ಳಲಿದೆ. ತಿರುವನಂತಪುರದಲ್ಲಿ   ಮುಖ್ಯಮಂತ್ರಿ ಪಿಣರಾಯಿ ವಿಜಯನ್  ಸಮ್ಮುಖದಲ್ಲಿ  ನಡೆದ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು  ತೀರ್ಮಾನ ತೆಗೆದುಕೊಳ್ಳಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಜೊತೆಗೆ  ನೀಲೇಶ್ವರ  ಪಳ್ಳಿಕೆರೆ  ಮೇಲ್ಸೇತುವೆ  ನಿರ್ಮಾಣ ಕ್ಕೂ  ತೀರ್ಮಾನಿಸಲಾಗಿದೆ. ಪಳ್ಳಿಕೆರೆಯಲ್ಲಿ  ಚತುಷ್ಪಥ ಮೇಲ್ಸೇತುವೆ  ನಿರ್ಮಿಸಲು ಯೋಜನೆ ತಯಾರಿಸಲಾಗಿದೆ. ಸೇತುವೆಗೆ  ಅಗತ್ಯವಾದ ಸ್ಥಳ ಸ್ವಾಧೀನ ಮಾಡಲಾಗಿದೆ.  ಕಾಮಗಾರಿಯನ್ನು ಶೀಘ್ರವೇ ನಡೆಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.

ತಲಪಾಡಯಿಂದ  ಕಾಲಿಕಡವಿನ ತನಕ 87 ಕಿ.ಮೀ.ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆಗೆ  ಜಿಲ್ಲೆಯಲ್ಲಿ 110  ಹೆಕ್ಟೇರ್ ಸ್ಥಳ ಸ್ವಾಧೀನ ಪಡಿಸಿಕೊಳ್ಳಬೇಕಿದೆ. ಅದರಲ್ಲಿ 64 ಹೆಕ್ಟೇರ್ ಸ್ಥಳ ಸ್ವಾಧೀನಕ್ಕೆ 2011 ಮತ್ತು 2013 ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಅಧಿಸೂಚನೆ ಹೊರಡಿಸಿದ ಸ್ಥಳದ  ದಾಖಲೆ ಗಳ ಪರಿಶೀಲನೆ ನಡೆಸಲಾಗುತ್ತಿದೆ.

ಸ್ವಾಧೀನ ಪಡಿಸಿಕೊಳ್ಳುವ ಸ್ಥಳ, ಕಟ್ಟಡದ  ಬೆಲೆ ನಿಗದಿಯನ್ನು  ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ನಿರ್ಣಯಿಸುವರು.  ಮರ, ಕೃಷಿ ಬೆಳೆಗೆಳ ಬಗ್ಗೆ ಕೃಷಿ ಇಲಾಖೆ ಬೆಲೆ ನಿಗದಿಪಡಿಸಲಿದೆ. ಬಳಿಕ ವರದಿಯನ್ನು  ಅಧಿಕಾರಿಗಳಿಗೆ ಸಲ್ಲಿಸುವರು.  ನಷ್ಟ ಪರಿಹಾರ ನೀಡಿ  ಸ್ಥಳ ಸ್ವಾಧೀನ ಪಡಿಸುವ ಪ್ರಕ್ರಿಯೆ ಮಾರ್ಚ್ ತಿಂಗಳೊಳಗೆ ಪೂರ್ಣಗೊಳ್ಳಲಿದೆ.

ಸಂಸದ ಪಿ. ಕರುಣಾಕರನ್ , ಕೇಂದ್ರ ಹೆದ್ದಾರಿ ಸಚಿವಾಲಯ ಪ್ರತಿನಿಧಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ  ಪ್ರತಿನಿಧಿಗಳು, ರಾಜ್ಯ ಲೋಕೋಪಯೋಗಿ ಇಲಾಖೆ  ಅಧಿಕಾರಿಗಳು , ಜಿಲ್ಲಾಧಿಕಾರಿ ಮೊದಲಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News