ಉಡುಪಿ: ಆಸ್ಪತ್ರೆ ಖಾಸಗೀಕರಣ ವಿರೋಧಿಸಿ, ಕಪ್ಪು ಬಾವುಟ ಪ್ರದರ್ಶಿಸಿ ಸಿಪಿಎಂ ಪ್ರತಿಭಟನೆ
ಉಡುಪಿ, ಅ.30: ಉಡುಪಿ ಮಹಿಳಾ ಮತ್ತು ಮಕ್ಕಳ ಸರಕಾರಿ ಆಸ್ಪತ್ರೆಯ ಖಾಸಗೀಕರಣ ವಿರೋಧಿಸಿ ಹಾಗೂ ಮರಳು ಸಮಸ್ಯೆ ಶೀಘ್ರ ಪರಿಹಾರಕ್ಕೆ ಆಗ್ರಹಿಸಿ ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ರವಿವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಕಪ್ಪು ಬಾವುಟ ಪ್ರದರ್ಶಿಸಿ ಧರಣಿ ನಡೆಸಿತು.
ಧರಣಿಯನ್ನುದ್ದೇಶಿಸಿ ಮಾತನಾಡಿದ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಯಾರೊಂದಿಗೆ ಚರ್ಚೆ ಮಾಡದೆ ಈ ನಿರ್ಧಾರವನ್ನು ತೆಗೆದು ಕೊಂಡಿರುವುದು ಸರಿಯಲ್ಲ. ಗ್ಲೋಬಲ್ ಟೆಂಡರ್ ಕರೆಯದೆ ಏಕಪಕ್ಷೀಯವಾಗಿ ಏಕವ್ಯಕ್ತಿಗೆ ಆಸ್ಪತ್ರೆಯನ್ನು ವಹಿಸಿಕೊಡಲಾಗಿದೆ. ಇದರ ಹಿಂದೆ ಭಾರೀ ದೊಡ್ಡ ದುರುದ್ದೇಶ ಅಡಗಿದೆ ಎಂದರು.
1,800 ಕೋಟಿ ರೂ. ವೆಚ್ಚದಲ್ಲಿ ಉಕ್ಕಿನ ಸೇತುವೆ ನಿರ್ಮಿಸಲು ಹೊರಟ ರಾಜ್ಯ ಸರಕಾರಕ್ಕೆ 10 ಕೋಟಿ ರೂ. ವ್ಯಯ ಮಾಡಿ ಈ ಆಸ್ಪತ್ರೆಗೆ ಮೇಲ್ದರ್ಜೆಗೆ ಏರಿಸಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಸರಕಾರಕ್ಕೆ ಆಗದಿದ್ದರೆ ಉಡುಪಿಯ ಜನತೆಯೇ ಅದನ್ನು ಅಭಿವೃದ್ಧಿ ಪಡಿಸಲು ಸಿದ್ಧರಾಗಿದ್ದಾರೆ ಎಂದು ತಿಳಿಸಿದರು.
ಆಸ್ಪತ್ರೆಯ ಖಾಸಗೀಕರಣದ ಬದಲು ಈ ಆಸ್ಪತ್ರೆಯನ್ನು ಸರಕಾರವೇ ಮೇಲ್ದರ್ಜೆಗೆ ಏರಿಸಬೇಕು. ಶಿಥಿಲವಾಗಿರುವ ಕಟ್ಟಡವನ್ನು ದುರಸ್ತಿ ಮಾಡ ಬೇಕು. ಹೊಸ ಕಟ್ಟಡಗಳನ್ನು ರಚಿಸಿ ವಿಸ್ತರಿಸಬೇಕು. ವೈದ್ಯಾಧಿಕಾರಿಗಳಿಗೆ, ನರ್ಸ್‌ಗಳಿಗೆ ವಸತಿಗೃಹ ನಿರ್ಮಿಸಿ ರೋಗಿಗಳಿಗೆ ತಕ್ಷಣ ಪರಿಹಾರ ಸಿಗುವಂತೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಿಪಿಎಂ ಮುಖಂಡರಾದ ಕೆ.ಶಂಕರ್, ವೆಂಕಟೇಶ್ ಕೋಣಿ, ವಿಶ್ವನಾಥ ರೈ, ಸುರೇಶ್ ಕಲ್ಲಾಗರ್, ಕವಿರಾಜ್, ವಿಠಲ ಪೂಜಾರಿ, ಕೇಶವ ಕಾಪು ಮೊದಲಾದವರು ಉಪಸ್ಥಿತರಿದ್ದರು.