×
Ad

ಸತತ 114ನೇ ದಿನವೂ ಕಾಶ್ಮೀರದಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತ

Update: 2016-10-30 14:38 IST

ಶ್ರೀನಗರ,ಅ.30: ಇತ್ತೀಚಿನ ನಾಗರಿಕ ಹತ್ಯೆಗಳನ್ನು ವಿರೋಧಿಸಿ ಮತ್ತು ‘ಸ್ವಯಂ ನಿರ್ಧಾರ ’ ಹಕ್ಕಿಗಾಗಿ ತಮ್ಮ ಬೇಡಿಕೆಯನ್ನು ಬೆಂಬಲಿಸಿ ಪ್ರತ್ಯೇಕತಾವಾದಿಗಳು ಕರೆ ನೀಡಿದ್ದ ಮುಷ್ಕರದಿಂದಾಗಿ ಸತತ 114ನೇ ದಿನವಾದ ರವಿವಾರವೂ ಕಾಶ್ಮೀರದಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಅಧಿಕಾರಿಗಳು ಯಾವುದೇ ನಿರ್ಬಂಧಗಳನ್ನು ಹೇರಿರಲಿಲ್ಲವಾದರರೂ ಮುಷ್ಕರದ ಕರೆಯು ಸಾಮಾನ್ಯ ಜನಜೀವನದ ಮೇಲೆ ಪರಿಣಾಮ ಬೀರಿತ್ತು.

ಇಲ್ಲಿಯ ಸಂಡೆ ಮಾರ್ಕೆಟ್‌ನಲ್ಲಿ ಹಲವರು ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಹಾಕಿದ್ದು, ಖಾಸಗಿ ಕಾರುಗಳು ಮತ್ತು ಆಟೋರಿಕ್ಷಾಗಳು ಸಾಕಷ್ಟು ಸಂಖ್ಯೆಯಲ್ಲಿ ಸಂಚರಿಸುತ್ತಿದ್ದವು. ಆದರೆ ಕಣಿವೆಯ ಇತರ ಭಾಗಗಳಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿಯೇ ಮುಂದುವರಿದಿತ್ತು. ಅಂಗಡಿ-ಮುಂಗಟ್ಟುಗಳು, ಪೆಟ್ರೋಲ್ ಬಂಕ್‌ಗಳು ಮುಚ್ಚಿದ್ದು, ಪ್ರತ್ಯೇಕತಾವಾದಿಗಳು ಸಂಜೆ ಐದು ಗಂಟೆಯಿಂದ ಸಡಿಲಿಕೆಯನ್ನು ಘೋಷಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಆಯಕಟ್ಟಿನ ಸ್ಥಳಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

 ಈ ವರ್ಷದ ಜು.8ರಂದು ಹಿಝ್ಬುಲ್ ಉಗ್ರ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಸೃಷ್ಟಿಯಾಗಿರುವ ಅಶಾಂತಿಯ ನೇತೃತ್ವ ವಹಿಸಿರುವ ಪ್ರತ್ಯೇಕತಾವಾದಿಗಳು ನಿರಂತರವಾಗಿ ಬಂದ್ ಕರೆಗಳನ್ನು ನೀಡುತ್ತಿದ್ದಾರೆ. ಈ ಅಶಾಂತಿ ಈವರೆಗೆ ಇಬ್ಬರು ಪೊಲೀಸರು ಸೇರಿದಂತೆ 85ಜನರನ್ನು ಬಲಿ ಪಡೆದಿದ್ದು, ಇತರ ಸಾವಿರಾರು ಜನರು ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರೊಂದಿಗಿನ ಘರ್ಷಣೆಗಳಲ್ಲಿ ಸುಮಾರು 5000 ಭದ್ರತಾ ಸಿಬ್ಬಂದಿಗಳೂ ಗಾಯಗೊಂಡಿದ್ದಾರೆ. ಸಾರ್ವಜನಿಕ ಸುರಕ್ಷತಾ ಕಾಯ್ದೆಯ ಅಡಿ 300 ಕ್ಕೂ ಅಧಿಕ ಜನರ ವಿರುದ್ಧ ಮೊಕದ್ದಮೆಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News