×
Ad

ಮಾಜಿ ಪ್ರಧಾನಿಗಳನ್ನು ಅವಮಾನಿಸಿದ ರಾಮಗೋಪಾಲ್ ವರ್ಮಾ

Update: 2016-10-30 15:16 IST

ಮುಂಬೈ,ಅ.30: ಬಾಲಿವುಡ್ ನಿರ್ದೇಶಕ ರಾಮಗೋಪಾಲ್ ವರ್ಮಾಗೆ ವಿವಾದಗಳನ್ನು ಸೃಷ್ಟಿಸುವುದು ಅದೇಕೆ ಇಷ್ಟವೋ ಗೊತ್ತಿಲ್ಲ. ಇದೀಗ ಮತ್ತೆ ವಿವಾದವನ್ನು ಸೃಷ್ಟಿಸಿರುವ ಅವರು ಟ್ವಿಟರ್‌ನಲ್ಲಿ ಮಾಜಿ ಪ್ರಧಾನಿಗಳನ್ನು ಅವಮಾನಕ್ಕೆ ಗುರಿಯಾಗಿಸಿದ್ದಾರೆ. ತನ್ನ ಒರಟು ಟ್ವೀಟ್‌ಗಳಿಗಾಗಿ ಈ ಹಿಂದೆ ನೆಟ್ಟಿಗರಿಂದ ಸಾಕಷ್ಟು ಬೈಗುಳಗಳನ್ನು ತಿಂದಿರುವ ವರ್ಮಾ ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ, ಪಿ.ವಿ.ನರಸಿಂಹರಾವ್ ಮತ್ತು ಚಂದ್ರಶೇಖರ ಅವರ ವಿರುದ್ಧ ಅವಮಾನಕಾರಿ ಟ್ವೀಟ್‌ಗಳನ್ನು ಮಾಡುವ ಮೂಲಕ ಮತ್ತೊಮ್ಮೆ ಲಕ್ಷ್ಮಣ ರೇಖೆಯನ್ನು ಉಲ್ಲಂಘಿಸಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೂ ಸಾಕಷ್ಟು ಮುಜುಗರವನ್ನುಂಟು ಮಾಡಿದ್ದಾರೆ.

ವರ್ಮಾ ತನ್ನ ಸರಣಿ ಟ್ವೀಟ್‌ಗಳಲ್ಲಿ ಮಾಜಿ ಪ್ರಧಾನಿಗಳನ್ನು ಹಿಂದಿನ ಬೆಂಚಿನವರು, ಕೆಟ್ಟವರು ಮತ್ತು ಸ್ತ್ರೀಯರ ಬಗ್ಗೆ ಗೌರವವಿಲ್ಲದವರು ಎಂದು ಜರೆದಿದ್ದಾರೆ. ವಾಜಪೇಯಿ, ರಾವ್ ಮತ್ತು ಚಂದ್ರಶೇಖರ ಅವರು ಸಂಸತ್ತಿನಲ್ಲಿ ತಮಾಷೆಯ ಗಳಿಗೆಯೊಂದನ್ನು ಹಂಚಿಕೊಳ್ಳುತ್ತಿರುವ ಮತ್ತು ಅವರ ಮುಂದಿನ ಸಾಲಿನಲ್ಲಿ ಸೋನಿಯಾ ಆಸೀನರಾಗಿರುವ ಚಿತ್ರವೊಂದನ್ನೂ ಅವರು ಲೋಡ್ ಮಾಡಿದ್ದಾರೆ.

        ಶಾಲೆಯಲ್ಲಾಗಲೀ ಸಂಸತ್ತಿನಲ್ಲಾಗಲೀ ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳುವವರು ಯಾವಾಗಲೂ ಕೆಟ್ಟವರೇ ಆಗಿರುತ್ತಾರೆ. ಈ ಮೂವರು ಯಾರೆಂದು ಗೊತ್ತಿಲ್ಲ. ಆದರೆ ಕೆಟ್ಟವರಂತೆ ಕಾಣುತ್ತಿದ್ದಾರೆ. ಈ ಚಿತ್ರವು ಮಹಿಳೆಯರನ್ನು ಅಗೌರವಿಸುವ ಭಾರತೀಯ ಪುರುಷರ ಆಂತರಿಕ ಮನಃಸ್ಥಿತಿಯನ್ನು ಪ್ರತಿನಿಧಿಸುತ್ತದೆ. ಅವರು ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು ಎಂದು ವರ್ಮಾ ಟ್ವೀಟಿಸಿದ್ದಾರೆ.

ತನ್ನ ಟ್ವೀಟ್‌ನಲ್ಲಿ ಮುಗ್ಧನ ಸೋಗು ಹಾಕಿರುವ ಅವರು, ಈ ಮೂವರೂ ಯಾರೇ ಆಗಿರಲಿ, ಅವರು ತಮ್ಮ ಮುಂದೆ ಕುಳಿತಿರುವ ಗೌರವಸ್ಥ ಮಹಿಳೆಯ ಬಗ್ಗೆ ಪೋಲಿ ಜೋಕುಗಳನ್ನು ಮಾಡುತ್ತಿರುವುದು ತನಗೆ ಆಘಾತವನ್ನುಂಟು ಮಾಡಿದೆ ಎಂದು ಹೇಳಿಕೊಂಡಿದ್ದಾರೆ.

ಈ ಹಿಂದೆ ರಜನಿಕಾಂತ,ಎಲ್ಲರ ಇಷ್ಟದೈವ ಗಣೇಶ... ಇತ್ಯಾದಿ ವಿರುದ್ಧ ತನ್ನ ವಿವಾದಾತ್ಮಕ ಟ್ವೀಟ್‌ಗಳಿಂದ ವರ್ಮಾ ಸಾಕಷ್ಟು ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಇದೀಗ ಮೂವರು ಮಾಜಿ ಪ್ರಧಾನಿಗಳ ವಿರುದ್ಧ ಮಾಡಿರುವ ಈ ಟ್ವೀಟ್ ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರದಲ್ಲಿರುವ ಅವರ ಮುಂಬರುವ ಚಿತ್ರ ‘ಸರ್ಕಾರ್ 3’ರ ಪ್ರಚಾರ ತಂತ್ರವೇ ಎಂಬ ಅನುಮಾನ ಹಲವರನ್ನು ಕಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News