ಕಥುವಾ,ಸಾಂಬಾ ಮತ್ತು ಜಮ್ಮುವಿನಲ್ಲಿ ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ

Update: 2016-10-30 11:16 GMT

ಜಮ್ಮು,ಅ.30: ಸಾಂಬಾ,ಕಥುವಾ ಮತ್ತು ಜಮ್ಮು ಜಿಲ್ಲೆಗಳಲ್ಲಿ ಅಂತಾರಾಷ್ಟ್ರೀಯ ಗಡಿಯಲ್ಲಿ ಕಳೆದ ರಾತ್ರಿ ಕದನ ವಿರಾಮವನ್ನು ಉಲ್ಲಂಘಿಸಿರುವ ಪಾಕಿಸ್ತಾನಿ ರೇಂಜರ್‌ಗಳು ಬಿಎಸ್‌ಎಫ್ ಠಾಣೆಗಳು ಮತ್ತು ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಮಾರ್ಟರ್ ಶೆಲ್‌ಗಳು ಮತ್ತು ಗುಂಡಿನ ದಾಳಿಗಳನ್ನು ನಡೆಸಿದ್ದಾರೆ.

ಆರ್.ಎಸ್.ಪುರ ವಿಭಾಗದಲ್ಲಿ ರಾತ್ರಿ 11:15ಕ್ಕೆ ಪಾಕಿಸ್ತಾನದ ಕಡೆಯಿಂದ ಗುಂಡಿನ ದಾಳಿ ಆರಂಭಗೊಂಡಿದ್ದು, ನಸುಕಿನ 3 ಗಂಟೆಯವರೆಗೂ ಮುಂದುವರಿದಿತ್ತು. ಇದಕ್ಕೆ ಬಿಎಸ್‌ಎಫ್ ಸಮರ್ಥವಾಗಿ ಉತ್ತರಿಸಿದೆ ಎಂದು ಡಿಐಜಿ(ಬಿಎಸ್‌ಎಫ್ ಜಮ್ಮು ಮುಂಚೂಣಿ ವಿಭಾಗ) ಧಮೇಂದ್ರ ಪರೀಕ್ ಅವರು ರವಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಕಥುವಾದ ಹಿರಾನಗರ ಮತ್ತು ಸಾಂಬಾ ವಿಭಾಗಗಳಲ್ಲಿ ನಸುಕಿನ ಎರಡು ಗಂಟೆಗೆ ಆರಂಭಗೊಂಡ ಪಾಕ್ ದಾಳಿ ಬೆಳಗಿನ ಆರು ಗಂಟೆಯವರೆಗೂ ಮುಂದುವರಿದಿತ್ತು. ಬಿಎಸ್‌ಎಫ್ ಪ್ರತಿದಾಳಿ ನಡೆಸಿದ್ದು, ಬೆಳಿಗ್ಗೆ 8:20ಕ್ಕೆ ಅಂತಾರಾಷ್ಟ್ರೀಯ ಗಡಿಯ ಎಲ್ಲ ಕಡೆಗಳಲ್ಲಿ ಗುಂಡಿನ ಹಾರಾಟ ನಿಂತಿದೆ. ಈ ಎಲ್ಲ ದಾಳಿಗಳಲ್ಲಿ ನಮ್ಮ ಕಡೆ ಯಾವುದೇ ಸಾವುನೋವು ವರದಿಯಾಗಿಲ್ಲ ಎಂದರು.

ಭಾರತವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ದಾಳಿಗಳನ್ನು ನಡೆಸಿದ ಬಳಿಕ ಪಾಕಿಸ್ತಾನವು 60ಕ್ಕೂ ಅಧಿಕ ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News