×
Ad

ಎಲ್ಲಾ ಸಮಾಜದ ದುರ್ಬಲರ ಆರ್ಥಿಕ, ಸಾಮಾಜಿಕ ಸಶಕ್ತತೆಗೆ ಸಂಘಟಿತ ಪ್ರಯತ್ನ ಅಗತ್ಯ: ಸಿಎಂ

Update: 2016-10-30 17:03 IST

ಮಂಗಳೂರು, ಅ.30: ಎಲ್ಲಾ ಸಾಮಾಜದಲ್ಲಿರುವ ದುರ್ಬಲರ ಆರ್ಥಿಕ ಸಾಮಾಜಿಕ ಸಶಕ್ತತೆ ಸಂಘಟಿತ ಪ್ರಯತ್ನ ನಡೆಯಬೇಕು ಎಂದು ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬಂಟ್ವಾಳ ತಾಲೂಕು ಬಂಟರ ಸಂಘದ ನೂತನ ಬಂಟರ ಭವನದ ಉದ್ಘಾಟನಾ ಸಮಾರಂಭದಲ್ಲಿ ಅವರು ಗೌರವ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಬಂಟ ಸಮುದಾಯಕ್ಕೆ ಸೇರಿದವರು ರಾಜ್ಯಕ್ಕೆ ಮಾದರಿಯಾದ ಬಂಟರ ಭವನವನ್ನು ಬಂಟ್ವಾಳದಲ್ಲಿ ನಿರ್ಮಿಸಿದ್ದಾರೆ. ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಬಂಟರ ಭವನಕ್ಕೆ ರಾಜ್ಯ ಸರಕಾರದಿಂದ ಈಗಾಗಲೇ 50 ಲಕ್ಷ ರೂ. ಅನುದಾನ ನೀಡಲಾಗಿದೆ. ಹೆಚ್ಚುವರಿಯಾಗಿ 50 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು.

ದೇಶ ವಿದೇಶಗಳ ವಿವಿಧ ಕ್ಷೇತ್ರದಲ್ಲಿ ಬಂಟ ಸಮುದಾಯದ ವ್ಯಕ್ತಿಗಳು ಸಶಕ್ತರಾಗಿ ತಮ್ಮ ಸಾಧನೆಯನ್ನು ಮಾಡಿದ್ದಾರೆ. ಮಾನವ ಸಮಾಜಕ್ಕೆ ಸೇರಿದ ಎಲ್ಲಾ ಜಾತಿ, ಧರ್ಮದ ಸಮಾಜದವರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಶಕ್ತರಾದಾಗ ಅಭಿವೃದ್ಧಿ ಸಾಧ್ಯ ಈ ನಿಟ್ಟಿನಲ್ಲಿ ಆರ್ಥಿಕವಾಗಿ ಶ್ರೀಮಂತರಾಗಿರುವವರು ದುರ್ಬಲರ ಏಳಿಗೆಗೆ ಶ್ರಮಿಸಬೇಕಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಬಂಟ ಸಮಾಜದಲ್ಲಿ ಪುರುಷರೊಂದಿಗೆ ಮಹಿಳೆಯರಿಗೂ ಸಮಾನ ಸ್ಥಾನಮಾನವಿದೆ. ಕೃಷಿ ಪ್ರಧಾನವಾದ ಬಂಟ ಸಮಾಜ ಬಳಿಕ ಉದ್ಯಮರಂಗಕ್ಕೆ ಪ್ರವೇಶಿಸಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಒಂದು ಉದ್ಯಮ ಕ್ಷೇತ್ರದ ಮೂಲಕ ಸಾವಿರಾರು ಜನರಿಗೆ ಉದ್ಯೋಗ ನೀಡಬಹುದು. ಶಿಕ್ಷಣ,ಆರೋಗ್ಯ ಕ್ಷೇತ್ರದ ಮೂಲಕ ಬಂಟ ಸಮುದಾಯದ ಉದ್ಯಮಿಗಳು ಉನ್ನತ ಸಾಧನೆ ಮಾಡಿದ್ದಾರೆ,ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಯಾವುದೇ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರೆತಾಗ ಆ ಕುಟುಂಬ ಸುಶಿಕ್ಷಿತವಾಗಲು ಸಾಧ್ಯ. ಬಂಟ ಸಮುದಾಯದ ಮಹಿಳೆಯರಲ್ಲಿ ಸುಶಿಕ್ಷಿತರ ಸಂಖ್ಯೆ ಹೆಚ್ಚಿದೆ. ಸಾಹಸ ಪ್ರವೃತ್ತಿಯ ಬಂಟ ಸಮುದಾಯದ ವ್ಯಕ್ತಿಗಳು ಲಿಂಗ ಸಮಾನತೆ, ಸಾಕ್ಷರತೆಗೆ ಒತ್ತು ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಬಂಟರ ಭವನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆರ್ಶೀರ್ವಚನ ನೀಡಿದರು. ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿ ಗುತ್ತು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಭಾಕಾರ್ಯಕ್ರಮವನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಉದ್ಘಾಟಿಸಿದರು.

ಸಚಿವರಾದ ಬಿ.ರಮಾನಾಥ ರೈ, ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಮುಂಬಯಿಯ ಸಂಸದ ಗೋಪಾಲ ಶೆಟ್ಟಿ, ಶಾಸಕರಾದ ಅಭಯ ಚಂದ್ರ ಜೈನ್, ಜೆ.ಆರ್.ಲೋಬೊ, ಶಕುಂತಲಾ ಶೆಟ್ಟಿ, ಮೊಯ್ದೀನ್ ಬಾವ, ಐವನ್ ಡಿಸೋಜ, ಮುಂಬಯಿ ಕ್ರಿಕೆಟ್ ಅಸೋಸಿಯೇಶನ್‌ನ ಕಾರ್ಯದರ್ಶಿ ಡಾ.ಪಿ.ವಿ.ಶೆಟ್ಟಿ, ಉದ್ಯಮಿ ಡಾ.ಶಶಿಕಿರಣ್ ಶೆಟ್ಟಿ, ಪಿ.ವಿ.ಶೆಟ್ಟಿ, ಡಾ.ಆರ್.ಎನ್.ಶೆಟ್ಟಿ, ಪ್ರಕಾಶ್ ಶೆಟ್ಟಿ, ಎ.ಜೆ.ಶೆಟ್ಟಿ, ಎ.ಸದಾನಂದ ಶೆಟ್ಟಿ, ರವಿ ಶೆಟ್ಟಿ ಕತರ್, ಏರ್ಯ ಲಕ್ಷ್ಮೀನಾರಾಯಣ ಆಳ್ವ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಂಟ್ವಾಳ ತಾಲೂಕು ಬಂಟರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಬಹು ನಿರೀಕ್ಷೆಯಲ್ಲಿದ್ದ ರಾಜ್ಯ ಸಭಾ ಸದಸ್ಯ ಹಾಗೂ ಭಾರತ ಕ್ರಿಕೇಟ್ ತಂಡದ ಮಾಜಿ ನಾಯಕ ಸಚಿನ್ ತೆಂಡುಲ್ಕರ್ ಹಾಗೂ ಮಹಾರಾಷ್ಟ್ರದ ಮುಖ್ಯ ಮಂತ್ರಿ ದೇವೇಂದ್ರ ಫಡ್ನವೀಸ್‌ರವರ ಅನುಪಸ್ಥಿತಿ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಯಿತು. ಇಬ್ಬರು ಅನಿವಾರ್ಯ ಕಾರಣಗಳಿಂದ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ಸಂಘಟಕರು ಸಭೆಗೆ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಗ್ಗೆ ಪ್ರಸ್ತಾಪಿಸಿ ಮಹಾರಾಷ್ಟ್ರದ ಮುಖ್ಯಮಂತ್ರಿಯವರು ಬರ್ತಾರೆ ಎಂದಿದ್ದರು. ಬಂದಿದ್ದರೆ ಸಂತೋಷವಾಗುತ್ತಿತ್ತು ಎಂದರು.

ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ ಸಚಿನ್ ತೆಂಡುಲ್ಕರ್ ವಿದೇಶ ಪ್ರವಾಸದ ನಿಮಿತ್ತ ಕಾರ್ಯಕ್ರಮ ಹಾಜರಾಗಲಿಲ್ಲ ಇನ್ನೊಂದು ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಲಿದ್ದಾರೆ ಈ ಬಗ್ಗೆ ಮಂಬೈ ಕ್ರಿಕೆಟ್ ಅಸೋಸಿಯೇಶನ್‌ನ ಅಧ್ಯಕ್ಷ ಡಾ.ಪಿ.ವಿ.ಶೆಟ್ಟಿ ಈ ಹೊಣೆಯನ್ನು ವಹಿಸಿಕೊಂಡಿರುವುದಾಗಿ ಸಭೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News