×
Ad

ಕಾಪುವನ್ನು ತಾಲೂಕು ಕೇಂದ್ರವಾಗಿ ಘೋಷಿಸಲು ಒತ್ತಾಯಿಸಿ ಸೊರಕೆ ನೇತೃತ್ವದಲ್ಲಿ ಸಿಎಂಗೆ ಮನವಿ

Update: 2016-10-30 17:51 IST

ಕಾಪು, ಅ.30: ಕಾಪು ವಿಧಾನಸಭಾ ಕ್ಷೇತ್ರದ ಕಾಪುವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸುವಂತೆ ಕಾಪು ಶಾಸಕ ವಿನಯ ಕುಮಾರ್ ಸೊರಕೆ ನೇತೃತ್ವದಲ್ಲಿ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯರಿಗೆ ಮನವಿ ನೀಡಲಾಯಿತು.

ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಿಧಾನಸಭಾ ಕ್ಷೇತ್ರಗಳೂ ತಾಲೂಕು ಕೇಂದ್ರ ಸ್ಥಳಗಳಾಗಿದ್ದು, ಕಾಪು ಮಾತ್ರ ತಾಲೂಕು ಕೇಂದ್ರದ ಅವಕಾಶದಿಂದ ವಂಚಿತವಾಗಿದೆ. ಕಾಪು ಕ್ಷೇತ್ರ ವ್ಯಾಪ್ತಿಯಲ್ಲಿ 36 ಗ್ರಾಮಗಳಿದ್ದು, ಬ್ರಿಟಿಷರ ಕಾಲದಲ್ಲಿಯೇ ಇದೊಂದು ಕಂದಾಯ ಹೋಬಳಿ ಕೇಂದ್ರವೂ ಆಗಿತ್ತು. ಇಲ್ಲಿನ ಜನ ತಮ್ಮ ಅತ್ಯವಶ್ಯಕವಾದ ನೋಂದಣಿ ಕೆಲಸ ಕಾರ್ಯಗಳಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯನ್ನು ಆಶ್ರಯಿಸುವಂತಾಗಿದೆ. ಆದ್ದರಿಂದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಕಾಪುವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸುವಂತೆ ಮನವಿಯ ಮೂಲಕ ಒತ್ತಾಯಿಸಲಾಯಿತು.

ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿಗಳು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅತೀ ಶೀಘ್ರದಲ್ಲಿ ಕಾಪು ತಾಲೂಕು ಕೇಂದ್ರವಾಗುವ ಸಾಧ್ಯತೆಗಳು ನಿಚ್ಚಳವಾಗಿವೆ ಎಂದು ಶಾಸಕ ವಿನಯ ಕುಮಾರ್ ಸೊರಕೆ ತಿಳಿಸಿದ್ದಾರೆ.

ಕಾಪು ಪುರಸಬೆಯ ಅಧ್ಯಕ್ಷೆ ಸೌಮ್ಯಾ ಎಸ್., ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ, ಉತ್ತರ ಬ್ಲಾಕ್‌ನ ಅಧ್ಯಕ್ಷ ಸುಧೀರ್ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಸರಸು ಡಿ. ಬಂಗೇರ, ಉಪಾಧ್ಯಕ್ಷ ಎಚ್. ಉಸ್ಮಾನ್, ತಾ.ಪಂ. ಸದಸ್ಯರಾದ ಗೀತಾ ವಾಗ್ಲೆ, ಯು. ಸಿ. ಶೇಖಬ್ಬ, ದಿನೇಶ್ ಪಲಿಮಾರು, ಮೈಕಲ್ ಡಿಸೋಜ, ಪಕ್ಷದ ಮುಖಂಡರಾದ ಮುರಳಿ ಶೆಟ್ಟಿ ಇಂದ್ರಾಳಿ, ದೇವಿಪ್ರಸಾದ್ ಶೆಟ್ಟಿ, ಅಬ್ದುಲ್ ಅಝೀಜ್, ದೀಪಕ್ ಕುಮಾರ್ ಎರ್ಮಾಳ್, ವಿನಯ ಬಲ್ಲಾಳ್, ಮಹಾಬಲ ಕುಂದರ್, ಸುನೀಲ್ ಬಂಗೇರ, ಮಾಧವ ಆರ್. ಪಾಲನ್, ವೈ. ಗಂಗಾಧರ ಸುವರ್ಣ, ಪ್ರಶಾಂತ್ ಜತ್ತನ್ನ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News