×
Ad

ಅಲ್ಪಸಂಖ್ಯಾತರ ಭವನದಲ್ಲಿ ಮಾಹಿತಿ ಕೇಂದ್ರಕ್ಕೆ ಚಿಂತನೆ: ಸಚಿವ ತನ್ವೀರ್ ಸೇಠ್

Update: 2016-10-30 19:42 IST

ಮಂಗಳೂರು, ಅ. 30: ರಾಜ್ಯದಲ್ಲಿರುವ ಅಲ್ಪಸಂಖ್ಯಾತರ ಭವನಗಳಲ್ಲಿ ಮಾಹಿತಿ ಕೇಂದ್ರವನ್ನು ಸ್ಥಾಪಿಸಿ ಈ ಮೂಲಕ ಉದ್ಯೋಗ, ಶೈಕ್ಷಣಿಕ ಸೌಲಭ್ಯ ಮತ್ತು ಇತರ ಸರಕಾರಿ ಸೌಲಭ್ಯಗಳ ಬಗ್ಗೆ ಅಲ್ಪ ಸಂಖ್ಯಾತರಿಗೆ ಮಾಹಿತಿ ನೀಡುವ ಮಾಹಿತಿ ಕೇಂದ್ರವನ್ನು ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಅಲ್ಪಸಂಖ್ಯಾತರ ಮತ್ತು ವಕ್ಫ್ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ.

ಪಾಂಡೇಶ್ವರದ ಓಲ್ಡ್‌ಕೆಂಟ್ ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಜಿಲ್ಲಾ ಅಲ್ಪಸಂಖ್ಯಾತರ ಭವನವನ್ನು ಇಂದು ಉದ್ಘಾಟಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಇಲಾಖೆಗಳಿಗೆ ಜನರ ಅಲೆದಾಟ ತಪ್ಪಿಸಲು ಹಾಗೂ ಇಲಾಖೆಗಳು ಒಂದೇ ಸೂರಿನಡಿ ಕಾರ್ಯ ನಿರ್ವಹಿಸಬೇಕೆಂಬ ಸದುದ್ದೇಶದಿಂದ ಈ ಭವನ ನಿರ್ಮಿಸಲಾಗಿದೆ ಎಂದರು.

ದ.ಕ. ಜಿಲ್ಲೆಯಲ್ಲಿ ಇಂದು ರಾಜ್ಯದಲ್ಲೇ ಮೂರನೆ ಅಲ್ಪಸಂಖ್ಯಾತರ ಭವನ ಉದ್ಘಾಟನೆಗೊಂಡಿದ್ದು, ಬಾಗಲಕೋಟೆ ಮತ್ತು ಕೊಡಗು ಜಿಲ್ಲೆಗಳಲ್ಲಿ ಈಗಾಗಲೇ ಅಲ್ಪಸಂಖ್ಯಾತರ ಭವನ ಕಾರ್ಯಾಚರಿಸುತ್ತಿದೆ. ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮಂಗಳೂರಿನ ಭವನಕ್ಕೆ ಲಿಫ್ಟ್ ಸೌಲಭ್ಯ ಸಹಿತ ಸಣ್ಣ ಪುಟ್ಟ ಕಾಮಗಾರಿ ಬಾಕಿ ಇದ್ದು, ಇದಕ್ಕಾಗಿ ಹೆಚ್ಚುವರಿಯಾಗಿ 36 ಲಕ್ಷ ರೂ. ಬಿಡುಗಡೆಗೊಳಿಸಿದ್ದೇನೆ. ರಾಜ್ಯದ 6 ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತರ ಭವನ ಕಟ್ಟಡ ಕಾಮಗಾರಿಗಳು ಮುಗಿಯುವ ಹಂತದಲ್ಲಿದೆ ಎಂದು ತನ್ವೀರ್ ಸೇಠ್ ಹೇಳಿದರು.

ರಾಜ್ಯದ ಅಲ್ಪಸಂಖ್ಯಾತರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ವಿವಿಧ ಸೌಲಭ್ಯಗಳಿದ್ದು, ಅವುಗಳನ್ನು ಜನವರಿಗೆ ತಲುಪಿಸುವ ಕೆಲಸವಾಗಬೇಕು. ಕೇಂದ್ರ ಸರಕಾರದಿಂದ 4 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. ಅರ್ಜಿ ಸಲ್ಲಿಸಿದ ಎಲ್ಲಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರದಿಂದ ವಿದ್ಯಾರ್ಥಿವೇತನ ನೀಡಲಾಗುವುದು. ಈಗಾಗಲೇ 10,32,000 ಅಲ್ಪಸಂಖ್ಯಾತ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಪೋತ್ಸಾಹ ನೀಡುವ ಕೆಲಸ ನಡೆಯುತ್ತಿದ್ದು, ಇದಕ್ಕಾಗಿ 150 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ 60 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಆಯ್ಕೆ ಮಾಡಿದ ಈ ವಿದ್ಯಾರ್ಥಿಗಳಿಗೆ ಸಾಮಾನ್ಯ ಪರೀಕ್ಷೆ ನಡೆಸಿ ಅದರಲ್ಲೂ ಕೆಲವರನ್ನು ಆಯ್ಕೆ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿ ತರಬೇತಿಯನ್ನು ನೀಡುತ್ತಿದ್ದೇವೆ. ತರಬೇತಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮಾಹೆಯಾನ 8,000 ರೂ. ನೀಡಿ ಉತ್ತೇಜನ ನೀಡುತ್ತಿರುವುದಾಗಿ ಸಚಿವರು ಮಾಹಿತಿ ನೀಡಿದರು.
 
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ 98,593 ವಿದ್ಯಾರ್ಥಿಗಳು ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆದಿದ್ದಾರೆ. ಇದಕ್ಕಾಗಿ 43.4 ಕೋಟಿ ರೂ. ವೆಚ್ಚ ಮಾಡಲಾಗಿದೆ. ಜಿಲ್ಲೆಗೆ ನಾಲ್ಕು ಹಾಸ್ಟೆಲ್‌ಗಳು ಮಂಜೂರು ಆಗಿದ್ದು, ನಿವೇಶನ ದೊರೆತರೆ ಹಾಸ್ಟೆಲ್‌ನ ಕಾಮಗಾರಿಯನ್ನು ಪ್ರಾರಂಭಿಸುವುದಾಗಿ ಸಚಿವರು ತಿಳಿಸಿದರು.

ವಕ್ಫ್ ಆಸ್ತಿ ದುರುಪಯೋಗಕ್ಕೆ ಕ್ಷಮೆ ಇಲ್ಲ

ಕಳೆದ ಕೆಲವು ತಿಂಗಳುಗಳಿಂದ ವಕ್ಫ್ ಆಸ್ತಿಗಳ ಬಗ್ಗೆ ಗೊಂದಲ ಏರ್ಪಟ್ಟಿದ್ದು, ಚರ್ಚೆಗೆ ಗ್ರಾಸವಾಗುತ್ತಿದೆ. ವಕ್ಫ್ ಆಸ್ತಿ ದೇವರ ಆಸ್ತಿಯಾಗಿದ್ದು, ಅದನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ ಎಂಬುದನ್ನು ಭಾವಿಸಬೇಕು. ಈಗಾಗಲೇ ವಕ್ಫ್ ಆಸ್ತಿಯ ಬಗ್ಗೆ ಸರಕಾರ ಸರ್ವೆ ನಡೆಸಿದೆ. ಶೇ. 60ರಷ್ಟು ಸರ್ವೆ ಕಾರ್ಯ ಮುಗಿದಿದ್ದು, ಶೇ. 40 ಸರ್ವೆ ಆಗಬೇಕಿದೆ. ಸರ್ವೆ ಕಾರ್ಯದ ವರದಿಯ ಅಂಶಗಳನ್ನು ಪರಿಗಣಿಸಲಾಗಿದೆ. ವಕ್ಫ್ ಆಸ್ತಿಯ ದುರುಪಯೋಗ ಮಾಡಿದಾತನಿಗೆ ಕ್ಷಮೆ ನೀಡಲು ಸಾಧ್ಯವಿಲ್ಲ ಎಂದು ಸಚಿವರು ಎಚ್ಚರಿಕೆ ನೀಡಿದರು.

ಟಿಪ್ಪು ಬಗ್ಗೆ ಅಪಪ್ರಚಾರ ಬೇಡ

ರಾಜ್ಯ ಸರಕಾರದಿಂದ ಅನೇಕರ ಜಯಂತಿ ಆಚರಿಸುವಂತೆ ಟಿಪ್ಪು ಸುಲ್ತಾನ್‌ರ ಜಯಂತಿಯೂ ಆಚರಿಸುವಂತಾಗಬೇಕು. ಜನರ ನಂಬಿಕೆ ಮತ್ತು ವಿಶ್ವಾಸಕ್ಕೆ ಧಕ್ಕೆ ತರುವ ಕೆಲಸ ಯಾರೂ ಮಾಡಬಾರದು. ಟಿಪ್ಪು ಓರ್ವ ಆದರ್ಶ ವ್ಯಕ್ತಿ. ಆತನನ್ನು ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ, ಆತನ ಆದರ್ಶವನ್ನು ಜನರ ಮುಂದಿಡುವ ಕೆಲಸವಾಗಬೇಕು. ಆಸ್ತಿ-ಪಾಸ್ತಿ ರಕ್ಷಣೆಗೆ ಟಿಪ್ಪು ಕೊಡುಗೆ ಆಪಾರವಾಗಿದೆ. ರಾಜ್ಯದ ಕೆಲವು ದೇವಸ್ಥಾನಗಳ ರಕ್ಷಣೆಯಲ್ಲೂ ಆತನ ಪಾತ್ರವಿತ್ತು ಎಂಬುದನ್ನು ಇತಿಹಾಸ ಹೇಳುತ್ತದೆ. ಹೀಗಿರುವಾಗ ಆತನ ಬಗ್ಗೆ ಅಪಪ್ರಚಾರ ನಡೆಸುವುದು ಸರಿಯಲ್ಲ ಎಂದು ಸಚಿವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಅಧ್ಯಕ್ಷ ಜೆ.ಆರ್.ಲೋಬೊ ವಹಿಸಿದ್ದರು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಆಹಾರ ಸಚಿವ ಯು.ಟಿ.ಖಾದರ್, ಶಾಸಕ ಮೊದಿನ್ ಬಾವ, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ನಿರ್ದೇಶಕ ಅಕ್ರಂ ಪಾಶ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮ್ತಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಹಮೀದ್ ಕಂದಕ್, ಜಿ.ಪಂ. ಸದಸ್ಯ ಶಾಹುಲ್ ಹಮೀದ್, ಮನಪಾ ಕಾರ್ಪೊರೇಟರ್ ಅಬ್ದುಲ್ಲತೀಫ್ ಕಂದಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜನಪ್ರತಿನಿಧಿಗಳಿಗೆ ಅಗೌರವ: ಸಚಿವರಿಗೆ ದೂರು

ಇಂದು ಉದ್ಘಾಟನೆಗೊಂಡಿರುವ ದ.ಕ. ಜಿಲ್ಲಾ ಅಲ್ಪಸಂಖ್ಯಾತರ ಭವನ ಸಮಾರಂಭಕ್ಕೆ ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸದೆ ಅಗೌರವ ತೋರಲಾಗಿದೆ ಎಂದು ಕಾರ್ಪೊರೇಟರ್ ಲತೀಫ್ ಕಂದಕ್ ಸಚಿವ ತನ್ವೀರ್ ಸೇಠ್ ಅವರಲ್ಲಿ ದೂರಿಕೊಂಡರು.

ಪಾಂಡೇಶ್ವರ ವಾರ್ಡ್‌ನ ಕಾರ್ಪೊರೇಟರ್ ದಿವಾಕರ್ ಅವರಿಗೆ ಕಾರ್ಯಕ್ರಮದಲ್ಲಿ ಆಹ್ವಾನ ನೀಡಲಾಗಿಲ್ಲ. ತರಾತುರಿಯಲ್ಲಿ ಕಾರ್ಯಕ್ರಮದ ದಿನಾಂಕವನ್ನು ನಿಗದಿಪಡಿಸಲಾಗಿದೆ. ರವಿವಾರದ ಕಾರ್ಯಕ್ರಮಕ್ಕೆ ಶನಿವಾರ ಆಹ್ವಾನ ಪತ್ರಿಕೆಯನುನ ಮುದ್ರಿಸಲಾಗಿದೆ. ತಾನು ಈ ಸಮಿತಿಯಲ್ಲಿ ಇದ್ದರೂ ನನಗೆ ಆಹ್ವಾನ ನೀಡಿಲ್ಲ. ಶಾಸಕ ಜೆ.ಆರ್.ಲೋಬೊ ಅವರ ಆಹ್ವಾನದಂತೆ ನಾನು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದಾಗಿ ಹೇಳಿದರು.

ಕಾರ್ಯಕ್ರಮದ ಉದ್ಘಾಟನೆಯ ಸಂದರ್ಭದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಶಾಸಕರಾದ ಜೆ.ಆರ್.ಲೋಬೊ ಮತ್ತು ಮೊಯ್ದಿನ್ ಬಾವ ಅವರು ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿಯಿಂದ ಈ ಪ್ರಮಾದ ಉಂಟಾಗಿದೆ. ಕಾರ್ಯಕ್ರಮದ ಬಗ್ಗೆ ತನ್ನ ಕಚೇರಿಗೂ ಮಾಹಿತಿ ನೀಡಿಲ್ಲ. ಕನಿಷ್ಟ 10 ದಿನ ಮುಂಚಿತವಾದರೂ ತಿಳಿಸಬೇಕಿತ್ತು ಎಂದು ಲೊಬೋ ಹೇಳಿದರು.

ವಿಷಾದಿಸುತ್ತೇನೆ: ತನ್ವೀರ್ ಸೇಠ್

ಈ ಬಗ್ಗೆ ಉದ್ಘಾಟನಾ ಸಮಾರಂಭದಲ್ಲಿ ಪ್ರಸ್ತಾಪಿಸಿದ ಸಚಿವರು ಜಿಲ್ಲೆಯ ಜಿಲ್ಲಾಧಿಕಾರಿಯವರು ಇದರ ಜವಾಬ್ದಾರಿ ತೆಗೆದುಕೊಂಡು ಕಾರ್ಯ ನಿರ್ವಹಿಸಬೇಕಿತ್ತು. ಸ್ಥಳೀಯ ಜನಪ್ರತಿನಿಧಿಗಳನ್ನು ಗೌರವಿಸಿ ಅವರಿಗೆ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮ ನಡೆಸಬೇಕಾಗಿತ್ತು. ಆದರೆ, ಉಂಟಾಗಿರುವ ಪ್ರಮಾದಕ್ಕೆ ತಾನು ವಿಷಾದ ವ್ಯಕ್ತಪಡಿಸುವುದಾಗಿ ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News