ಕೌಕ್ರಾಡಿಯಲ್ಲಿ ಸೇತುವೆಗೆ ಮಿನಿ ಬಸ್ ಢಿಕ್ಕಿ ಪ್ರಕರಣ: ಬಸ್ ಚಾಲಕನಿಗೆ ಶಿಕ್ಷೆ
ಪುತ್ತೂರು, ಅ.30: ಪುತ್ತೂರು ತಾಲೂಕಿನ ಕೌಕ್ರಾಡಿ ಗ್ರಾಮದ ಪಾಲ್ತಾಜೆ ಎಂಬಲ್ಲಿ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಆರು ವರ್ಷದ ಹಿಂದೆ ಸಂಭವಿಸಿದ್ದ ರಸ್ತೆ ಅಪಘಾತ ಪ್ರಕರಣವೊಂದರಲ್ಲಿ ಇಬ್ಬರು ಪ್ರಯಾಣಿಕರ ಸಾವಿಗೆ ಕಾರಣವಾಗಿದ್ದ ಆರೋಪ ಎದುರಿಸುತ್ತಿದ್ದ ಮಿನಿ ಬಸ್ ಚಾಲಕನಿಗೆ ಪುತ್ತೂರು ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ಮತ್ತು ಒಟ್ಟು 7 ಸಾವಿರ ರೂ. ದಂಡ ವಿಧಿಸಿದೆ.
ಬಂಟ್ವಾಳ ತಾಲ್ಲೂಕಿನ ಕರ್ಪೆ ಗ್ರಾಮದ ಗುಳಿಗುರಿ ನಿವಾಸಿ ಭೀಮಣ್ಣ ನಾಯ್ಕ ಎಂಬವರ ಪುತ್ರ ಶೇಖರ್ ನಾಯ್ಕ ಶಿಕ್ಷೆಗೊಳಗಾದವರು.
ಪುತ್ತೂರು ತಾಲ್ಲೂಕಿನ ಕೌಕ್ರಾಡಿ ಗ್ರಾಮದ ವಾಲ್ತಾಜೆ ಎಂಬಲ್ಲಿ 2010ರ ಡಿಸೆಂಬರ್ 24ರಂದು ಈ ಘಟನೆ ನಡೆದಿತ್ತು. ಶೇಖರ್ ನಾಯ್ಕ ಬೆಂಗಳೂರಿನಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಮಿನಿ ಬಸ್ ಚಾಲಕನ ನಿಯಂತ್ರಣ ಕಳಕೊಂಡು ರಸ್ತೆ ಬದಿಯ ಸೇತುವೆಗೆ ಢಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಚೆನ್ನರಾಯಪಟ್ಟಣದ ದೊಡ್ಡಮನೆ ನಿವಾಸಿ ರಾಮೇಗೌಡ ಅವರ ಪುತ್ರ ರವಿ ಮತ್ತು ಮಂಗಳೂರಿನ ದೇರೆಬೈಲು ನಿವಾಸಿ ಗೋಪಾಲ ಅವರ ಪುತ್ರ ಗುರುರಾಜ್ ಎಂಬವರು ಮೃತಪಟ್ಟಿದ್ದರು. ಅಲ್ಲದೆ ಬಸ್ಸಿನಲ್ಲಿದ್ದ ಸಂದೀಪ್, ವಿನಯ, ಶಾಯಿನ, ರಾಮ ಪರಮೇಶ್, ಜಾನ್, ಗ್ರೇಸಿ ಮತ್ತು ಸದಾಶಿವ ಎಂಬವರು ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಶೇಖರ್ ನಾಯ್ಕ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ ಪುತ್ತೂರು ನ್ಯಾಯಾಲಯದ ನ್ಯಾಯಾಧೀಶ ಬಸವರಾಜ್ ಆರೋಪಿಯನ್ನು ಅಪರಾಧಿ ಎಂದು ಪರಿಗಣಿಸಿ ಶಿಕ್ಷೆ ನೀಡಿದ್ದಾರೆ. ಅಪರಾಧಿ ಶೇಖರ್‌ಗೆ ಐಪಿಸಿ ಸೆಕ್ಷನ್ 279 ಕ್ಕೆ ಸಂಬಂಧಿಸಿ 3 ತಿಂಗಳು ಜೈಲು ಶಿಕ್ಷೆ ಮತ್ತು 500 ರೂ. ದಂಡ, ಸೆಕ್ಷನ್ 337ಕ್ಕೆ ಸಂಬಂಧಿಸಿ 3 ತಿಂಗಳು ಜೈಲು ಮತ್ತು 500 ರೂ. ದಂಡ, ಸೆಕ್ಷನ್ 338ಕ್ಕೆ ಸಂಬಂಧಿಸಿ 1 ವರ್ಷ ಜೈಲು ಶಿಕ್ಷೆ ಮತ್ತು 1 ಸಾವಿರ ರೂ. ದಂಡ, ಸೆಕ್ಷನ್ 304ಕ್ಕೆ ಸಂಬಂಧಿಸಿ 1 ವರ್ಷ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಲಾಗಿದೆ.
ಪ್ರಾಸಿಕ್ಯೂಟರ್ ಪರ ಸರಕಾರಿ ಅಭಿಯೋಜಕ ಪ್ರತಾಪ್ ವಾದಿಸಿದ್ದರು.