ಉಡುಪಿ ಜಿಲ್ಲಾಸ್ಪತ್ರೆಗೆ ಹಾಜಿ ಅಬ್ದುಲ್ಲಾ ಹೆಸರು: ರಮೇಶ್ ಕುಮಾರ್

Update: 2016-10-30 15:24 GMT

ಉಡುಪಿ, ಅ.30: ನಮ್ಮ ಇಂದಿನ ಜನರಿಗೆ ಏನಾಗಿದೆ ಎಂದೇ ತಿಳಿಯುತ್ತಿಲ್ಲ. ತಮ್ಮ ಕಣ್ಣೆದುರೇ ಏನಾದರೂ ತಪ್ಪು ನಡೆದರೂ ಅದನ್ನು ತಪ್ಪೆಂದು ಹೇಳುವುದಿಲ್ಲ. ಆದರೆ ಬಡವರ ಒಳ್ಳೆಯದಕ್ಕೆ ಏನೇ ಕಾರ್ಯಕ್ರಮವನ್ನು ಘೋಷಿಸಿದರೂ, ಅದರಲ್ಲಿ ತಪ್ಪು ಹುಡುಕುವವರ ಸಂಖ್ಯೆ ಕಡಿಮೆ ಇಲ್ಲ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್ ಕುಮಾರ್ ವಿಷಾಧದಿಂದ ನುಡಿದಿದ್ದಾರೆ.

ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬೆಂಗಳೂರಿನ ಬಿ.ಆರ್.ಎಸ್.ಸ್ವಾಸ್ಥ ಮತ್ತು ಸಂಶೋಧನಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಿರ್ಮಾಣಗೊಳ್ಳುವ ‘ಕರ್ನಾಟಕ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಮೆಮೋರಿಯಲ್ ತಾಯಿ ಮತ್ತು ಮಕ್ಕಳ ಆಸ್ಪತ್ರೆ’ಯ ಶಂಕುಸ್ಥಾಪನೆ ಅಂಗವಾಗಿ ಅಜ್ಜರಕಾಡಿನ ಪುರಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆಸ್ಪತ್ರೆ ನಿರ್ಮಾಣದ ಒಡಂಬಡಿಕೆ ಪತ್ರವನ್ನು ಹಸ್ತಾಂತರಿಸಿ ಮಾತನಾಡುತಿದ್ದರು.

ಎರಡು ದಿನಗಳ ಹಿಂದಷ್ಟೇ ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಆದೇಶವಾದ ಅಜ್ಜರಕಾಡಿನ ಸರಕಾರಿ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್‌ರ ಕೋರಿಕೆಯಂತೆ ಮುಂದಿನೆರಡು ದಿನದೊಳಗೆ ‘ಹಾಜಿ ಅಬ್ದುಲ್ಲಾ ಜಿಲ್ಲಾಸ್ಪತ್ರೆ’ ಎಂದು ನಾಮಕರಣ ಮಾಡಲಾಗುವುದು ಎಂದರು.

ಮಂಗಳೂರಿನ ವೆನ್‌ಲಾಕ್ ಹಾಗೂ ಲೇಡಿಗೋಷನ್ ಆಸ್ಪತ್ರೆಯ ಸ್ಥಿತಿಯನ್ನು ನೋಡಿ ಕಣ್ಣಲ್ಲಿ ರಕ್ತ ಬರುತ್ತೆ. ಆ ಬಗ್ಗೆ ಯಾರೂ ಸಹ ಮಾತನಾಡುವುದಿಲ್ಲ. ಆದರೆ ಇಲ್ಲಿನ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರಕಾರಿ ಆಸ್ಪತ್ರೆಯಾಗಿ ಉಳಿಸಿಕೊಂಡು ಉದ್ಯಮಿಯೊಬ್ಬರು 200ಕೋಟಿ ರೂ.ವಿನಿಂದ ಅಭಿವೃದ್ಧಿ ಪಡಿಸಲು ಮುಂದಾದರೆ ಅದರ ವಿರುದ್ಧ ಹೋರಾಟ, ಧರಣಿ ಎಲ್ಲವನ್ನೂ ಮಾಡುತ್ತಾರೆ. ನಮ್ಮ ವಿರುದ್ಧ ಆರೋಪಗಳನ್ನು ಮಾಡುತ್ತಾರೆ ಎಂದರು.

ಮಂಗಳೂರು ಲೇಡಿಗೋಷನ್ ಆಸ್ಪತ್ರೆಗೆ ನಾನು ಇಲಾಖೆಯ ಪ್ರದಾನ ಕಾರ್ಯದರ್ಶಿಗಳೊಂದಿಗೆ ಭೇಟಿ ನೀಡಿದೆ. ಅಲ್ಲಿನ ಸ್ಥಿತಿ ನೋಡಿ ಬೇಸರವಾಯಿತು. ಅದನ್ನು ಈಗಿನ 270 ಹಾಸಿಗೆಗಳಿಂದ 500 ಹಾಸಿಗೆಗೆ ಏರಿಸಿ ಎಲ್ಲಾ ಸೌಲಭ್ಯ ನೀಡುತ್ತೇವೆ. ವೆನ್‌ಲಾಕ್ ಆಸ್ಪತ್ರೆಗೆ ಕಾಸರಗೋಡಿನಿಂದ ಸಾಕಷ್ಟು ರೋಗಿಗಳು ಬರುತ್ತಿರುವುದರಿಂದ ಕೇರಳ ರಾಜ್ಯದ ಆರೋಗ್ಯ ಸೌಲಭ್ಯ ನೀಡುವಂತೆ ಕೇರಳ ಸರಕಾರದೊಂದಿಗೆ ಮಾತನಾಡುವುದಾಗಿ ತಿಳಿಸಿದರು.

ಭಾಷಣದುದ್ದಕ್ಕೂ ಭಾವನಾತ್ಮಕವಾಗಿಯೇ ಮಾತನಾಡಿದ ಅವರು, 40 ವರ್ಷಗಳ ನನ್ನ ಸಾರ್ವಜನಿಕ ಜೀವನದಲ್ಲಿ ಹೋರಾಟ ನಡೆಸಿಕೊಂಡೇ ಬಂದವನು ನಾನು. ನನ್ನ ಮೇಲೆ ಆರೋಪ ಬಂದಾಗ ನೋವಾಗುತ್ತದೆ. ಸಾರ್ವಜನಿಕ ಜೀವನದುದ್ದಕ್ಕೂ ಯಾವ ಸನ್ನಿವೇಶದಲ್ಲೂ ನಾನು ರಾಜಿಯಾಗಿಲ್ಲ ಎಂದು ನೋವಿನಿಂದ ನುಡಿದರು.

ನಾನು ಸಚಿವನಾಗಿ ಬಡವರಿಗೆ ಒಳ್ಳೆಯ ಆರೋಗ್ಯ ಸೇವೆ ಸಿಗಬೇಕೆಂದು ಚಿಂತಿಸುತ್ತೇನೆಯೇ ಹೊರತು ಖಾಸಗಿಯವರ ಪರವಾಗಿ ಅಲ್ಲ. ಇಲಾಖಾ ಸುಧಾರಣೆಗಾಗಿ ಹೋರಾಟವನ್ನೇ ನಡೆಸುತ್ತಿದ್ದು, ಗುಣಮಟ್ಟದ ಆರೋಗ್ಯವೇ ನಮ್ಮ ಧ್ಯೇಯವಾಗಿದೆ. ಅದಕ್ಕೋಸ್ಕರ ನಿವೃತ್ತ ನ್ಯಾಯಮೂರ್ತಿ ವಿಕ್ರಂಜಿತ್ ಸೇನ್ ಅಧ್ಯಕ್ಷತೆಯಲ್ಲಿ ಆರೋಗ್ಯ ಇಲಾಖೆ ಆರೋಗ್ಯ ಸೇವೆಗಳ ಸುಧಾರಣೆ, ಖಾಸಗಿ ಆಸ್ಪತ್ರೆಗಳ ನಿಯಂತ್ರಣದ ಕುರಿತು ಎಂಟು ವಾರದಲ್ಲಿ ವರದಿ ನೀಡಲು ಕೇಳಿದ್ದೇವೆ ಎಂದು ವಿವರಿಸಿದರು.

ಸರಕಾರಿ ವೈದ್ಯಕೀಯ ಸೇವೆಯನ್ನು ಬಲಿಷ್ಠಗೊಳಿಸಿ, ಬಡವರಿಗೆ ಆರೋಗ್ಯ ನೀಡುವುದೇ ಇಲಾಖೆಯ ಧ್ಯೇಯವಾಗಿದೆ. ಎಲ್ಲ ತಾಲೂಕು ಕೇಂದ್ರಗಳಲ್ಲೂ ಡಯಾಲಿಸಿಸ್ ಸೇವೆ ಹಾಗೂ ತೀವ್ರನಿಗಾ ಘಟಕ (ಐಸಿಯು)ಗಳನ್ನು ಬಡವರಿಗೆ ಒದಗಿಸಲು ಕ್ರಮಕೈಗೊಳ್ಳಲಾಗಿದೆ. ಬಡವರ ಪರವಾಗಿ ಇಲಾಖೆ ಕೆಲಸ ಮಾಡುತ್ತಿದ್ದು, ಖಾಸಗೀಕರಣಕ್ಕೆ ಅವಕಾಶವಿಲ್ಲ ಎಂದರು.

ರಾಜ್ಯದಲ್ಲಿ ಪ್ರತಿವರ್ಷ 5000 ವೈದ್ಯರು ಪದವೀಧರರಾಗಿ ಹೊರಬರುತಿದ್ದಾರೆ. ಆದರೂ ರಾಜ್ಯದಲ್ಲಿ 1,183 ವೈದ್ಯರ ಹುದ್ದೆ ಖಾಲಿ ಇದೆ. ಒಂದು ಲಕ್ಷ ರೂ. ಸಂಬಳ ನೀಡುತ್ತೇವೆ ಎಂದರೂ ಹಳ್ಳಿಗಳಿಗೆ ಹೋಗಲು ವೈದ್ಯಕೀಯ ಪದವೀಧರರು ಒಪ್ಪುತ್ತಿಲ್ಲ ಎಂದು ರಮೇಶ್ ಕುಮಾರ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News