ಕಪ್ಪು ಬಾವುಟ ಪ್ರದರ್ಶನ: ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಬಂಧನ

Update: 2016-10-30 15:33 GMT

ಉಡುಪಿ, ಅ.30: ಉಡುಪಿ ಸರಕಾರಿ ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮಕ್ಕೆ ರವಿವಾರ ಮಧ್ಯಾಹ್ನ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲು ಪ್ರಯತ್ನಿಸಿದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನೂರಾರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಳಿಕ ಸಂಜೆ ಬಿಡುಗಡೆಗೊಳಿಸಿದರು.

ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಜೋಡುಕಟ್ಟೆಯಲ್ಲಿ ನಡೆದ ಪ್ರತಿಭಟನೆಯನ್ನು ದ್ದೇಶಿಸಿ ಮಾತನಾಡಿದ ಕಾರ್ಕಳ ಶಾಸಕ ಸುನೀಲ್ ಕುಮಾರ್, ಜಿಲ್ಲೆಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಡೀಲ್‌ಗಾಗಿ ಆಸ್ಪತ್ರೆಯನ್ನು ಖಾಸಗಿ ಕಂಪೆನಿಗೆ ವಹಿಸಿಕೊಡಲಾಗಿದೆ. ಇದಕ್ಕೂ ವಾಚ್ ಪ್ರಕರಣಕ್ಕೂ ಹೋಲಿಕೆ ಇದೆ. ಇದರ ವಿರುದ್ಧ ರಾಜ್ಯಮಟ್ಟದಲ್ಲಿ ಹೋರಾಟ ನಡೆಸಲಾ ಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಪಂ ಅಧ್ಯಕ್ಷ ದಿನಕರ ಬಾಬು, ಉದಯ ಕುಮಾರ್ ಶೆಟ್ಟಿ, ಯಶ್ಪಾಲ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಅಲ್ಲಿಂದ ಘೋಷಣೆಗಳನ್ನು ಕೂಗುತ್ತ ಮುಖ್ಯಮಂತ್ರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಅಜ್ಜರಕಾಡು ಪುರಭವನಕ್ಕೆ ಮೆರವಣಿಗೆ ಹೊರಟ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಡಯಾನ ಹೊಟೇಲ್ ಎದುರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ ನೇತೃತ್ವದಲ್ಲಿ ಪೊಲೀಸರು ತಡೆದು ಬಂಧಿಸಿದರು.

ಜೆಡಿಎಸ್ ವೌನ ಮೆರವಣಿಗೆ

ಸರಕಾರಿ ಆಸ್ಪತ್ರೆಯ ಖಾಸಗೀಕರಣ ವಿರೋಧಿಸಿ ರವಿವಾರ ಕಡಿಯಾಳಿಯಲ್ಲಿರುವ ಜೆಡಿಎಸ್ ಕಚೇರಿಯಿಂದ ವೌನ ಪ್ರತಿಭಟನಾ ಮೆರವಣಿಗೆ ಹೊರಟ ಜೆಡಿಎಸ್ ಮುಖಂಡರನ್ನು ಪೊಲೀಸರು ಕಲ್ಸಂಕ ಬಳಿ ತಡೆದು ಬಂಧಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ದಕ್ಷತ್ ಶೆಟ್ಟಿ, ಕಾರ್ಯಾಧ್ಯಕ್ಷ ವಾಸುದೇವ ರಾವ್, ಜಿಲ್ಲಾ ವಕ್ತಾರ ವಿಶ್ವನಾಥ ಬೆಳಪು, ಜಿಲ್ಲಾ ಸಂಚಾಲಕ ಗಂಗಾಧರ ಭಂಡಾರಿ ಬಿರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಹೆಜಮಾಡಿ, ರಾಜೇಶ್ ಆದಿಉಡುಪಿ, ಅಶೋಕ್ ಬೈಲಕೆರೆ, ಪಟ್ಲ ಅಣ್ಣಯ್ಯ ನಾಯಕ್, ದಿಲೇಶ್ ಶೆಟ್ಟಿ, ದಿವಾಕರ ಸಾಲ್ಯಾನ್, ವೇದಾವತಿ ಹೆಗ್ಡೆ, ವಿಶಾಲಕ್ಷಿ ಶೆಟ್ಟಿ ಮೊದಲಾದವರು ಇದ್ದರು.

ನಗರದಲ್ಲಿ ಬಿಗಿ ಪೊಲೀಸ್ ಭದ್ರತೆ

ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆ ಹಾಗೂ ನಗರದ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆಯ ಪ್ರಯುಕ್ತ ನಗರಾದ್ಯಂತ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು.

ಎಸ್ಪಿ ಕೆ.ಟಿ.ಬಾಲಕೃಷ್ಣ ನಿರ್ದೇಶನದಲ್ಲಿ ಹೆಚ್ಚುವರಿ ಎಸ್ಪಿ ವಿಷ್ಣುವರ್ಧನ್ ನೇತೃತ್ವದಲ್ಲಿ ಮೂವರು ಡಿವೈಎಸ್ಪಿ, ಎಂಟು ಮಂದಿ ಪೊಲೀಸ್ ನಿರೀಕ್ಷಕರು, 17 ಉಪ ನಿರೀಕ್ಷಕರು ಹಾಗೂ ಕೆಎಸ್‌ಆರ್‌ಪಿ, ಡಿಎಆರ್ ಸೇರಿದಂತೆ ಸುಮಾರು 400 ಪೊಲೀಸ್ ಸಿಬ್ಬಂದಿಗಳನ್ನುಭದ್ರತೆಗೆ ನಿಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News