ಪ್ರಾಂಶುಪಾಲರ ಮೇಲಿನ ಹಲ್ಲೆ ಪ್ರಕರಣ: ಸಚಿವ ಖಾದರ್ ವಿಷಾದ
ಮಂಗಳೂರು, ಅ. 30: ನಗರದ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರ ಮೇಲೆ ಅದೇ ಕಾಲೇಜಿನ ವಿದ್ಯಾರ್ಥಿಯೋರ್ವ ಹಲ್ಲೆ ನಡೆಸಿರುವುದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಘಟನೆಗೆ ಸಂಬಂಧಿಸಿ ಸಮುದಾಯದ ಪರವಾಗಿ ಕ್ಷಮೆ ಯಾಚಿಸುವುದಾಗಿ ಹೇಳಿದರು.
ಕಾಲೇಜಿನ ಓರ್ವ ಪ್ರಾಂಶುಪಾಲರಾಗಿ, ಧರ್ಮಗುರುಗಳಾಗಿರುವ ಫಾ.ಸಾಂತುಮೇಯರ್‌ರ ಮೇಲಿನ ಹಲ್ಲೆಯಿಂದ ಇಡೀ ಮುಸ್ಲಿಂ ಸಮುದಾಯಕ್ಕೆ ಬೇಸರವಿದೆ. ದ.ಕ. ಜಿಲ್ಲೆಯಲ್ಲಿ ಹಿಂದಿನಿಂದಲೂ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರೈಸ್ತರ ಕೊಡುಗೆ ಅಪಾರವಾಗಿದ್ದು, ಇದನ್ನು ಯಾರೂ ಮರೆಯುವಂತಿಲ್ಲ. ಇಂತಹ ವಿದ್ಯಾಸಂಸ್ಥೆಗಳು ಅನೇಕರಿಗೆ ವಿದ್ಯಾರ್ಜನೆ ಮಾಡಿದೆ. ಇದನ್ನು ವಿದ್ಯಾರ್ಥಿಗಳು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.
ಅಲ್ಪಸಂಖ್ಯಾತರ ಇಲಾಖೆಗೆ ಹಿಂದೆ 400 ಕೋಟಿ ರೂ. ಅನುದಾನ ಬಿಡುಗಡೆಯಾಗುತ್ತಿತ್ತು. ಆದರೆ ಈ ಬಾರಿ 1,400 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಜನರ ಎಲ್ಲಾ ಬೇಡಿಕೆಗಳು ಈಡೇರಿಸಲು ಸಾಧ್ಯವಾಗದಿದ್ದರೂ ಒದಗಿಸಲಾಗಿರುವ ಅನುದಾನದ ಸದ್ಬಳಕೆ ಮಾಡುವಂತೆ ಅಲ್ಪಸಂಖ್ಯಾತರಿಗೆ ಇದೇ ಸಂದರ್ಭದಲ್ಲಿ ಕರೆ ನೀಡಿದರು.
ಇಂದು ಉದ್ಘಾಟನೆಗೊಂಡಿರುವ ಅಲ್ಪಸಂಖ್ಯಾತರ ಭವನದಲ್ಲಿನ ಎಲ್ಲಾ ಇಲಾಖೆಗಳ ಕಾರ್ಯ ವೈಖರಿ ಕಂಪೂಟರೀಕರಣಗೊಳ್ಳಬೇಕು. ಈ ಮೂಲಕ ಫಲಾನುಭವಿಗಳಿಗೆ ಶೀಘ್ರ ಸ್ಪಂದನೆ ಸಿಗುವಂತಾಗಬೇಕು ಎಂದು ಖಾದರ್ ಹೇಳಿದರು.