ರಕ್ತಕ್ರಾಂತಿ ನಿಯಂತ್ರಣಕ್ಕೆ ಕೇರಳ ಸಿಎಂ ಜೊತೆ ಚರ್ಚೆ: ಸುರೇಶ್ ಗೋಪಿ

Update: 2016-10-30 17:37 GMT

ಮಂಗಳೂರು, ಅ.30: ಕೇರಳ ರಾಜ್ಯದಲ್ಲಿ 5-6 ದಶಕಗಳಲ್ಲಿ ನಡೆಯುತ್ತಿರುವ ಕಮ್ಯೂನಿಸ್ಟರ ರಕ್ತಕ್ರಾಂತಿ ನಿಯಂತ್ರಣಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆಗೆ ಮಾತುಕತೆ ನಡೆಸುವುದಾಗಿ ರಾಜ್ಯಸಭಾ ಸದಸ್ಯ ಸುರೇಶ್ ಗೋಪಿ ಹೇಳಿದರು.

ಅವರು ಇಂದು ಮಂಗಳೂರಿನ ಸಿಟಿಜನ್ ಕೌನ್ಸಿಲ್ ವತಿಯಿಂದ ನಗರದ ಸಂಘನಿಕೇತನದಲ್ಲಿ ಏರ್ಪಡಿಸಿದ ‘ಆಹುತಿ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಕೇರಳದ ಸಿಪಿಎಂ ನುಸುಳುಕೋರರು ಆರೆಸ್ಸೆಸ್ ಮತ್ತು ಬಿಜೆಪಿ ಸಂಘಟನೆಗಳಲ್ಲಿ ನುಸುಳಿಕೊಂಡು ಸಿದ್ಧಾಂತಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಈ ಕಾರಣದಿಂದ ರಕ್ತಕ್ರಾಂತಿಯ ರಾಜಕಾರಣ ಹೆಚ್ಚುತ್ತಿದೆ. ಇದಕ್ಕೆ ಇತಿಶ್ರೀ ಹಾಡಬೇಕು ಎಂದರು.

ಕಮ್ಯೂನಿಸ್ಟ್ ಸಿದ್ಧಾಂತ ಬಹಳ ಉತ್ತಮವಾಗಿತ್ತು. ದಕ್ಷಿಣ ಭಾರತದಲ್ಲಿ ಪಶ್ಚಿಮ ಬಂಗಾಲವನ್ನು ಹೊರತುಪಡಿಸಿದರೆ ಕೇರಳದಲ್ಲಿ ಕಮ್ಯೂನಿಸ್ಟ್ ಮಾದರಿಯಾಗಿತ್ತು ಎಂದ ಅವರು, ಹಾಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉತ್ತಮ ಆಡಳಿತಗಾರಾದರೂ, ತಮ್ಮ ಕಣ್ಣೂರಿನಲ್ಲಿ ನಡೆಯುತ್ತಿರುವ ರಾಜಕೀಯ ನರಮೇಧವನ್ನು ಹತ್ತಿಕ್ಕಲು ಅವರಿಂದ ಸಾಧ್ಯವಾಗಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಕೇರಳ ಆರೆಸ್ಸೆಸ್ ನೇತಾರ ಸದಾನಂದ ಮಾಸ್ತರ್, ಯುವ ಬ್ರಿಗೇಡ್ ಮುಖಂಡ ಚಕ್ರವರ್ತಿ ಸೂಲಿಬೆಲೆ ,ದೌರ್ಜನ್ಯಕ್ಕೊಳಗಾದ ಕಣ್ಣೂರು ಜಿಲ್ಲೆಯ ಎಳು ಕುಟುಂಬಗಳ ಸದಸ್ಯರಾದ ಸುಮೇಶ್, ಪ್ರಜೀಶ್, ಪ್ರಕಾಶ್ ಬಾಬು, ಪ್ರೇಮಜಿತ್ ಪಿಣರಾಯಿ, ಶೈಜೇಶ್ ಪಿಣರಾಯಿ, ಶಾಲಿನ್, ಪ್ರಕಾಶ್ ಕೂತುಪರಂಬ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News