×
Ad

ನ.2ರಂದು ಬೀದಿಬದಿ ವ್ಯಾಪಾರಸ್ಥರಿಂದ ಪ್ರತಿಭಟನಾ ರ್ಯಾಲಿ

Update: 2016-10-30 23:41 IST

ಉಡುಪಿ, ಅ.30: ಉಡುಪಿ ನಗರಸಭೆ ಮತ್ತು ಜಿಲ್ಲೆಯ ಇತರ ಸ್ಥಳೀಯ ಆಡಳಿತ ಸಂಸ್ಥೆಗಳ ಬಡತನ ವಿರೋಧಿ, ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಹಾಗೂ ಬೀದಿಬದಿ ವ್ಯಾಪಾರಸ್ಥರ ಹಕ್ಕುಗಳಿಗೆ ಆಗ್ರಹಿಸಿ ಉಡುಪಿ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ(ಸಿಐಟಿಯು)ದ ವತಿಯಿಂದ ನ.2ರಂದು ಬೆಳಗ್ಗೆ 10ಕ್ಕೆ ಉಡುಪಿ ಬಸ್ ನಿಲ್ದಾಣದ ಬಳಿಯ ಮಹಾತ್ಮಾಗಾಂಧಿ ಕಟ್ಟೆಯಿಂದ ಉಡುಪಿ ನಗರಸಭೆವರೆಗೆ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.
ಬೀದಿಬದಿ ವ್ಯಾಪಾರಸ್ಥರ ಬದುಕನ್ನು ಉತ್ತಮಗೊಳಿಸುವುದಕ್ಕಾಗಿ ದೇಶದ ಸಂಸತ್ತಿನಲ್ಲಿ ಕಾನೂನು ಅಂಗೀಕರಿಸಲ್ಪಟ್ಟು ಬೀದಿಬದಿ ವ್ಯಾಪಾರಗಳ ಅಧಿ ನಿಯಮ 2014 ಕರ್ನಾಟಕದಲ್ಲಿ ಜಾರಿಗೆ ಬಂದಿದೆ. ಆದರೆ ಸರಕಾರಗಳು ಕಾನೂನು ಮತ್ತು ಅಧಿನಿಯಮಗಳ ಆಧಾರದಲ್ಲಿ ನಿಯಮಾವಳಿಗಳನ್ನು ಅನುಷ್ಠಾನಗೊಳಿಸಲು ಮೀನಮೇಷ ಎಣಿಸುತ್ತಿದೆ ಎಂದು ಸಂಘವು ಆರೋಪಿಸಿದೆ.
ಸ್ಥಳೀಯ ಸಂಸ್ಥೆಗಳು ಬೀದಿಬದಿ ವ್ಯಾಪಾರಸ್ಥರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದೆ, ಈ ಕಸುಬು ನಡೆಸುವ ಪ್ರಜೆಗಳನ್ನು ಕ್ರಿಮಿನಲ್‌ಗಳಾಗಿ ಪರಿಗಣಿಸಿ ವಿನಾಕಾರಣ ದಾಳಿ ನಡೆಸಿ ಮಾರಾಟದ ಸರಕುಗಳನ್ನು ಹಾಳು ಮಾಡಲಾಗುತ್ತಿದೆ. ಕೆಲವೊಮ್ಮೆ ಅಮಾಯಕ ಬೀದಿಬದಿ ವ್ಯಾಪಾರಸ್ಥರ ಮೇಲೆ ಆಕ್ರಮಣ ಕೂಡಾ ನಡೆಸಲಾಗುತ್ತಿದ್ದು, ಬೀದಿಬದಿ ವ್ಯಾಪಾರಸ್ಥರನ್ನು ಎತ್ತಂಗಡಿ ಮಾಡುವ ಸಂಚು ನಡೆಸಲಾಗುತ್ತಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News