×
Ad

ನ.5: ಮಂಜುನಾಥ ನಗರ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ

Update: 2016-10-31 18:04 IST

ಪುತ್ತೂರು,ಅ.31: ತಾಲೂಕಿನ ಪಾಲ್ತಾಡಿ ಗ್ರಾಮದ ಮಂಜುನಾಥನಗರದಲ್ಲಿ ಸುಮಾರು 1.25 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನಾ ಸಮಾರಂಭ ನ.5ರಂದು ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಲಿದ್ದಾರೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಆರಂಭಿಕ ಸಮಿತಿ ಅಧ್ಯಕ್ಷ ಬಿ.ಕೆ. ರಮೇಶ್ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಭಾ ಕಾರ್ಯಕ್ರಮವನ್ನು ರಾಜ್ಯ ಆರೋಗ್ಯ ಸಚಿವ ಕೆ.ಆರ್. ರಮೇಶ್ ಕುಮಾರ್ ಉದ್ಘಾಟಿಸಲಿದ್ದಾರೆ. ಶಾಸಕ ಎಸ್. ಅಂಗಾರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದ ಅವರು ಈಗಾಗಲೇ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಓರ್ವ ವೈದ್ಯಾಧಿಕಾರಿ ಹಾಗೂ ಶುಶ್ರೂಷಕಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅಲ್ಲದೆ ಸಿಬ್ಬಂದಿ, ಪ್ರಯೋಗಶಾಲೆ, ತಂತ್ರಜ್ಞ, ಹಿರಿಯ ಆರೋಗ್ಯ ಸಹಾಯಕಿ, ಫಾರ್ಮಲಿಸ್ಟ್ ಹುದ್ದೆಗಳು ಮಂಜಾರಾಗಿಗೊಂಡಿದೆ. ಆರೋಗ್ಯ ಕೇಂದ್ರಕ್ಕೆ ಬೇಕಾಗಿರುವ ಪ್ರಯೋಗಾಲಯದ ಪರಿಕರಗಳು, ಔಷಧಿಗಳು ಹಾಗೂ ಇನ್ನುಳಿದ ಮೂಲಭೂತ ಸೌಕರ್ಯಗಳನ್ನು ಜಿಲ್ಲಾ ವೈದ್ಯಾಧಿಕಾರಿಗಳು ಒದಗಿಸಿಕೊಡಲಿದ್ದಾರೆ. ಆರೋಗ್ಯ ಕೇಂದ್ರದ ಸಂಪರ್ಕ ರಸ್ತೆಯಾದ ಪರಣಿ- ಅಂಕತಡ್ಕ ರಸ್ತೆ ಡಾಂಬರೀಕರಣವಾಗಬೇಕಾಗಿದೆ.

ನೂತನ ಆರೋಗ್ಯ ಕೇಂದ್ರವು ಪುತ್ತೂರು ತಾಲೂಕಿನ ಪಾಲ್ತಾಡಿ, ಸವಣೂರು, ಪುಣ್ಚಪ್ಪಾಡಿ, ಸುಳ್ಯ ತಾಲೂಕಿನ ಪೆರುವಾಜೆ ಹಾಗೂ ಕುದ್ಮಾರು ಗ್ರಾಮಗಳ ವ್ಯಾಪ್ತಿಯ ಸುಮಾರು 10 ಸಾವಿರ ಜನಸಂಖ್ಯೆಯನ್ನು ಒಳಗೊಂಡಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಬಿ.ಕೆ, ಪ್ರಾಥಮಿಕ ಆರೋಗ್ಯ ಕೇಂದ್ರದ ಆರಂಭಿಕ ಸಮಿತಿ ಸದಸ್ಯರಾದ ಗಣೇಶ್ ಶೆಟ್ಟಿ, ಸುಧಾಕರ ರೈ ಮತ್ತು ಪ್ರಸಾದ್ ರೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News