ಮೀನುಗಾರ ಕುಟುಂಬಕ್ಕೆ 4 ಕೋಟಿ ರೂ.ಅನುದಾನ: ಕಿಶೋರ್ ಆಳ್ವ

Update: 2016-10-31 12:56 GMT

ಪಡುಬಿದ್ರಿ, ಅ.25: ಪಡುಬಿದ್ರಿ ಪರಿಸರದ ಮೀನುಗಾರ ಕುಟುಂಬದ ಜೀವನ ಸುಧಾರಣೆಗಾಗಿ ಅದಾನಿ ಯುಪಿಸಿಎಲ್ ಸುಮಾರು 4 ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸಲಿದೆ ಎಂದು ಯುಪಿಸಿಎಲ್‌ನ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಹೇಳಿದ್ದಾರೆ.

ಅದಾನಿ ಯುಪಿಸಿಎಲ್ ಕಂಪೆನಿ ಸಿಎಸ್‌ಆರ್ ನಿಧಿಯಿಂದ 15.75 ಲಕ್ಷ ರೂ.ವೆಚ್ಚದಲ್ಲಿ ಪಿಲಾರು ಮಿತ್ತಬೆಟ್ಟು ನಡುವೆ ನಿರ್ಮಿಸಿದ 325ಮೀ. ಉದ್ದದ ಕಾಂಕ್ರೀಟಿಕರಣಗೊಂಡ ರಸ್ತೆಯನ್ನು ಲೋಕಾರ್ಪಣೆಗೊಳಿಸಿ ಕಿಶೋರ್ ಆಳ್ವ ಮಾತನಾಡುತಿದ್ದರು.

 ಅದಾನಿ ಯುಪಿಸಿಎಲ್ ಕಂಪೆನಿ ಸಿಎಸ್‌ಆರ್ ನಿಧಿಯಿಂದ 15.75 ಲಕ್ಷ ರೂ.ವೆಚ್ಚದಲ್ಲಿ ಪಿಲಾರು ಮಿತ್ತಬೆಟ್ಟು ನಡುವೆ ನಿರ್ಮಿಸಿದ 325ಮೀ. ಉದ್ದದ ಕಾಂಕ್ರೀಟಿಕರಣಗೊಂಡ ರಸ್ತೆಯನ್ನು ಲೋಕಾರ್ಪಣೆಗೊಳಿಸಿ ಕಿಶೋರ್ ಆಳ್ವ ಮಾತನಾಡುತಿದ್ದರು. ಈಗಾಗಲೇ ಯುಪಿಸಿಎಲ್ ವತಿಯಿಂದ 302 ಕೈರಂಪಣಿ ಮೀನುಗಾರ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂ.ನಂತೆ 3.20 ಕೋಟಿ ರೂ. ಅನುದಾನವನ್ನು ವಿತರಿಸಲಾಗಿದೆ. ಈಗ ಈ ಅನುದಾನವನ್ನು ನಾಡದೋಣಿ ಕಂತಲೆ ಮೀನುಗಾರರ ಕುಟುಂಬಗಳಿಗೂ ವಿಸ್ತರಿಸಲು 4 ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸಲಾಗುವುದು ಎಂದವರು ಘೋಷಿಸಿದರು. ಮುದರಂಗಡಿ ಗ್ರಾಪಂ ಅಧ್ಯಕ್ಷ ಡೇವಿಡ್ ಡಿಸೋಜ ಹಾಗೂ ಆಳ್ವ ರಸ್ತೆಯನ್ನು ಉದ್ಘಾಟಿಸಿದರು.

 ಮುದರಂಗಡಿ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅದಾನಿ ಯುಪಿಸಿಎಲ್ 4.65 ಕೋಟಿರೂ. ಅನುದಾನ ಬಿಡುಗಡೆ ಮಾಡಿದೆ. ಈ ಅನುದಾನದಡಿ ಗ್ರಾಪಂ ನೀಡಿರುವ ಕ್ರಿಯಾಯೋಜನೆಯಂತೆ ಕಂಪೆನಿ ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸುತ್ತಿದ್ದು, ಮುಂದಿನ ವಾರ ಸುಮಾರು 42 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟೀಕರಣ ಗೊಳಿಸಿದ ಸಾಂತೂರು ಗ್ರಾಮದ ಹೊಗೆಮಾರು ರಸ್ತೆ ಹಾಗೂ ಆಲು ಬ್ರಹ್ಮಸ್ಥಾನ ರಸ್ತೆ ಲೋಕಾರ್ಪಣೆಗೊಳ್ಳಲಿದೆ ಎಂದು ಕಿಶೋರ್ ಆಳ್ವ ತಿಳಿಸಿದರು.

ನಾಡದೋಣಿ ಕಂತಲೆ ಮೀನುಗಾರ ಕುಟುಂಬಕ್ಕೂ ಸಿಎಸ್‌ಆರ್ ನಿಧಿಯಡಿ ಅನುದಾನ ನೀಡುವಂತೆ ಜಿಸ್ಸಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಶಾಸಕ ವಿನಯಕುಮಾರ್‌ಸೊರಕೆ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಲಾಲಾಜಿ ಮೆಂಡನ್, ಸಮಾಜ ಸೇವಕ ಡಾ. ಜಿ.ಶಂಕರ್ ಮುಂತಾದವರ ಮನವಿಯಂತೆ ಈ ನಿಧಿಯನ್ನು ಒದಗಿಸಲಾಗಿದೆ ಎಂದವರು ನುಡಿದರು.

ಮಳೆಗಾಲದಲ್ಲಿ ಮಿತ್ತಬೆಟ್ಟು ಗ್ರಾಮಸ್ಥರು ಅನುಭವಿಸುತಿದ್ದ ಸಂಕಷ್ಟ ರಸ್ತೆಯ ಕಾಂಕ್ರೆಟೀಕರಣದಿಂದ ದೂರವಾಗಿದ್ದು ಇದರಿಂದ ವಿಶೇಷವಾಗಿ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದುಗ್ರಾಮಸ್ಥರಾದ ಜರನ್ ಡಿಸೋಜ ಹಾಗೂ ರೈನಾ ಡಿಸೋಜ ಸಂತಸ ವ್ಯಕ್ತಪಡಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಪಂಚಾಯತ್ ಉಪಾಧ್ಯಕ್ಷೆ ಜಯಂತಿ ಪೂಜಾರ್ತಿ, ಸದಸ್ಯರಾದ ಸುಕುಮಾರ್ ಶೆಟ್ಟಿ, ಗ್ಯಾಬ್ರಿಯಲ್ ಮಥಾಯಸ್, ವಿನೋಧ ಪೂಜಾರ್ತಿ, ಶೋಭಾ ಫೆರ್ನಾಂಡೀಸ್, ಅದಾನಿ ಯುಪಿಸಿಎಲ್‌ನ ಎಜಿಎಂ ಗಿರೀಶ್ ನಾವಡ, ಪ್ರಬಂಧಕರಾದ ರವಿ ಜೀರೆ, ವಸಂತಕುಮಾರ್ ಮತ್ತು ಅದಾನಿ ಫೌಂಡೇಶನ್‌ನ ಸುಕೇಶ್ ಸುವರ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News