ಕ್ರಿಕೆಟ್ ಪಂದ್ಯಕೂಟ: ಪಡುಬಿದ್ರಿ ಫ್ರೆಂಡ್ಸ್‌ಗೆ ನೇತಾಜಿ ಟ್ರೋಫಿ

Update: 2016-10-31 13:07 GMT

ಪರ್ಕಳ, ಅ.31: ಪರ್ಕಳದ ನೇತಾಜಿ ಸ್ಪೋರ್ಟ್ಸ್ ಕ್ಲಬ್‌ನ ಆಶ್ರಯದಲ್ಲಿ 40ನೆ ವರ್ಷದ ಕ್ರಿಕೆಟ್ ಪಂದ್ಯಕೂಟ ‘ನೆನಪು ನೇತಾಜಿ ಕ್ರಿಕೆಟ್ ಟ್ರೋಫಿ’ ಯನ್ನು ಪಡುಬಿದಿ್ರ ಫ್ರೆಂಡ್ಸ್ ತಂಡ ಗೆದ್ದು ಕೊಂಡಿದೆ.

ಹದಿನೈದು ಓವರುಗಳ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಶಿರ್ವದ ಬ್ಲೂಸ್ಟಾರ್ ತಂಡವು 14.3 ಓವರುಗಳಲ್ಲಿ 92 ರನ್‌ಗಳಿಗೆ ಸರ್ವ ಪತನವನ್ನು ಕಂಡಿತು. ವಿಜಯದ ಗುರಿಯನ್ನು ಬೆನ್ನತ್ತಿದ ಪಡುಬಿದ್ರಿ ತಂಡ 7ನೆಯ ಓವರಿನಲ್ಲಿ 8 ವಿಕೆಟ್‌ಗಳ ಅಂತರದ ಜಯವನ್ನು ಕಂಡಿತು. ಮೊದಲ ಉಪಾಂತ್ಯ ಪಂದ್ಯದಲ್ಲಿ ಪಡುಬಿದ್ರಿ ಫ್ರೆಂಡ್ಸ್ ತಂಡವು ಆದರ್ಶ್ ಕಾಡಬೆಟ್ಟು ತಂಡವನ್ನು ಮತ್ತು ಎರಡನೆಯ ಉಪಾಂತ್ಯ ಪಂದ್ಯದಲ್ಲಿ ಬ್ಲೂಸ್ಟಾರ್ ತಂಡವು ಸನ್ನಿ ಉಡುಪಿ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದವು.

 ಸರ್ವಾಂಗೀಣ ಪ್ರದರ್ಶನ ನೀಡಿದ ನಿತಿನ್ ಮೂಲ್ಕಿ ಸರಣಿ ಶ್ರೇಷ್ಠ, ಪಡುಬಿದ್ರಿ ತಂಡದ ವಿನ್ಸೆಂಟ್ ಉತ್ತಮ ದಾಂಡಿಗ, ಅದೇ ತಂಡದ ರಫೀಕ್ ಉತ್ತಮ ಬೌಲರ್ ಮತ್ತು ಬ್ಲೂಸ್ಟಾರಿನ ಶಿವಪ್ರಸಾದ್ ಉತ್ತಮ ಕ್ಷೇತ್ರ ರಕ್ಷಕ ಪ್ರಶಸ್ತಿಯನ್ನು ಗೆದ್ದು ಕೊಂಡರು. ಉಡುಪಿಯ ಸ್ಪೋರ್ಟಿವ್ ತಂಡವು ಶಿಸ್ತು ಬದ್ಧ ತಂಡವೆಂಬ ಗೌರವಕ್ಕೆ ಭಾಜನವಾಯಿತು.

ಪಂದ್ಯಾಟದ ಉದ್ಘಾಟನೆಯನ್ನು ಮಂಜುನಾಥ ಉಪಾಧ್ಯ ಮತ್ತು ಹಾಜಿ ಕೆ.ಅಬೂಬಕರ್ ನೆರವೇರಿಸಿದರು. ಸಮಾರೋಪ ಸಮಾರಂಭದಲ್ಲಿ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ರಘುಪತಿ ಭಟ್ ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು.

ಬಳಿಕ ಮಾತನಾಡಿದ ಮಾಜಿ ಶಾಸಕ ರಘುಪತಿ ಭಟ್, ನಾನು ಶಾಸಕ ನಾಗಿದ್ದಾಗ ಕ್ರಿಕೆಟ್‌ಗಾಗಿ ಮೀಸಲಿರಿಸಿದ್ದ ಬೀಡಿನಗುಡ್ಡೆ ಮೈದಾನವನ್ನು ನಂತರ ಬಂದ ಶಾಸಕರು ಆ ಜಾಗದ ಮಧ್ಯೆ ರಸ್ತೆಯನ್ನು ತಂದರು. ಅದರಲ್ಲಿನ 50 ಸೆಂಟ್ಸ್ ಜಾಗವನ್ನು ಆಫೀಸರ್ಸ್‌ ಕ್ಲಬ್ಬಿಗೆ ನೀಡಿದರು. ಈ ಮೂಲಕ ಕೈಗೆ ಬಂದ ಬಂಗಾರದಂತಹ ಮೈದಾನದ ಅವಕಾಶವನ್ನು ಕೈಚೆಲ್ಲಿದರು. ದೊಡ್ಡನಗುಡ್ಡೆ ಯಲ್ಲಿರುವ ತೋಟಗಾರಿಕಾ ಇಲಾಖೆಯ 17 ಎಕರೆ ಪಾಳು ಬಿದ್ದಿರುವ ಸ್ಥಳವನ್ನು ಮೈದಾನ ರಚಿಸಲು ಉಪಯೋಗಿಸಬಹುದೆಂದರು.

ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಬೀಡಿನಗುಡ್ಡೆಯಲ್ಲಿ ಈಗ ಅಭಿವೃದ್ಧಿ ಪಡಿಸಲಾದ ಬಯಲು ರಂಗ ಮಂದಿರದ ಜಾಗ ಮಾತ್ರ ಸರಕಾರದ ಜಾಗವಾಗಿದ್ದು, ಉಳಿದ ಜಾಗವು ಪಟ್ಟಾ ಸ್ಥಳವಾಗಿದೆ. ಅಲ್ಲಿ ಸರಕಾರದ ವತಿಯಿಂದ ಮೈದಾನವನ್ನು ರಚಿಸಲು ಅವಕಾಶವಿಲ್ಲ. ದೊಡ್ಡಣಗುಡ್ಡೆಯ ತೋಟಗಾರಿಕಾ ಇಲಾಖೆಯ ಸ್ಥಳವನ್ನು ಮೈದಾನ್ಕಾಗಿ ಉಪಯೋಗಿಸಲಾಗದು ಎಂದರು.

 ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಡಾ.ಕೃಷ್ಣಪ್ರಸಾದ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಂಗಳೂರು ವಲಯ ಸಂಚಾಲಕ ಮನೋಹರ್ ಅಮೀನ್, ಯಶ್‌ಪಾಲ್ ಸುವರ್ಣ, ಪ್ರವೀಣ್‌ಚಂದ್ರ, ಮಂಜುನಾಥ ಮಲ್ಯ, ಗುರ್ಮೆ ಸುರೇಶ್ ಶೆಟ್ಟಿ ಮೊದ ಲಾದವರು ಉಪಸ್ಥಿತರಿದ್ದರು. ಕ್ಲಬ್ಬಿನ ಅಧ್ಯಕ್ಷ ಬಾಲಕೃಷ್ಣ ಪರ್ಕಳ ಸ್ವಾಗತಿಸಿದರು. ರಾಘವೇಂದ್ರ ಭಟ್ ವಂದಿಸಿದರು. ಶಿನಾ ಐತಾಳ್ ಕೋಟ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News