ಭಾರತೀಯ ಯೋಧರಿಗೆ ಶಾರುಕ್‌ರಿಂದ ವಿಶೇಷ ಕವನ ಸಂದೇಶ ಅರ್ಪಣೆ
ಮುಂಬೈ,ಅ.31: ಬಾಲಿವುಡ್ ಸೂಪರ್‌ಸ್ಟಾರ್ ಶಾರುಕ್ ಖಾನ್ ದೇಶದ ಸುರಕ್ಷತೆಗಾಗಿ ಭಾರತೀಯ ಯೋಧರ ತ್ಯಾಗಗಳ ಕುರಿತಂತೆ ಕವಿತೆಯ ರೂಪದಲ್ಲಿ ಅವರಿಗಾಗಿ ವಿಶೇಷ ಸಂದೇಶವೊಂದನ್ನು ರಚಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ‘ಸಂದೇಶ್ 2 ಸೋಲ್ಜರ್ಸ್ ’ ಕರೆಗೆ ಓಗೊಟ್ಟಿರುವ ಶಾರುಕ್ ಸಾಮಾಜಿಕ ಜಾಲತಾಣದಲ್ಲಿ ತಾನು ಯೋಧರಿಗೆ ಕಳುಹಿಸಿರುವ ಸಂದೇಶದ ತುಣುಕನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್‌ನ ಕೆಲವು ದೊಡ್ಡ ಹೆಸರುಗಳಾಗಿರುವ ಆಮಿರ್ ಖಾನ್, ಅಕ್ಷಯ ಕುಮಾರ್ ಮತ್ತು ಸಲ್ಮಾನ್ ಖಾನ್ ಈಗಾಗಲೇ ಯೋಧರಿಗಾಗಿ ತಮ್ಮ ಸಂದೇಶಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಶ್ವಾದ್ಯಂತ ಎಲ್ಲರಿಗೂ ಮತ್ತು ವಿಶೇಷವಾಗಿ ನಮ್ಮ ಯೋಧರಿಗೆ ದೀಪಾವಳಿಯ ಶುಭಾಶಯಗಳು ಎಂದು ಶಾರುಕ್ ಬರೆದಿದ್ದಾರೆ.
ನಮ್ಮ ಕಾಲುಗಳು ರತ್ನಗಂಬಳಿಗಳ ಮೇಲಿವೆ,ಅವರ ಬೂಟುಗಳು ಬಯಲಿನಲ್ಲಿವೆ. ನಮ್ಮ ದಿನಗಳು ಸ್ಥಿರವಾಗಿವೆ,ಅವರೆದುರು ನಿತ್ಯವೂ ಹೊಸ ಸವಾಲುಗಳು ಬಿಚ್ಚಿಕೊಳ್ಳುತ್ತವೆ. ನಮ್ಮ ರಾತ್ರಿಗಳು ಆನಂದಮಯವಾಗಿವೆ,ಅವರ ರಾತ್ರಿಗಳು ಒತ್ತಡದಿಂದ ಕೂಡಿವೆ...ಹೀಗೆ ಸಾಗುತ್ತದೆ ಶಾರುಕ್ ಕವನ.
ಯೋಧರ ಕುಟುಂಬ ಸದಸ್ಯರು ಮತ್ತು ಮಕ್ಕಳಿಗೆ ಉತ್ತಮ ಆಯುರಾರೋಗ್ಯವನ್ನು ಹಾರೈಸಿರುವ ಅವರು,ಯೋಧರ ಬಲಿದಾನದಿಂದಾಗಿ ನಮ್ಮ ಬದುಕು ಸುಖವಾಗಿ ಕಳೆಯುತ್ತಿದೆ. ಅವರ ಬವಣೆಯನ್ನು ನಾವು ಊಹಿಸಲೂ ಅಸಾಧ್ಯ. ನಿಜವಾದ ಹಿರೋಗಳು ಅವರೇ,ಅವರನ್ನು ಎಲ್ಲರೂ ಗುರುತಿಸಬೇಕು. ಯೋಧರ ಹೋರಾಟ ದಿಂದಲೇ ನಮ್ಮ ದೇಶ ಮತ್ತು ನಮ್ಮ ತಿರಂಗಾ ಬಲಿಷ್ಠಗೊಳ್ಳುತ್ತಲೇ ಇದೆ ಎಂದಿದ್ದಾರೆ.