ಮತೀಯ ಸಾಮರಸ್ಯ ಮೂಡಿಸಲು ಬಂಟ ಸಮುದಾಯದ ನೇತೃತ್ವ ಅಗತ್ಯ: ಸಚಿವ ಖಾದರ್

Update: 2016-10-31 13:38 GMT

ಬಂಟ್ವಾಳ, ಅ. 31: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯ ಸಾಮರಸ್ಯ ಮೂಡಿಸಲು ಬಂಟ ಸಮುದಾಯ ಹಿಂದೆ ನೇತೃತ್ವ ವಹಿಸಿತ್ತು. ಪ್ರಸ್ತುತ ಸನ್ನಿವೇಶದಲ್ಲೂ ಅಂಥದ್ದೆ ನೇತೃತ್ವದ ಅಗತ್ಯವಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ಹೇಳಿದರು.

ತುಂಬೆಯ ವಳವೂರಿನ ರಾಷ್ಟ್ರೀಯ ಹೆದ್ದಾರಿ ಬದಿ ನಿರ್ಮಾಣವಾದ ಬಂಟವಾಳದ ಬಂಟರ ಭವನ ಲೋಕಾರ್ಪಣಾ ಕಾರ್ಯಕ್ರಮದ ಮೂರನೆ ದಿನವಾದ ಸೋಮವಾರ, ಜಾತಿ ಮತೀಯ ಸಾಮರಸ್ಯ ಸಂಗಮ ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಬ್ರಹ್ಮರಕೂಟ್ಲುವಿನ ಟೋಲ್‌ಗೇಟನ್ನು ತನ್ನ ಕ್ಷೇತ್ರದ ಗಡಿಭಾಗವನ್ನಾಗಿ ಗುರುತಿಸಲಾಗುತ್ತಿತ್ತು. ಈ ಟೋಲ್‌ಗೇಟ್ ಸರ್ಕಸ್ ಕಂಪೆನಿಯೇ, ಟಿಕೆಟ್ ಕೌಂಟರಾ ಅಥವಾ ಟೋಲ್‌ಗೇಟಾ ಎಂಬ ಅನುಮಾನ ಬರುವಂತಿದೆ. ಆದರೆ ಈಗ ಸುಂದರವಾದ ರಾಜ್ಯಕ್ಕೆ ಮಾದರಿ ಎನಿಸುವ ರೀತಿಯಲ್ಲಿ ನಿರ್ಮಾಣವಾಗಿರುವ ಬಂಟವಾಳದ ಬಂಟರ ಭವನ ನನ್ನ ಮತ್ತು ಸಚಿವ ರಮಾನಾಥ ರೈ ಕ್ಷೇತ್ರದ ಗಡಿಯನ್ನು ಗುರುತಿಸುವಂತೆ ಮಾಡಿದೆ ಎಂದು ಹೇಳಿದ ಅವರು, ನೇತ್ರಾವತಿ ತಟದಲ್ಲಿರುವ ಈ ಪರಿಸರವನ್ನು ಪ್ರವಾಸೋದ್ಯಮ ಹಿನ್ನೆಲೆಯಲ್ಲಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭಾ ಕಾರ್ಯಕ್ರಮವನ್ನು ಮೊಡಂಕಾಪು ಚರ್ಚ್ ಧರ್ಮಗುರು ಫಾ. ಡೆನಿಸ್ ಪ್ರಭು ಉದ್ಘಾಟಿಸಿ ಶುಭ ಹಾರೈಸಿದರು. ಅರಣ್ಯ ಸಚಿವ ಬಿ.ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲ್, ಪ್ರಗತಿಪರ ರಾಜೇಶ್ ನಾಯ್ಕಾ ಉಳೇಪಾಡಿಗುತ್ತು, ವಿಧಾನಪರಿಷತ್ತು ಸದಸ್ಯರಾದ ಕ್ಯಾ.ಗಣೇಶ್ ಕಾರ್ಣಿಕ್, ಐವನ್ ಡಿಸೋಜ, ಕೋಟ ಶ್ರೀನಿವಾಸ ಪೂಜಾರಿ, ಬೋಳಂಗಡಿ ಖತೀಬ್ ಯಾಹ್ಯಾ ತಂಞಳ್ ಮದನಿ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಪಿಯುಸ್ ಎಲ್. ರೋಡ್ರಿಗಸ್, ವಿಶ್ವ ಕೊಂಕಣಿ ಕೇಂದ್ರ ಅಧ್ಯಕ್ಷ ಬಸ್ತಿ ವಾಮನ ಶೆಣೈ, ತಾಪಂ ಸದಸ್ಯ ಗಣೇಶ ಸುವರ್ಣ ತುಂಬೆ, ತುಂಬೆ ಗ್ರಾಪಂ ಅಧ್ಯಕ್ಷೆ ಹೇಮಲತಾ ಪೂಜಾರಿ ಅತಿಥಿಗಳಾಗಿ ಭಾಗವಹಿಸಿದ್ದರು. ಬಂಟವಾಳ ಬಂಟರ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಗೋಳ್ತಮಜಲು ಹಾಜಿ ಅಬ್ದುಲ್ ಖಾದರ್ (ಉದ್ಯಮ), ಪಚ್ಚಿನಡ್ಕ ಸೇಸಪ್ಪ ಕೋಟ್ಯಾನ್ (ಧಾರ್ಮಿಕ), ಡಾ. ರಮೇಶಾನಂದ ಸೋಮಯಾಜಿ (ವೈದ್ಯಕೀಯ), ರಾಜಾ ಬಂಟ್ವಾಳ (ಪತ್ರಿಕೋದ್ಯಮ), ರಾಯಿ ರಮೇಶ್ ನಾಯಕ್ (ಶಿಕ್ಷಣ), ಶಿವರಾಮ ಜೋಗಿ ಬಿ.ಸಿ.ರೋಡು (ಯಕ್ಷಗಾನ), ಬಾಚಕೆರೆ ದೇಜಪ್ಪ (ಜಾನಪದ), ರಘು ಸಫಲ್ಯ ನರಿಕೊಂಬು (ಸಾಮಾಜಿಕ), ಅವಿಲ್ ಮಿನೇಜಸ್ ಲೊರೆಟ್ಟೋ (ಕಂಬಳ), ರಮೇಶ್ ಕಲ್ಲಡ್ಕ (ಕಲಾ), ದಿವಾಕರ್ ಪಂಬದಬೆಟ್ಟು (ಕೃಷಿ), ಲಲಿತಾ ಜಯರಾಮ್ ಇರಾ (ಕ್ರೀಡೆ) ಅವರನ್ನು ಸನ್ಮಾನಿಸಲಾಯಿತು.

ಸನ್ಮಾನಿತರ ಪರವಾಗಿ ರಾಜಾ ಬಂಟ್ವಾಳ ಮತ್ತು ರಮೇಶ್ ನಾಯಕ್ ಕೃತಜ್ಞತೆ ಸಲ್ಲಿಸಿದರು. ನಗ್ರಿಗುತ್ತು ವಿವೇಕ ರೈ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಬಾಲಾಜಿಬೈಲು ಚಂದ್ರಹಾಸ ರೈ ಪ್ರಾಸ್ತಾವಿಕ ಮಾತನಾಡಿದರು. ಗುತ್ತಿಗೆದಾರರಾದ ದಿವಾಕರ್, ದಿವ್ಯರಾಜ್ ಹಾಗೂ ವಿಶೇಷ ದೇಣಿಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು.ಕೋಶಾಧಿಕಾರಿ ಜಗದೀಶ ಶೆಟ್ಟಿ ಇರಾಗುತ್ತು ವಂದಿಸಿದರು. ಪುರುಷೋತ್ತಮ ಭಂಡಾರಿ, ಬಾಲಕೃಷ್ಣ ಆಳ್ವ ಕೊಡಾಜೆ ಹಾಗೂ ದೇವದಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News