ಉಳ್ಳಾಲ ಸೈಯ್ಯಿದ್ ಮದನಿ ದರ್ಗಾಕ್ಕೆ ಸಚಿವ ತನ್ವೀರ್ ಶೇಠ್ ಭೇಟಿ
ಉಳ್ಳಾಲ,ಅ.31: ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಶೇಠ್ ಅವರು ಉಳ್ಳಾಲ ಸೈಯ್ಯಿದ್ ಮದನಿ ದರ್ಗಾಕ್ಕೆ ಭಾನುವಾರ ಭೇಟಿ ನಿ ಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು ಇತಿಹಾಸ ಪ್ರಸಿದ್ಧ ಸೈಯ್ಯದ್ ಮದನಿ ದರ್ಗಾ ಸಮಾಜ ಮುಖಿ ಕೆಲಸಗಳ ಮೂಲಕ ಇಡೀ ರಾಜ್ಯದಲ್ಲಿ ಮಾದರಿಯಾಗಿದೆ. ಅಲ್ಲಿ ಸರ್ವಧರ್ಮೀಯರಿಗೆ ನೀಡಲಾಗುತ್ತಿರುವ ಶಿಕ್ಷಣ, ಜೀವನದ ಮೌಲ್ಯಗಳ ಪಾಠ ಶ್ಲಾಘನೀಯ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡಲು ಬದ್ಧ ಎಂದುಹೇಳಿದರು.
ರಾಜ್ಯದಲ್ಲಿ ಉರ್ದು ಶಾಲೆಗಳಲ್ಲಿ ಶಿಕ್ಷಣದ ಮೌಲ್ಯಗಳನ್ನು ಹೆಚ್ಚಿಸುವ ಸಲುವಾಗಿ ರಾಜ್ಯದಲ್ಲಿರುವ ಉರ್ದು ಶಾಲೆಗಳಲ್ಲಿ ಮೌಲ್ಯಗಳನ್ನು ಬೆಳೆಸುವ ಪಠ್ಯಕ್ರಮ ತರುವ ಕುರಿತಾಗಿ ಅನುಭವಸ್ಥರಿಂದ ಸಲಹೆ ಪಡೆದುಕೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ಸದ್ಯ ವಕ್ಫ್ ಮಂಡಳಿ ಅಸ್ತಿತ್ವದಲ್ಲಿಲ್ಲ. ಅಲ್ಪಸಂಖ್ಯಾತರ ಇಲಾಖೆಯ ಕಾರ್ಯದರ್ಶಿಯನ್ನೇ ಆಡಳಿತ ಅಧಿಕಾರಿಯಾಗಿ ಸದ್ಯ ತಾತ್ಕಾಲಿಕವಾಗಿ ನೇಮಿಸಲಾಗಿದೆ. ವಕ್ಫ್ ನಿಯಮದಂತೆ ಚುನಾವಣೆ ನಡೆಸುವುದು ನಿಷಿದ್ಧ . ಇನ್ನೊಂದು ವಾರದಲ್ಲಿ ನಿಯಮಾವಳಿಯಂತೆ ಸಮಿತಿ ರಚಿಸಲು ಎಲ್ಲಾ ರೀತಿಯ ಕ್ರಮಕೈಗೊಳ್ಳುವ ಭರವಸೆ ನೀಡಿದರು. ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ ದರ್ಗಾದಲ್ಲಿ ಏಳು ತಿಂಗಳಿನಿಂದ ಆಡಳಿತ ಸರಿಯಾಗಿ ನಡೆಯುತ್ತಿದೆ. ದರ್ಗಾಕ್ಕೆ ಬರುವ ಎಲ್ಲಾ ರೀತಿಯ ಅನುದಾನಗಳನ್ನು ಸರ್ವಧರ್ಮೀಯರಿಗೆ ವಿವಿಧ ರೀತಿಗಳಲ್ಲಿ ಸಮಾಜಮುಖಿ ಕಾರ್ಯಗಳ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಲಾಗುತ್ತಿದೆ. ಆದರೆ ಆಡಳಿತ ಸಮಿತಿ ವಿಚಾರಕ್ಕೆ ಸಂಬಂಧಿಸಿದ ದಾವೆ ರಾಜ್ಯ ಉಚ್ಛನ್ಯಾಯಾಲಯದಲ್ಲಿದೆ. ಅದಕ್ಕಾಗಿ ದರ್ಗಾ ಸಮಿತಿಯಿಂದ ಹಣವೂ ಖರ್ಚಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಲಯದಲ್ಲಿನ ದಾವೆಯನ್ನು ಖುಲಾಸೆಗೊಳಿಸಲು ಎಲ್ಲಾ ರೀತಿಯ ಸಹಕಾರ ನೀಡಬೇಕಿದೆ ಎಂದು ಮನವಿ ಮಾಡಿಕೊಂಡರು. ಅಲ್ಪಸಂಖ್ಯಾತರಿಗೂ ಬೇಕು ಕುಂದು ಕೊರತೆ ಸಭೆ : ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಂ. ಹನೀಫ್ ಮಾತನಾಡಿ ಅಲ್ಪಸಂಖ್ಯಾತರ ಮೇಲೆ ನಿರಂತರ ದಬ್ಬಾಳಿಕೆಗಳು ನಡೆಯುತ್ತಲೇ ಇದೆ. ಅದಕ್ಕಾಗಿ ಪರಿಶಿಷ್ಟ ಜಾತಿಯವರಿಗೆ ವಾರಕ್ಕೊಂದರಂತೆ ನಡೆಯುತ್ತಿರುವ ಕುಂದು ಕೊರತೆ ಸಭೆಯಂತೆ ಅಲ್ಪಸಂಖ್ಯಾತರಿಗೂ ವಾರ್ಷಿಕ ನಾಲ್ಕು ಸಭೆಗಳನ್ನಾದರೂ ನಡೆಸುವ ನಿಯಮ ಜಾರಿ ಮಾಡಬೇಕು ಹಾಗೂ ಸ್ಥಳೀಯ ಚುನಾವಣೆ ಹಾಗೂ ಉದ್ಯೋಗ ಮೀಸಲಾತಿಯಲ್ಲಿ ಅಲ್ಪಸಂಖ್ಯಾತರನ್ನು 2ಎ ಪಂಗಡದಲ್ಲಿ ಗುರುತಿಸುವುದು ಕೋಮು ಭಾವನೆಗಳು ಸೃಷ್ಟಿಯಾಗಲು ಕಾರಣವಾಗುತ್ತಿದೆ. ಅದಕ್ಕಾಗಿ ಪ್ರತ್ಯೇಕ ಪಂಗಡವನ್ನು ರೂಪಿಸಬೇಕಿದೆ ಎಂದು ಮನವಿ ಮಾಡಿಕೊಂಡರು. ಈ ಸಂದರ್ಭ ದರ್ಗಾ ಉಪಾಧ್ಯಕ್ಷ ಯು.ಕೆ.ಮೋನು ಕೋಟೆಪುರ, ಬಾವಾ ಮಹಮ್ಮದ್, ವಕ್ಫ್ ಬೋರ್ಡಿನ ಜಿಲ್ಲೆಯ ಅಧಿಕಾರಿ ಅಬೂಬಕರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ಎಸ್.ಕರೀಂ, ಪ್ರ.ಕಾ. ಮಹಮ್ಮದ್ ತ್ವಾಹಾ, ಕೋಶಾಧಿಕಾರಿ ಯು.ಕೆ.ಇಲ್ಯಾಸ್ ಜತೆ ಕಾರ್ಯದರ್ಶಿ ನೌಷಾದ್, ಆಝಾದ್ ಇಸ್ಮಾಯಿಲ್, ಅರೆಬಿಕ್ ಚಾರಿಟೇಬಲ್ ಟ್ರಸ್ಟಿನ ಉಪಾಧ್ಯಕ್ಷ ಮುಸ್ತಾಫ ಅಬ್ದುಲ್ಲಾ, ಇಬ್ರಾಹಿಂ, ಪ್ರ.ಕಾ. ಅಫ್ತಾರ್ ಹುಸೈನ್, ಜೆ.ಅಬ್ದುಲ್ ಹಮೀದ್, ಅರೆಬಿಕ್ ಟ್ರಸ್ಟ್ ಉಪಾಧ್ಯಕ್ಷ ಮಹಮ್ಮದ್, ಪ್ರ.ಕಾ. ಅಮೀರ್ ಹಾಜಿ, ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಕೋಶಾಧಿಕಾರಿ ಅಬ್ಬಾಸ್ ಪಿಲಾರ್ ದರ್ಗಾ ಮತ್ತು ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.