×
Ad

ಭೋಪಾಲ್ 'ಎನ್‌ಕೌಂಟರ್ ' : ಉತ್ತರ ಸಿಗದ ಹಲವು ಪ್ರಶ್ನೆಗಳು

Update: 2016-10-31 19:47 IST

ಹೊಸದಿಲ್ಲಿ, ಅ. 31 : ಭೋಪಾಲ್ ಸೆಂಟ್ರಲ್ ಜೈಲಿನಿಂದ ' ಪರಾರಿ' ಯಾಗಿ ಬಳಿಕ ಪೊಲೀಸ್ 'ಎನ್‌ಕೌಂಟರ್' ನಲ್ಲಿ ಎಂಟು ವಿಚಾರಣಾಧೀನ ಕೈದಿಗಳು ಬಲಿಯಾಗಿರುವುದರ ಕುರಿತು ಹಲವು ಪ್ರಶ್ನೆಗಳು ಉತ್ತರ ಸಿಗದೆ ಗೊಂದಲ ಮೂಡಿಸುತ್ತಿವೆ. 

ಈ ಎಂಟು ಮಂದಿ ವಿಚಾರಣಾಧೀನ ಕೈದಿಗಳಾಗಿದ್ದರು. ಅವರ ಅಪರಾಧ ಯಾವುದೇ ನ್ಯಾಯಾಲಯದಲ್ಲಿ ಈವರೆಗೆ ಸಾಬೀತಾಗಿರಲಿಲ್ಲ. 

ಸೆಂಟ್ರಲ್ ಜೈಲು ಎಂದರೆ ಅತ್ಯಂತ ಗರಿಷ್ಠ ಭದ್ರತೆ ಇರುವ ಜೈಲು. ಅದರಲ್ಲೂ ಉಗ್ರ ಚಟುವಟಿಕೆಗಳ ಆರೋಪದಲ್ಲಿ ಬಂಧಿತರನ್ನು ಇತರ ಬಂಧಿಗಳಿಗಿಂತ ಹೆಚ್ಚು ಭದ್ರತೆಯಲ್ಲಿ ಪ್ರತ್ಯೇಕವಾಗಿ ಇಟ್ಟಿರುತ್ತಾರೆ. ಹೀಗಿರುವಾಗ ಈ ಎಂಟು ಮಂದಿ ಅಷ್ಟು ಸುಲಭದಲ್ಲಿ ಒಟ್ಟಿಗೆ ಹೇಗೆ ಪರಾರಿಯಾದರು ? 

ಇಷ್ಟು ಭದ್ರತೆ ಇರುವ ಸೆಂಟ್ರಲ್ ಜೈಲಿನಲ್ಲಿ ಈ ಎಂಟು ಮಂದಿ ಒಬ್ಬ ಹೆಡ್ ಕಾನ್ಸ್ಟೇಬಲ್ ನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಕೇವಲ ಒಬ್ಬೇ ಒಬ್ಬ ಪೊಲೀಸ್ ಮಾತ್ರ ಇವರನ್ನು ತಡೆಯಲು ಅಲ್ಲಿದ್ದರೆ ? ಉಳಿದ ಪೊಲೀಸ್ ಸಿಬ್ಬಂದಿಗಳು ಯಾರು ಇವರನ್ನು ತಡೆಯಲಿಲ್ಲವೇ ? 

ಕೇವಲ ಬೆಡ್ ಶೀಟನ್ನು ಬಳಸಿ ಜೈಲಿನ ಗೋಡೆಯನ್ನು ಹಾರಿ ಬರುವುದು ಅಷ್ಟು ಸುಲಭವೇ ? 

ಪರಾರಿಯಾದ ಎಂಟೂ ಮಂದಿ ಒಟ್ಟಿಗೆ ಒಂದೇ ದಿಕ್ಕಿನಲ್ಲಿ ಓಡಿದ್ದು ಏಕೆ ? 

ಜೈಲಿನಿಂದ ಪರಾರಿಯಾದ ಮೇಲೆ 'ಎನ್‌ಕೌಂಟರ್' ಆಗುವ ನಡುವಿನ ಅಲ್ಪಾವಧಿಯಲ್ಲಿ ಈ ಎಂಟು ಮಂದಿಯ ಕೈಗೆ ಶಸ್ತ್ರಾಸ್ತ್ರಗಳು ಬಂದಿದ್ದು ಎಲ್ಲಿಂದ ? ಹೇಗೆ ? 

ಜೈಲಿನಲ್ಲೇ ಅವರಿಗೆ ಶಸ್ತ್ರಾಸ್ತ್ರ ಸಿಕ್ಕಿದ್ದರೆ ಅದನ್ನು ಅವರಿಗೆ ಪೂರೈಸಿದ್ದು ಯಾರು ?

ಹತ ಕೈದಿಗಳ ಚಿತ್ರಗಳಲ್ಲಿ ಅವರ ವೇಷಭೂಷಣ ನೋಡಿದರೆ ಬಹಳ ವಿಚಿತ್ರವಾಗಿವೆ. ಶುದ್ಧ, ಹೊಸ ಟೀಶರ್ಟ್ , ಜೀನ್ಸ್, ಸ್ಪೋರ್ಟ್ಸ್ ಶೂಗಳು , ಕೈಗೆ ವಾಚು - ಇವೆಲ್ಲ ಧರಿಸಿ ಅವರು ಪರಾರಿಯಾದರೆ ?

'ಪರಾರಿ'ಯಾಗಿ ಎಂಟು ಗಂಟೆಗಳ ಬಳಿಕ ಈ ಎಂಟು ಮಂದಿಯ 'ಎನ್‌ಕೌಂಟರ್' ಆಗಿದೆ. ಇಷ್ಟು ಗಂಟೆಗಳ ಕಾಲ ಅವರು ಜೈಲಿಗೆ ಸಮೀಪದ ಗ್ರಾಮದಲ್ಲೇ ಏಕೆ ಇದ್ದರು ? ತಮ್ಮನ್ನು ಪೊಲೀಸರು ಹುಡುಕಿಕೊಂಡು ಬರುತ್ತಾರೆ ಎಂಬ ಜ್ಞಾನ ಅವರಿಗೆ ಇರಲಿಲ್ಲವೇ ? 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News