ನಾಪತ್ತೆಯಾಗಿದ್ದ ಭಾರತದ ಮಹಿಳೆ ಹೀಥ್ರೂ ಏರ್‌ಪೋರ್ಟ್ ಬಳಿ ಶವವಾಗಿ ಪತ್ತೆ
ಲಂಡನ್, ನ.2: ಸುಮಾರು ಎರಡು ವಾರಗಳ ಹಿಂದೆ ನಾಪತ್ತೆಯಾಗಿದ್ದ 30ರ ಪ್ರಾಯದ ಭಾರತ ಮೂಲದ ಮಹಿಳೆ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದ ಸಮೀಪ ಶವವಾಗಿ ಪತ್ತೆಯಾಗಿದ್ದು, ಘಟನೆಯ ಬಗ್ಗೆ ಮಾಹಿತಿ ನೀಡುವಂತೆ ಸ್ಕಾಟ್‌ಲ್ಯಾಂಡ್ ಯಾರ್ಡ್ ಬುಧವಾರ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಪ್ರದೀಪ್ ಕೌರ್ ಎಂಬ ಭಾರತ ಮೂಲದ ಮಹಿಳೆ ಕೆಲಸಕ್ಕೆ ತೆರಳಿದವರು ಮನೆಗೆ ವಾಪಸಾಗದೇ ಕಾಣೆಯಾಗಿದ್ದಾರೆ ಎಂದು ಸಂಬಂಧಿಕರು ಕಳೆದ ವಾರ ದೂರು ಸಲ್ಲಿಸಿದ್ದರು.
ಮಹಾನಗರ ಪೊಲೀಸ್ ಇಲಾಖೆಯ ಕೊಲೆ ಪತ್ತೆ ದಳದವರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದು, ಪ್ರದೀಪ್ ಕೌರ್ ಮೃತದೇಹದ ಗುರುತು ಪತ್ತೆ ಹಚ್ಚಿದ್ದರು.
ವಿವಾಹಿತೆ ಕೌರ್ ಹೋಟೆಲ್ ಹೌಸ್‌ಕೀಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅಕ್ಟೋಬರ್ 16 ರಂದು ಅವರು ಕಾಣೆಯಾಗಿದ್ದರು. ಸುಮಾರು ಒಂದು ವಾರದ ಬಳಿಕ ಅವರ ಶವ ಪತ್ತೆಯಾಗಿತ್ತು. ಕಚೇರಿಯಿಂದ ಮನೆಗೆ ವಾಪಸಾಗುತ್ತಿದ್ದ ವೇಳೆ ಅಪರಿಚಿತರು ಕತ್ತು ಹಿಸುಕಿ ಸಾಯಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಪ್ರದೀಪ್ ಕೌರ್ ಅವರ ಚಲನವಲನದ ಬಗ್ಗೆ ಪತ್ತೆ ಹಚ್ಚಲು ಸಿಸಿಟಿವಿ ತುಣುಕುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದೇವೆ. ಕೌರ್ ನಾಪತ್ತೆಯಾದ ಬಳಿಕ ಇಬ್ಬರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ. ಪೋರ್ಸ್ಟ್‌ಮಾರ್ಟಂ ಪರೀಕ್ಷೆಯಲ್ಲಿ ಮಹಿಳೆಯ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪರೀಕ್ಷೆಯ ಇನ್ನಷ್ಟು ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ ಎಂದು ಲಂಡನ್ ಪೊಲೀಸರು ತಿಳಿಸಿದ್ದಾರೆ.