×
Ad

ಮೂಡುಬಿದಿರೆ: ಏಕರೂಪ ನಾಗರಿಕ ಸಂಹಿತೆ ಖಂಡಿಸಿ ಪ್ರತಿಭಟನೆ

Update: 2016-11-02 15:34 IST

ಮೂಡುಬಿದಿರೆ, ನ.2: ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಸಮಾನ ನಾಗರಿಕ ಸಂಹಿತೆ ಮತ್ತು ತ್ರಿವಳಿ ತಲಾಖ್ ರದ್ದು ಪಡಿಸುವ ನೀತಿಯನ್ನು ವಿರೋಧಿಸಿ ಮುಸ್ಲಿಂ ಸಂಘಟನೆಗಳ ಒಕ್ಕೂಟದ ವತಿಯಿಂದ ಬುಧವಾರ ಮೂಡುಬಿದಿರೆಯ ನಾಡಕಚೇರಿಯ ಎದುರು ಪ್ರತಿಭಟನೆ ನಡೆಯಿತು.

ಮೂಡುಬಿದಿರೆ ಮುಲ್ಕಿ ವಿಧಾನಸಬಾ ಕ್ಷೇತ್ರದ ಎಸ್‌ಡಿಪಿಐ ಅಧ್ಯಕ್ಷ ಎ.ಕೆ. ಅಶ್ರಫ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ತ್ರಿವಳಿ ತಲಾಕ್ ಎಂಬುದು ಮುಸ್ಲಿಮರ ಆಂತರಿಕ ವಿಷಯವಾಗಿದೆ. ಅದೊಂದು ಧಾರ್ಮಿಕ ಆಚಾರ. ಅದನ್ನು ರದ್ದುಪಡಿಸುವಲ್ಲಿ ಕೇಂದ್ರ ಸರಕಾರ ಅತೀವ ಉತ್ಸಾಹ ತೋರಿಸುತ್ತಿರುವುದು ಹಾಸ್ಯಸ್ಪದವಾಗಿದೆ. ಮೋದಿ ಸರಕಾರ ಮುಸ್ಲಿಮರ ಪಾಲಿಗೆ ಅತ್ಯಂತ ಅಪಾಯಕಾರಿಯಾಗಿರುವ ಕಾನೂನನ್ನು ಜಾರಿಗೆ ತರುತ್ತಿದ್ದು, ಇದು ಸಂವಿಧಾನದ ಆಶಯಕ್ಕೆ ವಿರುದ್ಧವಾದುದಾಗಿದೆ. ತಲಾಖ್ ರದ್ದು ಹಾಗೂ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತಂದಲ್ಲಿ ಕೇಂದ್ರ ಸರಕಾರವು ಅದರ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ’ ಎಂದು ಹೇಳಿದರು.

ಮುಸ್ಲಿಂ ಮಹಿಳೆಯರ ಕಣ್ಣೀರು ಒರೆಸುವ ನಾಟಕವಾಡುತ್ತಿರುವ ಮೋದಿಯವರು ಮೊದಲಾಗಿ ಅಖ್ಲಾಕ್ ಕುಟುಂಬದ ಕಣ್ಣೀರು ಒರೆಸುವ ಪ್ರಯತ್ನ ಮಾಡಲಿ. ಕೇಂದ್ರ ಸರಕಾರ ಮುಸ್ಲಿಂ ವೈಯುಕ್ತಿಕ ಕಾನೂನಿಗೆ ತಿದ್ದುಪಡಿ ತರುವ ಮೂಲಕ ದೇಶದಾದ್ಯಂತ ಇರುವ ಮುಸ್ಲಿಂ ಸಮುದಾಯದ ಸಂವಿಧಾನದತ್ತ ಹಕ್ಕನ್ನು ಕಸಿಯುವ ಹುನ್ನಾರವನ್ನೆಸಗುತ್ತಿದೆ. ಕಾನೂನು ರಚನೆಯ ಈ ಆಯೋಗದಲ್ಲಿರುವ ಓರ್ವ ಸದಸ್ಯ ವಕೀಲರು ಗುಲ್ಬರ್ಗ ಸೊಸೈಟಿ ಹತ್ಯಾಕಾಂಡದ ಆರೋಪಿಯೆನಿಸಿಕೊಂಡಿದ್ದು, ಇಂತಹ ಸಮಿತಿಯಿಂದ ದೇಶದ ಮುಸ್ಲಿಮರು ಯಾವ ರೀತಿಯ ನ್ಯಾಯ ನಿರೀಕ್ಷಿಸಲು ಸಾಧ್ಯವಿದೆ? ಎಂದು ಪ್ರಶ್ನಿಸಿದರು.

ಮೂಡುಬಿದಿರೆ ತಹಶೀಲ್ದಾರ್ ಮುಹಮ್ಮದ್ ಇಸಾಕ್‌ರಿಗೆ ಮನವಿಯನ್ನು ಸಲ್ಲಿಸಲಾಯಿತು.

ಬೆಳುವಾಯಿ ಅಬೂಬಕರ್ ಸಿದ್ದೀಕಿ ಮಸೀದಿ ಉಪಾಧ್ಯಕ್ಷ ಅಮೀರ್ ಗೌಸ್, ಬೆಳುವಾಯಿ ಅಬ್ದುಸ್ಸಲೀಂ, ಅಬ್ದುರ್ರಹ್ಮಾನ್ ಬೆಳುವಾಯಿ, ಅಬೂಬಕರ್ ಸಿದ್ದೀಕ್ ಬೆಳುವಾಯಿ, ಮುಹಮ್ಮದ್ ಅಲೀಂ ಅಲಂಗಾರು, ಬೆಳುವಾಯಿ ಸೈಬಾಝ್ ಅಹ್ಮದ್, ಮಯ್ಯದ್ದಿ ಗುಂಡುಕಲ್ಲು, ಅಬ್ದುಲ್ ಖಯ್ಯೂಂ ಬೆಳುವಾಯಿ, ಅಬ್ದುಲ್ ಅಝೀಝ್ ಗುಂಡುಕಲ್ಲು, ಕೊಟೆಬಾಗಿಲು ರಿಝ್ವಾನ್ ಅಹ್ಮದ್ ಉಪಸ್ಥಿತರಿದ್ದರು.

ಅನ್ವರ್ ಕಾರ್ಯಕ್ರಮ ನಿರೂಪಿಸಿದರು. ಸೈಬಾಝ್ ಸ್ವಾಗತಿಸಿದರು. ಹಾಶಿರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News