×
Ad

ಉಳ್ಳಾಲದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ವಿಫಲ: ಸಂತೋಷ್ ಬೋಳಿಯಾರ್

Update: 2016-11-02 17:06 IST

ಉಳ್ಳಾಲ, ನ.2: ಉಳ್ಳಾಲ ಮತ್ತು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಲ್ಲಿ ಒಂದು ಕೊಲೆ ಮತ್ತು ಓರ್ವನನ್ನು ಪೆಟ್ರೋಲ್ ಹಾಕಿ ಜೀವಂತ ಸುಡಲು ವಿಫಲ ಯತ್ನ ನಡೆಸಲಾಗಿದ್ದು ಪೊಲೀಸರು ಅಪರಾಧಿಗಳನ್ನು ಬಂಧಿಸದಂತೆ ರಾಜಕೀಯವಾಗಿ ಒತ್ತಡವನ್ನು ಹೇರಲಾಗಿದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರಾಧ್ಯಕ್ಷ ಸಂತೋಷ್ ಬೋಳಿಯಾರ್ ಆರೋಪಿಸಿದರು.

ಅವರು ತೊಕ್ಕೊಟ್ಟಿನ ಖಾಸಗಿ ಸಭಾಂಗಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕೊಣಾಜೆ ಪೊಲೀಸ್ ಠಾಣೆಯ ಹತ್ತಿರವೇ ಕಳೆದ ವಾರ ದುಷ್ಕರ್ಮಿಗಳಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಕಾರ್ತಿಕ್‌ರಾಜ್ ಮತ್ತು ಉಳ್ಳಾಲದ ಬಸ್ತಿಪಡ್ಪುವಿನ ತಾರಾನಾಥ್‌ರ ಮನೆ ಒಳಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟು ಕುಟುಂಬವನ್ನೇ ಸಜೀವ ದಹನಗೈಯಲು ಪ್ರಯತ್ನಿಸಿದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ. ಉಳ್ಳಾಲದಲ್ಲಿ ದಕ್ಷ ಪೊಲೀಸ್ ಅಧಿಕಾರಿ ಇದ್ದರೂ ಕೂಡಾ ಆರೋಪಿಗಳನ್ನು ಬಂಧಿಸದಂತೆ ಆಡಳಿತರೂಢ ಸರಕಾರದ ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿರುವುದು ತಿಳಿದು ಬಂದಿದ್ದು, ರಾಜ್ಯ ಸರಕಾರದ ಕಾರ್ಯವೈಖರಿಯಿಂದ ಸ್ಥಳೀಯವಾಗಿ ಕಳೆದ ಎರಡು ವರ್ಷಗಳಿಂದ ಜನಸಾಮಾನ್ಯರಿಗೆ ಚಾಕು ಇರಿತ ಭಾಗ್ಯ, ಬೆಂಕಿ ಭಾಗ್ಯ ದೊರೆತಂತಾಗಿದೆ ಎಂದು ಹೇಳಿದರು.

ಮಾಜಿ ಶಾಸಕ ಜಯರಾಮಶೆಟ್ಟಿ ಮಾತನಾಡಿ, ಸಚಿವ ಯು.ಟಿ ಖಾದರ್ ಉಳ್ಳಾಲ ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಿಷ್ಠಾವಂತ ಪೌರಾಯುಕ್ತೆಯನ್ನು ಎತ್ತಂಗಡಿ ಮಾಡಿಸಿ ಭ್ರಷ್ಟಾಚಾರದ ಆರೋಪ ಹೊತ್ತ ಪೌರಾಯುಕ್ತೆಯನ್ನು ನಿಯುಕ್ತಿಗೊಳಿಸಿದ್ದು ಖಂಡನಾರ್ಹ. ಪಕ್ಷದ ಪ್ರಮುಖರಲ್ಲಿ ಮಾತುಕತೆ ನಡೆಸಿ ಕಳಕಿಂತ ಪೌರಾಯುಕ್ತೆ ವಾಣಿ ಆಳ್ವರ ವರ್ಗಾವಣೆಗೆ ಆದೇಶಿಸಿ ಪ್ರತಿಭಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಕ್ಷೇತ್ರದ ಶಾಸಕ ಯು.ಟಿ. ಖಾದರ್ ಅವರು ಅಭಿವೃದ್ಧಿ ಕಾರ್ಯದಲ್ಲಿ ರಾಜಕೀಯ ನಡೆಸುತ್ತಾ ಬಂದಿದ್ದು ಜನಸಾಮಾನ್ಯರ ಅಮೂಲ್ಯ ಜೀವಕ್ಕೆ ರಕ್ಷಣೆ ನೀಡುತ್ತಿಲ್ಲ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿ.ಡಾ.ಕೆ.ಎ.ಮುನೀರ್ ಬಾವ, ಬಿಜೆಪಿ ಮಂಗಳೂರು ವಿಧಾನಸಭಾ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ರಾಜ್, ಮನೋಜ್ ಆಚಾರ್ಯ, ಮುಖಂಡರಾದ ಚಂದ್ರಶೇಖರ್ ಉಚ್ಚಿಲ್, ಸುಜಿತ್ ಮಾಡೂರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News