ಬಡಗ ಕಜೆಕಾರು ಗ್ರಾಮಕ್ಕೆ ಶಾಶ್ವತ ಪಿಡಿಒ, ಕಾರ್ಯದರ್ಶಿ ನೇಮಕಕ್ಕೆ ಆಗ್ರಹಿಸಿ ಮನವಿ

Update: 2016-11-02 12:24 GMT

ಬಂಟ್ವಾಳ, ನ.2: ಬಡಗ ಕಜೆಕಾರು ಗ್ರಾಮ ಪಂಚಾಯತ್‌ಗೆ ಶಾಶ್ವತ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹಾಗೂ ಕಾರ್ಯದರ್ಶಿಯನ್ನು ಕೂಡಲೇ ನೇಮಕಗೊಳಿಸುವಂತೆ ಆಗ್ರಹಿಸಿ ಬಂಟ್ವಾಳ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ಗ್ರಾಮ ಪಂಚಾಯತ್ ಸದಸ್ಯ ಮುಹಮ್ಮದ್ ಅತಾವುಲ್ಲಾ ಮನವಿ ಸಲ್ಲಿಸಿದರು.

ಬಡಗ ಕಜೆಕಾರು ಗ್ರಾಮಕ್ಕೆ 2015ರ ಜನವರಿಯಿಂದ ಮೂರು ಮಂದಿ ಪಿಡಿಒಗಳನ್ನು ತಾತ್ಕಾಲಿಕ ನೆಲೆಯಲ್ಲಿ ನೇಮಕಗೊಳಿಸಲಾಗಿದೆ. ಆದರೆ ಅವರಲ್ಲಿ ಯಾರೊಬ್ಬರೂ ಪಂಚಾಯತ್ ಕಚೇರಿಗೆ ಸರಿಯಾಗಿ ಬಂದಿಲ್ಲ. 2015 ಜನವರಿಯಿಂದ 2016 ಅಕ್ಟೋಬರ್‌ವರೆಗೆ ಕೇವಲ 191 ದಿನ ಮಾತ್ರ ಪಂಚಾಯತ್ ಕಚೇರಿಗೆ ಪಿಡಿಒಗಳು ಹಾಜರಾಗಿದ್ದಾರೆ. ಹಾಜರಾದರೂ ದಿನ ಪೂರ್ತಿ ಕಚೇರಿಯಲ್ಲಿರದೆ ಒಂದೆರಡು ಗಂಟೆ ಇದ್ದು ಬಳಿಕ ವಾಪಸ್ ಹೋಗುತ್ತಾರೆ. ಇದರಿಂದಾಗಿ ಕಚೇರಿಯ ಹಾಗೂ ಸಾರ್ವಜನಿಕರ ಹಲವು ಕೆಲಸಗಳು ನಡೆಯದೆ ಬಾಕಿಯುಳಿದಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಪಿಡಿಒ ಇಲ್ಲದಿರುವುದರಿಂದ ಪಂಚಾಯತ್ ಕಚೇರಿಗೆ ದೂರದಿಂದ ಆಗಮಿಸುವ ಗ್ರಾಮಸ್ಥರು ತಮ್ಮ ಕೆಲಸ ಕಾರ್ಯ ನಡೆಯದೆ ವಾಪಸ್ ಹೋಗುತ್ತಿದ್ದಾರೆ. ಕಚೇರಿ ಸಿಬ್ಬಂದಿಗೆ ಸರಿಯಾಗಿ ವೇತನ ನೀಡಲು ಕೂಡಾ ಕಷ್ಟವಾಗುತ್ತಿದೆ. ಗ್ರಾಪಂ ಸಭೆಯಲ್ಲಿ ನಿರ್ಣಯಿಸಿರುವ ಕೆಲಸಗಳು ಕೂಡಾ ನಡೆಯದೆ ನೆನೆಗುದಿಗೆ ಬಿದ್ದಿವೆ. ಕಳೆದ ಎರಡು ತಿಂಗಳಿನಿಂದ ಪಿಡಿಒ ನಿರಂತರ ಗೈರು ಹಾಜರಾಗಿರುವುದರಿಂದ ಮಾಸಿಕ ಸಭೆ ಕೂಡಾ ನಡೆದಿಲ್ಲ. ಪಂಚಾಯತ್‌ಗೆ ಸರಕಾರದಿಂದ ಬರುವ ಅನುದಾನಗಳು ಕೂಡಾ ವಾಪಸ್ ಹೋಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಬಡಗ ಕಜೆಕಾರು ಗ್ರಾಮ ಕುಗ್ರಾಮವಾಗಿದ್ದು ತೀರಾ ಹಿಂದುಳಿದ ಗ್ರಾಮವಾಗಿದೆ. ಪಿಡಿಒ ಇಲ್ಲದೆ ಸಾರ್ವಜನಿಕರ ಕೆಲಸ ಕಾರ್ಯಗಳು ನಡೆಯದಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗ್ರಾಪಂ ಸದಸ್ಯರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಅದೇ ರೀತಿ ಗ್ರಾಪಂನಲ್ಲಿ 9 ತಿಂಗಳಿನಿಂದ ಕಾರ್ಯದರ್ಶಿ ಹುದ್ದೆಯೂ ಖಾಲಿ ಬಿದ್ದಿದೆ. ಇದರಿಂದ ಆಡಳಿತಾತ್ಮಕವಾಗಿ ಹಲವಾರು ಅಡಚಣೆಗಳು ಎದುರಾಗುತ್ತಿದ್ದು ಅತ್ಯಂತ ದಯನೀಯ ಸ್ಥಿತಿಯನ್ನು ಗ್ರಾಮದ ಜನರು ಎದುರು ನೋಡುವಂತಾಗಿದೆ. ಈ ಹಿನ್ನೆಲೆಯಲ್ಲಿ ತಾವು ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲೇ ದಕ್ಷ, ಶಾಶ್ವತ ಪಿಡಿಒ ಹಾಗೂ ಕಾರ್ಯದರ್ಶಿಯನ್ನು ನೇಮಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಮನವಿಯ ಪತ್ರಿಯನ್ನು ರಾಜ್ಯ ಗ್ರಾಮೀಣ ಅಭಿವೃದ್ಧಿ ಸಚಿವ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಜಿಲ್ಲಾ ಮುಖ್ಯ ಕಾರ್ಯದರ್ಶಿಗೆ ರವಾನಿಸಿದ್ದಾರೆ. ಮನವಿ ಸಲ್ಲಿಸುವ ಸಂದಭರ್ದಲ್ಲಿ ಎಸ್‌ಡಿಪಿಐ ಬಂಟ್ವಾಳ ವಿಧಾನಸಬಾ ಕ್ಷೇತ್ರ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಎಸ್.ಎಚ್., ಕಾರ್ಯದರ್ಶಿ ಇಸ್ಮಾಯೀಲ್ ಬಾವ, ಸದಸ್ಯ ಇಸಾಕ್ ತಲಪಾಡಿ, ಬಡಗ ಕಜೆಕಾರು ಗ್ರಾಮ ಸಮಿತಿ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News